July 22, 2026
kranthikidi.com
ತಾಜಾಸುದ್ದಿರಾಜ್ಯ

17ರಂದು ಫ್ರೀಡಂ ಪಾರ್ಕಿನಲ್ಲಿ ಬಿಜೆಪಿ ಜನಪ್ರತಿನಿಧಿಗಳ ಧರಣಿ, ರಿಯಲ್ ಎಸ್ಟೇಟ್ ಆದ್ಯತೆಯ ಸಿಎಂ – ವಿಜಯೇಂದ್ರ

ಬಳ್ಳಾರಿ : ರಾಜ್ಯದಲ್ಲಿ ರೈತವಿರೋಧಿ, ಬಡವರ ವಿರೋಧಿ, ಹಿಂದೂ ವಿರೋಧಿ ಕಾಂಗ್ರೆಸ್ ಸರಕಾರ ಆಡಳಿತ ನಡೆಸುತ್ತಿದೆ ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಆರೋಪಿಸಿದ್ದಾರೆ. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇದೇ 17ರಂದು ಶುಕ್ರವಾರ ಬೆಳಿಗ್ಗೆಯಿಂದ ಸಂಜೆವರೆಗೆ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಬಿಜೆಪಿಯ ಎಲ್ಲ ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರು, ಮಾಜಿ ಶಾಸಕರು, ವಿಧಾನಪರಿಷತ್ ಮಾಜಿ ಸದಸ್ಯರು ಧರಣಿ ಹಮ್ಮಿಕೊಳ್ಳಲಿದ್ದೇವೆ. ರೈತರ ವಿರುದ್ಧ ದಾಖಲಿಸಿದ ಪ್ರಕರಣಗಳನ್ನು ಹಿಂಪಡೆಯಲು ಆಗ್ರಹಿಸಲಾಗುವುದು. ಬಿಡದಿ ಟೌನ್‍ಶಿಪ್ ನಿರ್ಧಾರದಿಂದ ಹಿಂದೆ ಸರಿಯಲು ಆಗ್ರಹಿಸಲಾಗುತ್ತದೆ ಎಂದು ವಿವರ ನೀಡಿದರು.

ರಾಜ್ಯ ಮುಖ್ಯಮಂತ್ರಿಗಳಿಗೆ ರಿಯಲ್ ಎಸ್ಟೇಟ್ ಆದ್ಯತೆಯೇ ವಿನಾ ರೈತರ ವಿಚಾರ ಆದ್ಯತೆ ಇಲ್ಲ ಎಂದು ಟೀಕಿಸಿದರು. ಡಿ.ಕೆ.ಶಿವಕುಮಾರ್ ಅವರು ಹಿಂದೆ ಬೃಹತ್ ನೀರಾವರಿ ಸಚಿವರಾಗಿದ್ದಾಗ ಹೊಸಪೇಟೆ ತುಂಗಭದ್ರಾ ಡ್ಯಾಮಿನ ಕ್ರಸ್ಟ್‍ಗೇಟ್ ದುರಸ್ತಿ ಮಾಡಬೇಕೆಂದು ಹೇಳಿದಾಗ ಅದನ್ನು ಮಾಡಿಸಲು ಸುಮಾರು 24 ತಿಂಗಳು ಬೇಕಾಯಿತು ಎಂದು ಆಕ್ಷೇಪಿಸಿದರು. ಇದರ ಪರಿಣಾಮವಾಗಿ 2ನೇ ಬೆಳೆ ಬೆಳೆಯಲಾಗದೆ ರೈತರಿಗೆ ನಷ್ಟವಾಗಿದೆ ಎಂದರು.

