ಬೆಂಗಳೂರು : ಕಾಂಗ್ರೆಸ್ ಸರ್ಕಾರ ಕಮಿಶನ್ ವಸೂಲಿ ಮಾಡಲು ಟೆಂಡರ್ ನಿಯಮಗಳನ್ನು ಉಲ್ಲಂಘಿಸಿ ಕಸ ಸಂಸ್ಕರಣೆಯ ಟೆಂಡರ್ ನೀಡುತ್ತಿದೆ. ಇದರ ವಿರುದ್ಧ ಲೋಕಾಯುಕ್ತರಿಗೆ ದೂರು ನೀಡಲಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು. ಲೋಕಾಯುಕ್ತ ಕಚೇರಿಗೆ ತೆರಳಿ, ಲೋಕಾಯುಕ್ತ ರಿಜಿಸ್ಟ್ರಾರ್‌ಗೆ ದೂರು ಸಲ್ಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಬೆಂಗಳೂರು ಘನತ್ಯಾಜ್ಯ ವಿಲೇವಾರಿ ಟೆಂಡರ್‌ನಲ್ಲಿ 39,437 ಕೋಟಿ ರೂ. ಅಕ್ರಮಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಸಂಸ್ಥೆಗೆ ದೂರು ಸಲ್ಲಿಸಿ ಚರ್ಚಿಸಲಾಗಿದೆ. ಲೋಕಾಯುಕ್ತರು ಕೂಡಲೇ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಕಸದ ಸಮಸ್ಯೆಗೆ ಸಂಬಂಧಿಸಿದಂತೆ ಲೋಕಾಯುಕ್ತ ಕಚೇರಿಯಲ್ಲಿ ಇದೇ ದಿನ ಸಭೆ ಕೂಡ ನಡೆದಿದೆ.
ಈ ಅಕ್ರಮದಲ್ಲಿ ಕಾಂಗ್ರೆಸ್ ನಾಯಕರು ಕಿಕ್‌ಬ್ಯಾಕ್ ಪಡೆದಿದ್ದಾರೆ. ಇದರಲ್ಲಿ ಎರಡು ಸಮಿತಿಗಳನ್ನು ರಚಿಸಿದ್ದರೂ ಆ ಸಮಿತಿಗಳ ಸಲಹೆಗಳನ್ನು ಕೇಳಿಲ್ಲ. ಗುತ್ತಿಗೆದಾರರಿಗೆ ಅನುಕೂಲವಾಗುವಂತೆ ಹೆಚ್ಚು ಹಣವನ್ನು ನೀಡಲಾಗುತ್ತಿದೆ ಹಾಗೂ 30 ವರ್ಷಗಳ ಅವಧಿಗೆ ಗುತ್ತಿಗೆ ನೀಡಲಾಗುತ್ತಿದೆ. ಕೇಂದ್ರ ಹಾಗೂ ಕರ್ನಾಟಕ ಕಾಂಗ್ರೆಸ್ ಜಂಟಿಯಾಗಿ ಈ ಭ್ರಷ್ಟಾಚಾರ ಮಾಡುತ್ತಿದೆ. ಈ ಅಕ್ರಮದಿಂದಾಗಿ ಬೆಂಗಳೂರಿನ ಜನರ ತೆರಿಗೆ ಹಣ ಲೂಟಿಯಾಗಿದೆ. ಇದನ್ನೂ ಓದಿ : ಭಾರತೀಯ ಸಿಬ್ಬಂದಿ ಇದ್ದ, ಹಡಗಿನ ಮೇಲೆ ಅಮೆರಿಕ ದಾಳಿ; ಭಾರತ ತೀವ್ರ ಖಂಡನೆ..!
ಇದನ್ನು ವಿಧಾನಸಭೆಯಲ್ಲೂ ಪ್ರಸ್ತಾಪಿಸಿ ಹೋರಾಟ ಮಾಡಲಾಗುವುದು. ಕರ್ನಾಟಕವನ್ನು ಕಾಂಗ್ರೆಸ್ ಹೈಕಮಾಂಡ್ ಎಟಿಎಂ ಮಾಡಿಕೊಂಡಿದೆ. ಮುಖ್ಯಮಮಂತ್ರಿಗಳೇ ಇದಕ್ಕೆ ಆತುರದಿಂದ ಸಹಿ ಹಾಕಿದ್ದಾರೆ. ಒಂದು ಕಂಪನಿಯ ಪರವಾಗಿ ಸರ್ಕಾರ ಕೆಲಸ ಮಾಡಿರುವುದು ಸ್ಪಷ್ಟವಾಗಿದೆ. ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾದ ಒಂದು ವಾರದಲ್ಲೇ ಅತಿ ದೊಡ್ಡ ಹಗರಣ ಬಯಲಿಗೆ ಬಂದಿದೆ ಎಂದು ದೂರಿದರು.
