29.2 C
ಬೆಂಗಳೂರು
June 15, 2026
kranthikidi.com
ತಾಜಾಸುದ್ದಿಸಿನಿಮಾ

‘ಒಳ್ಳೆತನದ ಮುಖವಾಡ ಧರಿಸಿದ್ದ ದೀಪಿಕಾ’ – ಹೇಳಿಕೆಗೆ ಕ್ಷಮೆ ಕೇಳಿದ ನಿರ್ದೇಶಕ

ಬಾಲಿವುಡ್‌ನ ಖ್ಯಾತ ನಟಿ ದೀಪಿಕಾ ಪಡುಕೋಣೆ ಅವರ ‘ಒಳ್ಳೆಯ ಹುಡುಗಿ ಇಮೇಜ್ ಕೇವಲ ಒಂದು ಮುಖವಾಡ ಆಗಿತ್ತು’ ಎಂದು ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿದ್ದ ಖ್ಯಾತ ನಿರ್ದೇಶಕ ಇಮ್ತಿಯಾಜ್ ಅಲಿ, ಈಗ ತಮ್ಮ ಹೇಳಿಕೆಗೆ ಸ್ಪಷ್ಟನೆ ಹಾಗೂ ಕ್ಷಮೆಯಾಚನೆ ಮಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ದೀಪಿಕಾ ಅವರಿಗಾಗಿ ಒಂದು ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಇಮ್ತಿಯಾಜ್, ತಮ್ಮ ಹೇಳಿಕೆ ಕೇವಲ ತಮಾಷೆಗಾಗಿ ಎಂದು ಹೇಳಿದ್ದಾರೆ. ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಇಮ್ತಿಯಾಜ್ ಅಲಿ ಅವರು ದೀಪಿಕಾ ಪಡುಕೋಣೆ ಅವರ ಆಫ್-ಸ್ಕ್ರೀನ್ ಇಮೇಜ್ ಮತ್ತು 2012ರ ಸೂಪರ್ ಹಿಟ್ ಸಿನಿಮಾ ‘ಕಾಕ್‌ಟೇಲ್’ ಬಗ್ಗೆ ಮಾತನಾಡಿದ್ದರು.

‘ಆ ಸಮಯದಲ್ಲಿ ದೀಪಿಕಾ ಹೊಂದಿದ್ದ ಇಮೇಜ್‌ಗೂ ಕಾಕ್‌ಟೇಲ್ ಚಿತ್ರದ ವೆರೋನಿಕಾ ಪಾತ್ರಕ್ಕೂ ತೀರಾ ವ್ಯತ್ಯಾಸವಿತ್ತು. ನಾನು ಅವರೊಂದಿಗೆ ಪಾರ್ಟಿಗಳಲ್ಲಿ ಭಾಗವಹಿಸಿದ್ದರಿಂದ, ಅವರು ಎಷ್ಟರಮಟ್ಟಿಗೆ ಕ್ರೇಜಿ ಮತ್ತು ವೈಲ್ಡ್ ಆಗಿರಬಲ್ಲರು ಎಂಬುದು ನನಗೆ ಗೊತ್ತಿತ್ತು. ಹೊರಗಡೆ ಅವರು ತುಂಬಾ ಒಳ್ಳೆಯ ಹುಡುಗಿ ರೀತಿ ಇಮೇಜ್ ಪ್ರೊಜೆಕ್ಟ್ ಮಾಡುತ್ತಿದ್ದರೂ, ಅವರ ಅಸಲಿ ಮುಖ ಏನೆಂಬುದು ನನಗೆ ತಿಳಿದಿತ್ತು’ ಎಂದಿದ್ದರು ಇಮ್ತಿಯಾಜ್ ಅಲಿ.

‘ಈಗ ಜನರು ದೀಪಿಕಾ ಪಡುಕೋಣೆ ಅವರ ಆ ಮುಖವಾಡವನ್ನು ನೋಡಿದ್ದಾರೆ. ಹಾಗಾಗಿ ದೀಪಿಕಾಗೆ ಆ ಪಾತ್ರ ಹೊಸದಾಗಿರುತ್ತದೆ ಮತ್ತು ಅವರಲ್ಲಿನ ಎಮೋಷನಲ್ ಆಯಾಮವನ್ನು ಹೊರತರಬಹುದು ಎಂದು ನಾನು ಭಾವಿಸಿದ್ದೆ’ ಎಂದು ಇಮ್ತಿಯಾಜ್ ಹೇಳಿದ್ದರು. ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿತ್ತು. ಅದಕ್ಕೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ನನ್ನ ಅತ್ಯಂತ ಪ್ರೀತಿಯ ದೀಪಿಕಾ, ನೀನು ನನ್ನ ಆತ್ಮೀಯ ಗೆಳತಿ. ನನ್ನ ಜೋಕ್‌ಗಳಿಗೆ ನೀನೇ ಸುರಕ್ಷಿತ ಆಯ್ಕೆ. ನಾನು ಕೇವಲ ತಮಾಷೆಗಾಗಿ ಮಾಡಿದ ಈ ಕಮೆಂಟ್‌ ಅನ್ನು ನೀನು ಖಂಡಿತವಾಗಿಯೂ ತಪ್ಪಾಗಿ ಅರ್ಥೈಸಿಕೊಳ್ಳುವುದಿಲ್ಲ ಎಂದು ನಂಬಿದ್ದೇನೆ. ಯಾಕೆಂದರೆ ನಾನು ನಿನ್ನನ್ನು ಎಷ್ಟು ಪ್ರೀತಿಸುತ್ತೇನೆ, ಗೌರವಿಸುತ್ತೇನೆ ಮತ್ತು ಪ್ರಶಂಸಿಸುತ್ತೇನೆ ಎಂಬುದು ನಿನಗಿಂತ ಚೆನ್ನಾಗಿ ಬೇರೆ ಯಾರಿಗೂ ಗೊತ್ತಿಲ್ಲ. ಆದರೆ ಕೆಲವರು ನೀನು ಈ ಹೇಳಿಕೆಯಿಂದ ಬೇಸರ ಮಾಡಿಕೊಳ್ಳಬಹುದು ಎಂದು ನನಗೆ ಹೇಳಿದರು, ಹಾಗಾಗಿ ದಯವಿಟ್ಟು ಬೇಸರ ಮಾಡಿಕೊಳ್ಳಬೇಡ. ನಿನಗೆ ನೋವು ಉಂಟುಮಾಡುವುದು ಈ ಜನ್ಮದಲ್ಲಂತೂ ನನ್ನಿಂದ ಸಾಧ್ಯವಿಲ್ಲ ’ ಎಂದು ಬರೆದುಕೊಂಡಿದ್ದಾರೆ.

