July 22, 2026
kranthikidi.com
ತಾಜಾಸುದ್ದಿರಾಜ್ಯ

ಹೆಚ್ಎಸ್ಆರ್​​ ಲೇಔಟ್​​ನನಲ್ಲಿ ಎಸ್​ಐಆರ್​​ ವೇಳೆ ಲೋಪ ಆರೋಪ – ತೇಜಸ್ವಿ ಸೂರ್ಯ

ಬೆಂಗಳೂರು : ರಾಜ್ಯದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ವಿಚಾರ ಸಂಬಂಧ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಸಂಸದ ತೇಜಸ್ವಿ ಸೂರ್ಯ ಪತ್ರ ಬರೆದಿದ್ದಾರೆ. ಬೆಂಗಳೂರಿನ ಹೆಚ್ಎಸ್ಆರ್​​ ಲೇಔಟ್​​ನ ವಾರ್ಡ್ ನಂಬರ್ 53ರಲ್ಲಿ 13,000ಕ್ಕೂ ಹೆಚ್ಚು ಮತದಾರರನ್ನು ಶಾಶ್ವತವಾಗಿ ಸ್ಥಳಾಂತರಗೊಂಡವರು ಎಂದು ದಾಖಲಿಸಿರುವ ಬಗ್ಗೆ ಉಲ್ಲೇಖಿಸಿರುವ ಅವರು, ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಅನ್ಬುಕುಮಾರ್​​ ಅವರನ್ನು ಆಗ್ರಹಿಸಿದ್ದಾರೆ.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ, ಹೆಚ್.ಎಸ್.ಆರ್ ಲೇಔಟ್ ವಾರ್ಡ್-174ರ ಒಟ್ಟು 53 ಮತಗಟ್ಟೆಗಳಲ್ಲಿ ನಡೆದಿರುವ ಮನೆ-ಮನೆ ಮತದಾರರ ಪರಿಶೀಲನೆ ಪ್ರಕ್ರಿಯೆಯಲ್ಲಿ ಗಂಭೀರ ಲೋಪದೋಷಗಳು ಹಾಗೂ ಸಂದೇಹಾಸ್ಪದ ಚಟುವಟಿಕೆಗಳು ನಡೆದಿರುವುದು ನಮ್ಮ ಗಮನಕ್ಕೆ ಬಂದಿವೆ. ಯಾವುದೇ ಸಮರ್ಪಕ ಹಾಗೂ ದೃಢೀಕೃತ ಭೌತಿಕ ಪರಿಶೀಲನೆ ನಡೆಸದೇ, ಸುಮಾರು 13,000ಕ್ಕೂ ಅಧಿಕ ಅರ್ಹ ಮತದಾರರನ್ನು “UEF – Permanent Shifting” (ಶಾಶ್ವತವಾಗಿ ಸ್ಥಳಾಂತರಗೊಂಡವರು) ಎಂದು ದಾಖಲಿಸಲಾಗಿದೆ.

ಯಾವುದೇ ಭೌತಿಕ ಪರಿಶೀಲನೆಯಿಲ್ಲದೆ ಶೇ.75ರಷ್ಟು ಮನೆ-ಮನೆ ಮತದಾರರ ಪರಿಶೀಲನೆ ಕಾರ್ಯ ಪೂರ್ಣಗೊಂಡಿದೆ ಎಂದು ವರದಿ ಸಲ್ಲಿಸಿರುವುದು ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆಯ ಕುರಿತು ಗಂಭೀರ ಅನುಮಾನಗಳನ್ನು ಹುಟ್ಟುಹಾಕಿದೆ ಎಂದವರು ತಿಳಿಸಿದ್ದಾರೆ. ಬೂತ್ ಮಟ್ಟದ ಏಜೆಂಟ್‌ಗಳ (BLA-2) ಗಮನಕ್ಕೆ ತರದೆ, ಅವರ ಅನುಮತಿ ಹಾಗೂ ಸಹಿ ಪಡೆಯದೆ ಏಕಪಕ್ಷೀಯವಾಗಿ ಸಾವಿರಾರು ಮತದಾರರನ್ನು “Permanent Shifting” ಎಂದು ದಾಖಲಿಸಲಾಗಿದೆ.

ಮನೆ-ಮನೆ ಭೇಟಿಯ ಸಮಯದಲ್ಲಿ ಕಡ್ಡಾಯವಾಗಿ ಮಾಡಬೇಕಾದ GPS ಆಧಾರಿತ ಛಾಯಾಚಿತ್ರ ಗ್ರಹಣೆ ಹಾಗೂ Enumeration Sticker ಅಳವಡಿಕೆ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಮತದಾರರು ನಿಜವಾಗಿಯೂ ಸ್ಥಳಾಂತರಗೊಂಡಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಅಕ್ಕಪಕ್ಕದ ನಿವಾಸಿಗಳಿಂದಾಗಲಿ ಅಥವಾ ಸ್ಥಳೀಯರಿಂದಾಗಲಿ ಯಾವುದೇ ಮಾಹಿತಿ ಪಡೆಯುವ ಪ್ರಕ್ರಿಯೆಯನ್ನು BLO ಅಧಿಕಾರಿಗಳು ಅನುಸರಿಸಿಲ್ಲ.

