28.9 C
ಬೆಂಗಳೂರು
June 10, 2026
kranthikidi.com
ತಾಜಾಸುದ್ದಿರಾಜ್ಯ

ವಿಶಾಖಪಟ್ಟಣ ಉಕ್ಕು ಕಾರ್ಖಾನೆಯಲ್ಲಿ ಅವಘಡ; ಸ್ವತಂತ್ರ ತನಿಖೆಗೆ ಆದೇಶಿಸಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ

ವಿಶಾಖಪಟ್ಟಣ : ವಿಶಾಖ ಉಕ್ಕು ಕಾರ್ಖಾನೆಯಲ್ಲಿ ಸಂಭವಿಸಿದ ಅವಘಡದಲ್ಲಿ ಹಲವು ಕಾರ್ಮಿಕರು ಸಾವನ್ನಪ್ಪಿದ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿ ಬಂದ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು, ದುರಂತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿ ವಿಸೃತವಾಗಿ ಪರಿಶೀಲನೆ ನಡೆಸಿದರು.

ದುರಂತದ ಮಾಹಿತಿ ತಿಳಿಯುತ್ತಿದ್ದಂತೆ ಬೆಂಗಳೂರಿನಿಂದ ವಿಶಾಖಪಟ್ಟಣಕ್ಕೆ ಧಾವಿಸಿದ ಸಚಿವರು, ವಿಮಾನ ನಿಲ್ದಾಣದಿಂದ ನೇರವಾಗಿ ದುರ್ಘಟನೆ ಸಂಭವಿಸಿದ ಸ್ಥಳಕ್ಕೆ ತೆರಳಿದರು. ಉಕ್ಕು ಕರಗಿಸುವ ಘಟಕದಲ್ಲಿನ ಉಷ್ಣ ನಿರೋಧಕ ದ್ರವರೂಪದ ಕೊಳಗದಿಂದ ದ್ರವರೂಪದ ಲೋಹ ಸೋರಿಕೆಯಾದ ಹಿನ್ನೆಲೆಯಲ್ಲಿ ಸ್ಪೋಟ ಸಂಭವಿಸಿ ದುರಂತ ಘಟಿಸಿರಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದು, ಈ ಬಗ್ಗೆ ಸಚಿವ ಕುಮಾರಸ್ವಾಮಿ ಅವರಿಗೆ ವಿವರಣೆ ನೀಡಿದರು.

ದುರಂತ ನಡೆದ ಸ್ಥಳವನ್ನು ಕೂಲಂಕುಷವಾಗಿ ಪರಿಶೀಲನೆ ನಡೆಸಿದ ಕೇಂದ್ರದ ಉಕ್ಕು ಸಚಿವರು; ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿದರು. ಅಲ್ಲದೆ, ದುರಂತದಲ್ಲಿ ಸಾವನ್ನಪ್ಪಿದ ಕಾರ್ಮಿಕರ ಬಗ್ಗೆ ಹಾಗೂ ದುರಂತಕ್ಕೆ ಕಾರಣವಾದ ಅಂಶಗಳ ಬಗ್ಗೆ ತಕ್ಷಣವೇ ವರದಿ ನೀಡುವಂತೆ ಕಾರ್ಖಾನೆಯ ಆಡಳಿತ ಮಂಡಳಿಗೆ ಸಚಿವ ಕುಮಾರಸ್ವಾಮಿ ಅವರು ಸೂಚನೆ ನೀಡಿದರು.

ತಲಾ ₹25 ಲಕ್ಷ ಪರಿಹಾರ ಪ್ಯಾಕೇಜ್ ಘೋಷಿಸಿದ ಹೆಚ್ಡಿಕೆ : ದುರಂತದಲ್ಲಿ ಮೃತಪಟ್ಟ ಕುಟುಂಬ ಸದಸ್ಯರಲ್ಲಿ ಒಬ್ಬರಿಗೆ ಉದ್ಯೋಗ ಮತ್ತು ಅವರಿಗೆ ದೊರೆಯುವ ಪ್ರಯೋಜನಗಳ ಜತೆಗೆ ₹25 ಲಕ್ಷ ಪರಿಹಾರವನ್ನು ನೀಡಲಾಗುವುದು. ತೀವ್ರವಾಗಿ ಗಾಯಗೊಂಡ ಕಾರ್ಮಿಕರಿಗೆ ₹10 ಲಕ್ಷ ಪರಿಹಾರ ನೀಡಲಾಗುವುದು. ಅಲ್ಲದೆ ಗಾಯಾಳುಗಳ ವೈದ್ಯಕೀಯ ವೆಚ್ಚವನ್ನು ಸಂಪೂರ್ಣವಾಗಿ ಕಾರ್ಖಾನೆಗೆ ಭರಿಸಲಿದೆ ಎಂದು ಸಚಿವರು ಘೋಷಿಸಿದರು.

