ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರ ಈಗಾಗಲೇ ನಗರದಲ್ಲಿ ಫುಟ್ಪಾತ್ಗಳ ಒತ್ತುವರಿ ತೆರವು ಮಾಡುತ್ತಿದೆ. ಇನ್ನು ಇತ್ತೀಚೆಗೆ ಅಕ್ರಮ ಕಟ್ಟಡಗಳ ವಿರುದ್ಧ ಸಮರ ಸಾರುವ ಮೂಲಕ ತೆರವುಗೊಳಿಸಲಾಗಿತ್ತು. ಇದೀಗ ಬಿಜಿಎ ಮತ್ತೊಂದು ಕಾರ್ಯಕ್ಕೆ ಮುಂದಾಗಿದೆ. ಬೆಂಗಳೂರಿನ ಇತಿಹಾಸದಲ್ಲೇ ಅತ್ಯಂತ ಎತ್ತರದ ಬಹುಮಹಡಿ ಕಟ್ಟಡವೊಂದನ್ನು ನೆಲಸಮಗೊಳಿಸಲು ತೀರ್ಮಾನಿಸಲಾಗಿದ್ದು, ಅಪಾಯಕಾರಿ ಹಂತ ತಲುಪಿರುವ 18 ಮಹಡಿಗಳ ಬೃಹತ್ ಅಪಾರ್ಟ್ಮೆಂಟ್ ಕಟ್ಟಡವನ್ನು ತೆರವುಗೊಳಿಸಲು ಅಧಿಕಾರಿಗಳು ಸಂಪೂರ್ಣ ಸಿದ್ಧತೆ ನಡೆಸಿದ್ದಾರೆ.
ಎಸ್ಎನ್ಎನ್ ರಾಜ್ ಕಾರ್ಪ್ ಸಂಸ್ಥೆಯ ಒಡೆತನದಲ್ಲಿ ಸುಮಾರು 200 ಕೋಟಿ ರೂ ವೆಚ್ಚದಲ್ಲಿ 18 ಅಂತಸ್ತಿನ ಕಟ್ಟಡವನ್ನು ನಿರ್ಮಿಸಲಾಗಿತ್ತು. ಒಟ್ಟು 49 ಐಷಾರಾಮಿ ಅಪಾರ್ಟ್ಮೆಂಟ್ಗಳನ್ನು ಹೊಂದಿರುವ ಈ ಕಟ್ಟಡವನ್ನು ಅವೈಜ್ಞಾನಿಕವಾಗಿ ನಿರ್ಮಿಸಲಾಗಿದ್ದು, ಕಟ್ಟಡದಲ್ಲಿ ತೀವ್ರ ಸ್ವರೂಪದ ರಚನಾತ್ಮಕ ಹಾನಿ (ಸ್ಟ್ರಕ್ಚರಲ್ ಡ್ಯಾಮೇಜ್) ಕಂಡುಬಂದಿದೆ. ಪ್ರಸ್ತುತ ಈ ಕಟ್ಟಡವು ಒಂದು ಬದಿಗೆ ವಾಲಿದ್ದು, ಭವಿಷ್ಯದಲ್ಲಿ ಭಾರೀ ದುರಂತ ಸಂಭವಿಸುವ ಭೀತಿ ಎದುರಾಗಿದೆ.
ಇನ್ನು ಕಟ್ಟಡದ ಭದ್ರತೆ ಹಾಗೂ ಸಾರ್ವಜನಿಕರ ಜೀವ ರಕ್ಷಣೆಯ ಹಿತದೃಷ್ಟಿಯಿಂದ ಜಿಬಿಎ ಮುಖ್ಯ ಆಯುಕ್ತರು ಹಾಗೂ ಎಸ್ಎನ್ಎನ್ ರಾಜ್ ಕಾರ್ಪ್ ಸಂಸ್ಥೆ ಮಾಲೀಕರ ನಡುವೆ ಇಂದು ಉನ್ನತ ಮಟ್ಟದ ಸಭೆ ನಡೆಯಿತು. ಈ ಸಭೆಯಲ್ಲಿ ಕಟ್ಟಡವನ್ನು ತಕ್ಷಣವೇ ಡೆಮಾಲಿಷನ್ ಮಾಡುವಂತೆ ಜಿಬಿಎ ಮುಖ್ಯ ಆಯುಕ್ತ ಎಂ. ಮಹೇಶ್ವರ್ ರಾವ್ ಸೂಚಿಸಿದರು. ಇನ್ನು ಪ್ರಾಧಿಕಾರದ ನಿರ್ಧಾರಕ್ಕೆ ಸಂಪೂರ್ಣವಾಗಿ ಒಪ್ಪಿಕೊಂಡಿರುವ ಎಸ್ಎನ್ಎನ್ ರಾಜ್ ಕಾರ್ಪ್ ಆಡಳಿತ ಮಂಡಳಿಯು, ಇಡೀ ಡೆಮಾಲಿಷನ್ ಕಾರ್ಯಾಚರಣೆಗೆ ತಗುಲುವ ಸಂಪೂರ್ಣ ಖರ್ಚು-ವೆಚ್ಚವನ್ನು ತಾವೇ ಭರಿಸುವುದಾಗಿ ಒಪ್ಪಿಕೊಂಡಿದೆ. ಇದನ್ನೂ ಓದಿ : ಕಾವೇರಿ ನದಿ ನೀರು ವಿವಾದ; ತಮಿಳುನಾಡಿನ ಜೊತೆ ಸಂಧಾನಕ್ಕೆ ಮುಂದಾದ ಕರ್ನಾಟಕ
