ಇಂಡೋನೇಷ್ಯಾ : ಇಂಡೋನೇಷ್ಯಾದಲ್ಲಿ ಸಂಭವಿಸಿದ 7.7 ತೀವ್ರತೆಯ ಭೀಕರ ಭೂಕಂಪಕ್ಕೆ ಬಲಿಯಾದವರ ಸಂಖ್ಯೆ 38ಕ್ಕೆ ಏರಿಕೆಯಾಗಿದೆ. ಇಂದು ಮುಂಜಾನೆ ಉಂಟಾದ ಈ ಪ್ರಬಲ ಭೂಕಂಪದ ಕುರಿತು ಸ್ಥಳೀಯ ರಕ್ಷಣಾ ಸಂಸ್ಥೆಯನ್ನು ಉಲ್ಲೇಖಿಸಿ ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಸಮುದ್ರದಾಳದಲ್ಲಿ ಸಂಭವಿಸಿದ ಈ ಭೂಕಂಪದ ನಂತರ ಆಗ್ನೇಯ ಏಷ್ಯಾದ ಇಂಡೋನೇಷ್ಯಾ ದೇಶದ ಹಲವು ಭಾಗಗಳಲ್ಲಿ ಸುನಾಮಿ ಅಲೆಗಳು ಕಂಡುಬಂದವು.
ಬಂದರು ನಗರಿ ಮಾಉಮೇರೆಯಲ್ಲಿ ರಕ್ಷಣಾ ಸಿಬ್ಬಂದಿ 38 ಶವಗಳನ್ನು ಹೊರಗೆ ತಂದಿದ್ದಾರೆ ಎಂದು ಎಎಫ್‌ಪಿ ವರದಿ ಮಾಡಿದೆ. ಜೊತೆಗೆ 13 ಜನರು ಗಾಯಗೊಂಡಿದ್ದು, ಕಟ್ಟಡದ ಅವಶೇಷಗಳ ಅಡಿಯಲ್ಲಿ ಇಬ್ಬರು ಸಿಲುಕಿಕೊಂಡಿದ್ದಾರೆ. ಮಾಉಮೇರೆಯು ಪೂರ್ವ ಇಂಡೋನೇಷ್ಯಾದ ಫ್ಲೋರೆಸ್ ದ್ವೀಪದಲ್ಲಿರುವ ಸಿಕ್ಕಾ ರೇಜೆನ್ಸಿಯ ಪ್ರಮುಖ ಪಟ್ಟಣವಾಗಿದೆ.
ಭೂಕಂಪದ ಕೇಂದ್ರಬಿಂದುವಿಗೆ ಅತ್ಯಂತ ಹತ್ತಿರದಲ್ಲಿದ್ದ ನಗೆಕಿಯೊ ಪ್ರದೇಶದಲ್ಲಿ ಸಂಪರ್ಕ ವ್ಯವಸ್ಥೆ ಸಂಪೂರ್ಣವಾಗಿ ಕಡಿತಗೊಂಡಿರುವುದರಿಂದ ರಕ್ಷಣಾ ತಂಡಗಳಿಗೆ ಆ ಸ್ಥಳವನ್ನು ತಲುಪಲು ಸಾಧ್ಯವಾಗಿಲ್ಲ. ಭೂಕುಸಿತದಿಂದಾಗಿ ರಸ್ತೆ ಸಂಚಾರ ಬಂದ್ ಆಗಿದ್ದು, ಮತ್ತೊಂದು ರಕ್ಷಣಾ ತಂಡವು ದೋಣಿಯ ಮೂಲಕ ಆ ಪ್ರದೇಶವನ್ನು ತಲುಪಲು ಯತ್ನಿಸುತ್ತಿದೆ. ನಗೆಕಿಯೊ ಪ್ರದೇಶದಲ್ಲಿ ಸುಮಾರು 2,000 ಜನರು ತಮ್ಮ ಮನೆಗಳನ್ನು ತೊರೆದು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಂಡಿದ್ದಾರೆ. ಹಾಗೆಯೇ ಹಲವಾರು ಮನೆಗಳು, ಗೋದಾಮುಗಳು ಮತ್ತು ಸರ್ಕಾರಿ ಕಟ್ಟಡಗಳು ಹಾನಿಗೊಳಗಾಗಿವೆ. ಇದನ್ನೂ ಓದಿ : ಗುಟ್ಕಾ, ಪಾನ್ ಮಸಾಲ ನಿಷೇಧ ವಾಪಸ್ ಪಡೆದಿಲ್ಲ – ಯು.ಟಿ.ಖಾದರ್
