15 ವರ್ಷಗಳ ಹಿಂದೆ ಮಂಡ್ಯ ಜಿಲ್ಲೆಯ ಕೊಡಿದೊಡ್ಡಿ ಗ್ರಾಮದ ಯಶ್ ಅಭಿಮಾನಿಯೊಬ್ಬರು ತನ್ನ ಅಂತ್ಯಕ್ರಿಯೆಗೆ ನಟ ಯಶ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಬರಬೇಕೆಂದು ಆಸೆಪಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ ಘಟನೆ ನಡೆದಿತ್ತು. ಆದರೆ ಸಿದ್ದರಾಮಯ್ಯ ಅವರು ಮಾತ್ರ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು. ಆದರೆ ಯಶ್ ಭಾಗಿಯಾಗಿರಲಿಲ್ಲ.
ಈ ವಿಚಾರವಾಗಿ ಖ್ಯಾತ ಪತ್ರಕರ್ತ ರಜತ್ ಶರ್ಮಾ ಅವರು ನಡೆಸಿಕೊಡುವ ಜನಪ್ರಿಯ `ಆಪ್ ಕಿ ಅದಾಲತ್’ ಕಾರ್ಯಕ್ರಮದಲ್ಲಿ ನಟ ಯಶ್ ಅವರನ್ನು ಪ್ರಶ್ನಿಸಲಾಗಿದ್ದು, ಅವರ ನೀಡಿದ ಉತ್ತರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ. ಈ ಬಗ್ಗೆ ಮಾತನಾಡಿದ ನಟ ಯಶ್, ಅಭಿಮಾನಿ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ತೀವ್ರ ಬೇಸರವಿದೆ. ಆದರೆ ತಾನು ಉದ್ದೇಶಪೂರ್ವಕವಾಗಿಯೇ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿರಲಿಲ್ಲ.
ಒಂದು ವೇಳೆ ನಾನು ಆ ಅಂತ್ಯಕ್ರಿಯೆಗೆ ಹೋಗಿದ್ದರೆ ಸಮಾಜಕ್ಕೆ ಮತ್ತು ಇತರರಿಗೆ ಒಂದು ತಪ್ಪಾದ ಸಂದೇಶ ನೀಡಿದಂತಾಗುತ್ತಿತ್ತು. ನಾವು ಹೀಗೆ ಮಾಡಿದರೆ ನಟ ಯಶ್ ಅವರನ್ನು ನಮ್ಮ ಅಂತ್ಯಕ್ರಿಯೆಗೆ ಕರೆಸಿಕೊಳ್ಳಬಹುದು ಎಂಬ ತಪ್ಪು ಅಭಿಪ್ರಾಯ ಯುವಕರ ಮನಸ್ಸಿನಲ್ಲಿ ಮೂಡಬಹುದು. ನನಗದು ಬೇಡವಾಗಿತ್ತು ಎಂದು ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.

ಮುಂದುವರೆದು ಅಭಿಮಾನಿಗಳಿಗೆ ಸಂದೇಶ ನೀಡುತ್ತಾ, ನೀವು ಜೀವನದಲ್ಲಿ ಉತ್ತಮ ಸಾಧನೆ ಮಾಡಿ, ಆ ನಂತರ ನನ್ನನ್ನು ಕರೆದರೆ ನಾನು ಖಂಡಿತವಾಗಿ ನಿಮ್ಮನ್ನು ಭೇಟಿ ಮಾಡಲು ಬರುತ್ತೇನೆ ಮತ್ತು ನಿಮ್ಮ ಸಾಧನೆಯ ಬಗ್ಗೆ ಹೆಮ್ಮೆಪಡುತ್ತೇನೆ. ಆದರೆ ಇಂತಹ ಕಠೋರ ಹಾಗೂ ನೋವಿನ ನಿರ್ಧಾರಗಳನ್ನು ತೆಗೆದುಕೊಂಡು ಕರೆದರೆ ನಾನು ಹೇಗೆ ಬರಲು ಸಾಧ್ಯ? ಅಭಿಮಾನಿಗಳೆಂದರೆ ನನಗೆ ಅಪಾರ ಪ್ರೀತಿ ಇದೆ, ಬಿಡುವು ಮಾಡಿಕೊಂಡು ಅವರನ್ನು ಭೇಟಿಯಾಗುತ್ತೇನೆ ಹಾಗೂ ಪ್ರತಿಯೊಬ್ಬರ ಜೊತೆಯೂ ಫೋಟೋಗಳನ್ನು ತೆಗೆಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಇದೇ ವೇಳೆ ಸಂದರ್ಶನದ ಅನುಭವವನ್ನು ಹಂಚಿಕೊಂಡ ರಜತ್ ಶರ್ಮಾ, ಯಶ್ ಕಾರ್ಯಕ್ರಮಕ್ಕೆ ಆಗಮಿಸಿದ್ದ ಪ್ರತಿಯೊಬ್ಬರ ಜೊತೆಯೂ ಅತ್ಯಂತ ತಾಳ್ಮೆಯಿಂದ ಫೋಟೋ ತೆಗೆಸಿಕೊಂಡರು. ಅವರಂಥಾ ವಿನಯಶೀಲ ಮತ್ತು ಸರಳ ಸೂಪರ್‌ಸ್ಟಾರ್ ಅನ್ನು ನಾನು ಇದುವರೆಗೆ ನೋಡಿಲ್ಲ ಎಂದು ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ. ಇದನ್ನೂ ಓದಿ : ಕೆಆರ್‌ಎಸ್ ಡ್ಯಾಂನಿಂದ ತಮಿಳುನಾಡಿಗೆ ಹರಿದ ಕಾವೇರಿ ನೀರು