ಮುಂದುವರಿದು, ‘ನಾನು ನಿನಗೆ ಇಂತಹದೊಂದು ಸ್ಪಷ್ಟನೆ ನೀಡಬೇಕಾಗುತ್ತದೆ ಅಂತ ಯಾವತ್ತೂ ಯೋಚಿಸಿರಲಿಲ್ಲ. ಆದರೆ ವಿಷಯಗಳನ್ನು ಹಾಗೇ ಬಿಟ್ಟು ರಿಸ್ಕ್ ತೆಗೆದುಕೊಳ್ಳಲು ನನಗೆ ಇಷ್ಟವಿರಲಿಲ್ಲ. ನಿನಗೆ ಯಾವಾಗಲೂ ನನ್ನ ಪ್ರೀತಿ ಇರಲಿದೆ’ ಎಂದು ಇಮ್ತಿಯಾಜ್ ತಿಳಿಸಿದ್ದಾರೆ. ದೀಪಿಕಾ ಪಡುಕೋಣೆ ಮತ್ತು ಇಮ್ತಿಯಾಜ್ ಅಲಿ ಕಾಂಬಿನೇಷನ್‌ನಲ್ಲಿ ಈ ಹಿಂದೆ 2009ರ ರೊಮ್ಯಾಂಟಿಕ್ ಸಿನಿಮಾ ‘ಲವ್ ಆಜ್ ಕಲ್’ ಮೂಡಿಬಂದಿತ್ತು. ಇದಾದ ಬಳಿಕ 2015ರಲ್ಲಿ ರಣಬೀರ್ ಕಪೂರ್ ನಟನೆಯ ‘ತಮಾಷಾ’ ಚಿತ್ರದಲ್ಲೂ ಇವರಿಬ್ಬರು ಒಟ್ಟಿಗೆ ಕೆಲಸ ಮಾಡಿದ್ದರು.

ಈಗ ದಿಲ್ಜಿತ್ ದೋಸಾಂಜ್, ಶರ್ವರಿ, ವೇದಾಂತ್ ರೈನಾ ಮತ್ತು ನಸೀರುದ್ದೀನ್ ಶಾ ನಟನೆಯ ‘ಮೈ ವಾಪಸ್ ಆವುಂಗಾ’ ಸಿನಿಮಾಗೆ ಇಮ್ತಿಯಾಜ್ ಅಲಿ ಅವರು ನಿರ್ದೇಶನ ಮಾಡಿದ್ದಾರೆ. ಜೂನ್ 12ರಂದು ಈ ಸಿನಿಮಾ ತೆರೆಕಾಣಲಿದೆ. ಇತ್ತ, ದೀಪಿಕಾ ಪಡುಕೋಣೆ ಅವರು ಶಾರುಖ್ ಖಾನ್ ಜೊತೆ ‘ಕಿಂಗ್’ ಹಾಗೂ ಅಲ್ಲು ಅರ್ಜುನ್ ಜೊತೆ ‘ರಾಕಾ’ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

Related posts

ತ್ವಿಶಾ ಶರ್ಮಾ ಸಾವು ಕೇಸ್‌; ನಟಿಯ ಅತ್ತೆ & ನಿವೃತ್ತ ಜಡ್ಜ್‌ ಅರೆಸ್ಟ್‌…!

Kalpana Editor

ಶಿವಂ ಅಸೋಸಿಯೇಟ್ಸ್ ವಂಚನೆ ಪ್ರಕರಣ; ಸ್ಯಾಂಡಲ್‌ವುಡ್ ಸ್ಟಾರ್ಸ್‌ಗೆ ಸಿಐಡಿ ಶಾಕ್..!

Kalpana Editor

RCB ಅಭಿಮಾನಿಗಳಿಗೆ ಉಚಿತ ಮೆಟ್ರೋ ಪ್ರಯಾಣವಿಲ್ಲ: ಫೇಕ್ ಪೋಸ್ಟ್‌ ವಿರುದ್ಧ BMRCL ಎಚ್ಚರಿಕೆ..!

Kalpana Editor