ಅದೇ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಗಳಾಗಿ ಬಿಡದಿ ಟೌನ್‍ಶಿಪ್ ಬಗ್ಗೆ ಆದೇಶ ಮಾಡಿದ್ದಾರೆ. ಬಿಡದಿ ಸುತ್ತಲಿನ ರೈತರು ಫಲವತ್ತಾದ ಭೂಮಿಗಾಗಿ ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ. ಮಹಿಳೆಯರು ಪೊರಕೆ ತೆಗೆದುಕೊಂಡು ಅಧಿಕಾರಿಗಳನ್ನು ಬೆನ್ನಟ್ಟುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿವರಿಸಿದರು. ಇದೇ ಕಾಂಗ್ರೆಸ್ ಸರಕಾರ ಮತ್ತು ರೈತವಿರೋಧಿ ಮುಖ್ಯಮಂತ್ರಿಗಳು ಎಂದು ಆರೋಪಿಸಿದರು. ಮುಖ್ಯಮಂತ್ರಿಗಳೇ, ರೈತರ ಮೇಲೆ ದಬ್ಬಾಳಿಕೆ ಮಾಡುವುದನ್ನು ನಿಲ್ಲಿಸಿ ಎಂದು ಆಗ್ರಹಿಸಿದರು. ರೈತಪರ ನಿರ್ಧಾರ ತೆಗೆದುಕೊಳ್ಳಿ; ರೈತರ ಮೇಲೆ, ರೈತಪರ ಸಂಘಟನೆಗಳ ಮೇಲೆ ಪ್ರಕರಣ ದಾಖಲಿಸಿದ್ದನ್ನು ತಕ್ಷಣ ಹಿಂಪಡೆಯಬೇಕೆಂದು ಒತ್ತಾಯಿಸಿದರು.

ಮುಖ್ಯಮಂತ್ರಿಗಳು, ಸಚಿವರು ಜಿಲ್ಲಾ ಪ್ರವಾಸ ಮಾಡಿಲ್ಲ – ಮುಖ್ಯಮಂತ್ರಿಗಳು ನಿನ್ನೆ ಪ್ರಧಾನಿಯವರಿಗೆ ಪತ್ರ ಬರೆದಿದ್ದಾರೆ. ಭೀಕರ ಬರ ಇದೆ. ತಕ್ಷಣ ಕೇಂದ್ರ ಸರಕಾರ ಅಧಿಕಾರಿಗಳ ತಂಡವನ್ನು ಕರ್ನಾಟಕಕ್ಕೆ ಕಳುಹಿಸಿ, ಬರಗಾಲದ ಅಧ್ಯಯನ ಮಾಡುವಂತೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎಂದರು. ಹಾಗಿದ್ದರೆ ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಇದೆಯೇ ಎಂದು ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದರು. ಇಲ್ಲಿ ಚುನಾಯಿತ ಸರಕಾರ ಇದೆ. ಇಂಥ ಸಂಕಷ್ಟದ ಸಂದರ್ಭದಲ್ಲಿ ಮುಖ್ಯಮಂತ್ರಿಗಳು, ಸಚಿವರು ಜಿಲ್ಲಾ ಪ್ರವಾಸ ಮಾಡಿಲ್ಲ ಎಂದು ಆಕ್ಷೇಪಿಸಿದರು. ಬರಗಾಲ ಇದ್ದರೂ ರಾಜ್ಯದಲ್ಲಿ ಕೃಷಿ ಸಚಿವರೇ ಇಲ್ಲ; ಇದು ದುರಂತ ಎಂದು ಗಮನ ಸೆಳೆದರು. ಮುಖ್ಯಮಂತ್ರಿಗಳು ಬರದ ಸಂದರ್ಭದಲ್ಲಿ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು. ಎಕರೆಗೆ 50 ಸಾವಿರ ಪರಿಹಾರ ನೀಡಲು ಆಗ್ರಹಿಸಿದರು.