ಜತೆಗೆ, ಮೃತರ ಕುಟುಂಬ ಸದಸ್ಯರು ಮೃತರ ನಿವೃತ್ತಿಯ ದಿನಾಂಕದವರೆಗೆ ಸ್ಟೀಲ್ ಪ್ಲಾಂಟ್ ಟೌನ್‌ಶಿಪ್‌ನಲ್ಲಿ ತಮ್ಮ ವಸತಿ ಗೃಹಗಳಲ್ಲಿ ವಾಸಿಸಲು ಅನುಮತಿಸಲಾಗಿದೆ. ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಲಾಗಿದೆ. ಹಾಗೆಯೇ, ಮೃತ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸದ ವೆಚ್ಚವನ್ನು ಕಾರ್ಖಾನೆ ಭರಿಸಲಿದೆ ಎಂದು ಸಚಿವರು ಹೇಳಿದರು. ಇದನ್ನೂ ಓದಿ : ಸಿಎಂ ಡಿ.ಕೆ.ಶಿ. ನಾಯಕತ್ವವನ್ನು ಕಾಂಗ್ರೆಸ್‌ನಲ್ಲಿ ಸಂಪೂರ್ಣ ಒಪ್ಪಿಕೊಂಡಿಲ್ಲ – ಬಸವರಾಜ ಬೊಮ್ಮಾಯಿ

ರಾತ್ರಿ ಒಂದುವರೆವರೆಗೂ ಆಸ್ಪತ್ರೆಯಲ್ಲೇ ಇದ್ದ ಸಚಿವರು – ದುರ್ಘಟನೆಯ ವಿಷಯ ತಿಳಿಯುತ್ತಿದ್ದಂತೆಯೇ ಬೆಂಗಳೂರಿನಿಂದ ವಿಶಾಖ ಕಾರ್ಖಾನೆಗೆ ಧಾವಿಸಿಬಂದ ಸಚಿವರು, ದುರ್ಘಟನಾ ಸ್ಥಳ ಪರಿಶೀಲಿಸಿದ ನಂತರ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದರು. ನಂತರ ಮೃತ ಕಾರ್ಮಿಕರ ಕುಟುಂಬಗಳ ಸದಸ್ಯರನ್ನು ಭೇಟಿಯಾಗಿ ಸಾಂತ್ವನ ಹೇಳಿದರು.

ಮೃತಪಟ್ಟ ಕಾರ್ಮಿಕರ ಕುಟುಂಬಗಳಿಗೆ ₹25 ಲಕ್ಷ ಹಾಗೂ ಗಾಯಾಳುಗಳಿಗೆ ₹10 ಲಕ್ಷ ಪರಿಹಾರ ಘೋಷಿಸಲಾಗಿದೆ. ಅಲ್ಲದೆ, ಮೃತ ಕಾರ್ಮಿಕರ ಪ್ರತಿ ಕುಟುಂಬ ಅರ್ಹ ಸದಸ್ಯರಿಗೆ ಕಾರ್ಖಾನೆಯಲ್ಲಿ ಉದ್ಯೋಗವನ್ನೂ ಸಹ ನೀಡಲಾಗುವುದು. ಗಾಯಗೊಂಡವರ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಕಾರ್ಖಾನೆ ಭರಿಸುತ್ತದೆ. ಮೃತ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಸರ್ವ ನೆರವನ್ನು ನೀಡಲಾಗುವುದು. ಈ ದುರ್ಘಟನೆ ಬಗ್ಗೆ ನನಗೆ ತೀವ್ರ ಆಘಾತ ಉಂಟಾಗಿದೆ. ದುರಂತದ ಕಾರಣವನ್ನು ಪತ್ತೆ ಹಚ್ಚಲು ಸ್ವತಂತ್ರ ತನಿಖೆಗೆ ಆದೇಶಿಸಲಾಗಿದೆ.

Related posts

ರಾಷ್ಟ್ರ ಪ್ರಶಸ್ತಿ ಸಿಕ್ಕರೂ ನನಗೆ ಕೆಲಸ ಸಿಗಲಿಲ್ಲ – ಸತ್ಯ ತೆರೆದಿಟ್ಟ ನಟಿ ಕಂಗನಾ

Kalpana Editor

ಮಗನ ಸನಾತನ ವಿವಾದದ ಬೆನ್ನಲ್ಲೇ ನಿಮಿಷಾಂಬಾ ದೇಗುಲದಲ್ಲಿ ವಿಶೇಷ ಪೂಜೆ – ದುರ್ಗಾ ಸ್ಟಾಲಿನ್

Kalpana Editor

ಶಾಲೆ ಆರಂಭಕ್ಕೆ ಕೌಂಟ್ ಡೌನ್; ಶಿಕ್ಷಣ ಇಲಾಖೆಯಿಂದ ಹೊಸ ಗೈಡ್​ಲೈನ್ಸ್​​​​​​​..!

Kalpana Editor