ಕಳೆದ ಚುನಾವಣೆಗಳಲ್ಲಿ ಶೇ.45ರಷ್ಟು ಸರಾಸರಿ ಮತದಾನ ದಾಖಲಾಗಿರುವ ಈ ವ್ಯಾಪ್ತಿಯಲ್ಲಿ, BLO ಅಧಿಕಾರಿಗಳು ಹಲವು ಮನೆಗಳಿಗೆ ಭೇಟಿಯೇ ನೀಡಿಲ್ಲವೆಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ. ಚುನಾವಣಾ ಆಯೋಗದ ಸ್ಪಷ್ಟ ಮಾರ್ಗಸೂಚಿಗಳಿಗೆ ವಿರುದ್ಧವಾಗಿ ನಡೆದಿರುವ ಈ ಪ್ರಕ್ರಿಯೆಯಿಂದಾಗಿ ಸಾವಿರಾರು ಅರ್ಹ ನಾಗರಿಕರು ತಮ್ಮ ಸಂವಿಧಾನಾತ್ಮಕ ಮತದಾನದ ಹಕ್ಕಿನಿಂದ ವಂಚಿತರಾಗುವ ಭೀತಿ ಎದುರಾಗಿದೆ.

ಆದ್ದರಿಂದ, ಪ್ರಜಾಪ್ರಭುತ್ವದ ಆಶಯಗಳನ್ನು ಹಾಗೂ ಮತದಾರರ ಹಕ್ಕುಗಳನ್ನು ಎತ್ತಿಹಿಡಿಯುವ ಹಿತದೃಷ್ಟಿಯಿಂದ, ಆಯೋಗವು ತಕ್ಷಣವೇ ನಿಯಮಬಾಹಿರವಾಗಿ “UEF – Permanent Shifting” ಎಂದು ದಾಖಲಿಸಲಾದ ಎಲ್ಲಾ 13,000+ ಮತದಾರರ ಮಾಹಿತಿಯನ್ನು ಮರು ಭೌತಿಕ ಪರಿಶೀಲನೆಗೆ (Re-verification) ಒಳಪಡಿಸಬೇಕು. HSR ಲೇಔಟ್ ವಾರ್ಡ್-174ರ 53 ಮತಗಟ್ಟೆಗಳಲ್ಲಿ ನಡೆದ Enumeration ಕಾರ್ಯದ ಕುರಿತು ತಕ್ಷಣವೇ ಉನ್ನತ ಮಟ್ಟದ ಸಮಗ್ರ ತನಿಖೆಗೆ ಆದೇಶಿಸಬೇಕು. ಕರ್ತವ್ಯ ಲೋಪ ಎಸಗಿದ ಹಾಗೂ ಸುಳ್ಳು ವರದಿ ಸಲ್ಲಿಕೆಗೆ ಕಾರಣರಾದ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಶಿಸ್ತುಕ್ರಮ ಜರುಗಿಸಬೇಕು ಎಂದವರು ಆಗ್ರಹಿಸಿದ್ದಾರೆ. ಇದನ್ನೂ ಓದಿ : ಎಸ್‍ಐಆರ್ ಮಹಾಸಂಪರ್ಕ ಅಭಿಯಾನ; ಒಂದು ಕೋಟಿ ಮನೆ ತಲುಪುವ ಗುರಿ – ಬಿ.ವೈ. ವಿಜಯೇಂದ್ರ

Related posts

ಎಸ್.ಜಾನಕಿ ಕನ್ನಡಿಗರ ಹೃದಯದಲ್ಲಿ ಚಿರಸ್ಥಾಯಿ – ಬೊಮ್ಮಾಯಿ

Kalpana Editor

ಗ್ರಾಮಸ್ಥರಲ್ಲಿ ನಡುಕ ಹುಟ್ಟಿಸಿದ್ದ ಚಿರತೆ ಸೆರೆ; ನಿಟ್ಟುಸಿರು ಬಿಟ್ಟ ಜನ..!

Kalpana Editor

ಅಶೋಕ್ ಕಸ ಮಾಫಿಯಾ ಗ್ಯಾಂಗಿನ ಏಜೆಂಟ್ ಆಗಿ ಮಾತನಾಡುತ್ತಿದ್ದಾರೆ: ಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು..!

Kalpana Editor