ಮೈಸೂರು : ದಕ್ಷಿಣ ಭಾರತದ ಖ್ಯಾತ ಗಾಯಕಿ, ಗಾನಕೋಗಿಲೆ ಎಸ್.ಜಾನಕಿ ಅವರ ಅಂತ್ಯಕ್ರಿಯೆಯು ಸಕಲ ಸರ್ಕಾರಿ ಗೌರವಗಳೊಂದಿಗೆ, ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ಮೈಸೂರಿನ ಕಣಿಯನಹುಂಡಿಯ ತೋಟದಲ್ಲಿ ಇಂದು ನೆರವೇರಿತು.
ಕಳೆದ ನಾಲ್ಕು ವರ್ಷಗಳ ಹಿಂದೆ ಕಣಿಯನಹುಂಡಿಯಲ್ಲಿ ಎಸ್.ಜಾನಕಿ ಅವರು 2 ಎಕರೆ ಜಮೀನು ಖರೀದಿಸಿದ್ದರು. ತಮ್ಮ ಅಂತ್ಯಕ್ರಿಯೆ ಇದೇ ಜಾಗದಲ್ಲಿ ಆಗಬೇಕು ಎಂದು ಜಾನಕಿ ಅವರು ಇಚ್ಛಿಸಿದ್ದರು. ಅದರಂತೆ ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ಅವರ ಅಂತ್ಯಕ್ರಿಯೆ ನೆರವೇರಿತು. ಅಂತ್ಯಸಂಸ್ಕಾರ ವೇಳೆ 3 ಸುತ್ತು ಕುಶಾಲತೋಪು ಸಿಡಿಸಿ ಸರ್ಕಾರಿ ಗೌರವ ಸಲ್ಲಿಸಲಾಯಿತು. ಇತ್ತೀಚೆಗೆ ಜಾನಕಮ್ಮ ಅವರ ಪುತ್ರ ನಿಧನರಾಗಿದ್ದರು. ಈ ಹಿನ್ನೆಲೆಯಲ್ಲಿ ಪುತ್ರನ ಮಗಳು, ಜಾನಕಿ ಅವರ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.
ಶಾಶ್ವತಿ ಕ್ರಿಯಾ ಸಮಿತಿ ವತಿಯಿಂದ ಆಗಮಿಕ ರಮೇಶ್ ಶರ್ಮ ನೇತೃತ್ವದಲ್ಲಿ ಅಂತಿಮ ವಿಧಿವಿಧಾನಗಳು ನೆರವೇರಿದವು. ಮೊದಲಿಗೆ ಪಂಚಗವ್ಯದಿಂದ ದೇಹ ಶುದ್ದೀಕರಣ ಮಾಡಲಾಯಿತು. ಬಳಿಕ ಬ್ರಾಹ್ಮಣ ಸಂಪ್ರದಾಯದ ವಿಧಿವಿಧಾನಗಳು ನಡೆದವು. ಕಾಡು ಕಟ್ಟಿಗೆಗಳ ಜೊತೆಗೆ ಗಂಧ ಮತ್ತು ತುಳಸಿ ಕಟ್ಟಿಯಿಂದ ಚಿತೆ ನಿರ್ಮಾಣ ಮಾಡಲಾಗಿತ್ತು. ಸೂರ್ಯಾಸ್ತದ ಮುನ್ನ ಅಗ್ನಿಸ್ಪರ್ಶ ಮಾಡಲಾಯಿತು.
ಎಸ್.ಜಾನಕಿ ಅಂತ್ಯಸಂಸ್ಕಾರದ ವೇಳೆ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸ್ಥಳದಲ್ಲಿ ಜಮಾಯಿಸಿದ್ದರು. ನಟ-ನಟಿಯರು, ಸಚಿವರು, ಶಾಸಕರು, ಗಣ್ಯರು, ಪೊಲೀಸರು, ಜಾನಕಮ್ಮನವರ ಕುಟುಂಬಸ್ಥರು ಗಾಯಕಿಗೆ ಅಂತಿಮ ನಮನ ಸಲ್ಲಿಸಿದರು. ಬಳಿಕ ಅಂತ್ಯಸಂಸ್ಕಾರ ನಡೆಯಿತು. ಅಂತ್ಯಸಂಸ್ಕಾರ ನಡೆಯುವ ಸ್ಥಳದಲ್ಲಿ 200 ಜನ ಪೊಲೀಸರು, 2 ಕೆಎಸ್‌ಆರ್‌ಪಿ ಸಿಬ್ಬಂದಿ ನಿಯೋಜಿಸಲಾಗಿತ್ತು. ವಿವಿಐಪಿ ಹಾಗೂ ಸಾರ್ವಜನಿಕರಿಗೂ ಕೂಡ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಎಸ್.ಜಾನಕಿ ಅವರು ಶನಿವಾರ ರಾತ್ರಿ ಮೈಸೂರಿನ ಅಪೊಲೊ ಆಸ್ಪತ್ರೆಯಲ್ಲಿ ನಿಧನರಾದರು. ಖ್ಯಾತ ಗಾಯಕಿ ನಿಧನಕ್ಕೆ ಸೆಲೆಬ್ರಿಟಿಗಳು, ರಾಜಕೀಯ ನಾಯಕರು, ಗಣ್ಯರು, ಅಭಿಮಾನಿ ವರ್ಗ ಕಂಬನಿ ಮಿಡಿಯಿತು. ಭಾನುವಾರ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಎಸ್.ಜಾನಕಿ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸಂಜೆ ವೇಳೆಗೆ ಗಾಯಕಿಯ ಅಂತ್ಯಕ್ರಿಯೆ ನೆರವೇರಿತು. ಇದನ್ನೂ ಓದಿ : ನಾಳೆಯಿಂದ (ಜು.13) ಬರಪೀಡಿತ ಪ್ರದೇಶಗಳಿಗೆ ನಿಖಿಲ್ ಕುಮಾರಸ್ವಾಮಿ ಭೇಟಿ..!