ದೆಹಲಿಯತ್ತ ಆಡಳಿತ ಪಕ್ಷದ ಶಾಸಕರು – ಸಚಿವಸಂಪುಟ ವಿಸ್ತರಣೆ ಕುರಿತು ಮಾತನಾಡಿದ ಅವರು, ಒಂದೆಡೆ ಬರಗಾಲ ಇದೆ. ಇನ್ನೊಂದೆಡೆ ಆಡಳಿತ ಪಕ್ಷದ ಶಾಸಕರ ದಂಡು ಮತ್ತೆ ದೆಹಲಿಯತ್ತ ಪ್ರಯಾಣ ಬೆಳೆಸುವ ಸಂದರ್ಭದಲ್ಲಿದ್ದಾರೆ ಎಂದು ಟೀಕಿಸಿದರು. ರಾಹುಲ್ ಗಾಂಧಿಯವರು ವಿದೇಶ ಪ್ರವಾಸ ಮುಗಿಸಿ ಬಂದಿದ್ದರೂ ಅವರು ಸುಸ್ತಾಗಿರುವ ಕಾರಣ ರೆಸ್ಟ್ ಪಡೆಯುತ್ತಿದ್ದಾರೆ ಎಂದು ವಿವರಿಸಿದರು. ಕೃಷಿ ಸಚಿವರನ್ನು ಘೋಷಿಸಿ; ಸಚಿವರಿಗೆ ಜಿಲ್ಲಾ ಪ್ರವಾಸ ಮಾಡಲು ಹೇಳಿ; ರೈತರ ಸಂಕಷ್ಟಕ್ಕೆ ಸ್ಪಂದಿಸಿ ಎಂದು ಒತ್ತಾಯಿಸಿದರು.

6ರಂದು ಪ್ರಾರಂಭವಾಗುವ ಅಧಿವೇಶನದಲ್ಲಿ ಬಿಜೆಪಿ- ಜೆಡಿಎಸ್ ಒಟ್ಟಾಗಿ ಒಂದಾಗಿ ಸದನದಲ್ಲಿ ಎದುರಿಸುವ ಕುರಿತು ಚರ್ಚಿಸಲಿದ್ದೇವೆ. ಕಾಂಗ್ರೆಸ್ ಸರಕಾರದ ರೈತವಿರೋಧಿ ನಿಲುವಿನ ಕುರಿತು ಶಾಸಕರ ಜೊತೆ ಚರ್ಚಿಸುತ್ತೇವೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು. ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ಅವರು, ಕಾವೇರಿ ಕೊಳ್ಳದ ರೈತರಿಗೆ ಕುಡಿಯಲೂ ನೀರಿಲ್ಲ; ಆದರೆ, ಮಿತ್ರ ಪಕ್ಷವನ್ನು ಖುಷಿಪಡಿಸಲು ತಮಿಳುನಾಡಿಗೆ ನೀರು ಬಿಡಲು ಮುಂದಾದ ಕ್ರಮ ಅಕ್ಷಮ್ಯ ಅಪರಾಧ ಎಂದರು. ರಾಜ್ಯದ ರೈತರ ರಕ್ಷಣೆಗೆ ಆದ್ಯತೆ ಕೊಡಿ ಎಂದು ಆಗ್ರಹಿಸಿದರು. ಇದನ್ನೂ ಓದಿ : ನಿವೇಶನ, ಫ್ಲಾಟ್‌, ಕಂತೆಗಳ ನೋಟು, ಚಿನ್ನಾಭರಣ; ಅಕ್ರಮ ಆಸ್ತಿ ಪತ್ತೆ – ಎಂಜಿನಿಯರ್‌ ಬಂಧನ..!

Related posts

ನೇರಳೆ ಮಾರ್ಗದ ಪ್ರಯಾಣಿಕರೇ ಗಮನಿಸಿ; ಮೆಟ್ರೋ ಸಂಚಾರ ತಾತ್ಕಾಲಿಕ ವ್ಯತ್ಯಯ..!

Kalpana Editor

ಸಾರಿಗೆ ನೌಕರರಿಗೆ ಸಿಹಿ ಸುದ್ದಿ – ವೇತನ ಹೆಚ್ಚಳ ಮಾಡಿದ ರಾಜ್ಯ ಸರ್ಕಾರ..!

Kalpana Editor

ಸರ್ಕಾರದ ಎಲ್ಲಾ ಸಾಧನೆಗಳ ಶ್ರೇಯ ಪ್ರತಿಯೊಬ್ಬ ಕನ್ನಡಿಗನಿಗೆ ಅರ್ಪಣೆ – ಸಿದ್ದರಾಮಯ್ಯ

Kalpana Editor