ಬೆಂಗಳೂರು: ರಾಜಧಾನಿಯ ಫ್ರೀಡಂ ಪಾರ್ಕ್ನಲ್ಲಿ ನಡೆದ ‘ನೀಟ್’ (NEET) ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಪ್ರತಿಭಟನೆ ವೇಳೆ, 2020ರ ದೆಹಲಿ ಗಲಭೆ ಪ್ರಕರಣದ ಆರೋಪಿಗಳ ಪರವಾಗಿ ಪೋಸ್ಟರ್ ಪ್ರದರ್ಶನ ಮಾಡಿದ್ದು ತೀವ್ರ ವಿವಾದ ಹಾಗೂ ಉದ್ವಿಗ್ನತೆಗೆ ಕಾರಣವಾಗಿದೆ.
ವಿದ್ಯಾರ್ಥಿಗಳು ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದ ಸಂದರ್ಭದಲ್ಲಿ, ಮಹಿಳೆಯೊಬ್ಬರು ದಿಢೀರನೆ 2020ರ ಈಶಾನ್ಯ ದೆಹಲಿ ಗಲಭೆ ಪ್ರಕರಣದ ಪ್ರಮುಖ ಆರೋಪಿಗಳಾದ ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಮ್ ಬೆಂಬಲಿಸುವ ಪೋಸ್ಟರ್ ಹಿಡಿದು ಪ್ರತ್ಯಕ್ಷರಾದರು. ಅಷ್ಟೇ ಅಲ್ಲದೆ, ಆ ಪೋಸ್ಟರ್ನಲ್ಲಿ “Ukhad Le BLR Police” (ಬೆಂಗಳೂರು ಪೋಲೀಸರೇ ಕಿತ್ತೊಗೆಯಿರಿ) ಎಂಬ ವಿವಾದಾತ್ಮಕ ಘೋಷಣೆಯೂ ಇತ್ತು.
ವಿದ್ಯಾರ್ಥಿಗಳಿಂದ ತೀವ್ರ ವಿರೋಧ: ಈ ಬೆಳವಣಿಗೆಯನ್ನು ಕಂಡು ಪ್ರತಿಭಟನೆಯಲ್ಲಿದ್ದ ಇತರ ವಿದ್ಯಾರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. “ಇಂತಹ ವಿವಾದಾತ್ಮಕ ಪೋಸ್ಟರ್ಗಳು ಮತ್ತು ರಾಜಕೀಯ ಅಜೆಂಡಾಗಳು ನಮ್ಮ ನ್ಯಾಯಸಮ್ಮತ ಹೋರಾಟದ ಮೂಲ ಉದ್ದೇಶವನ್ನೇ ಹಾಳುಮಾಡುತ್ತವೆ” ಎಂದು ಖಂಡಿಸಿದ ವಿದ್ಯಾರ್ಥಿಗಳು, ತಕ್ಷಣವೇ ಆ ಮಹಿಳೆಗೆ ಸ್ಥಳದಿಂದ ಕಾಲ್ತೆಗೆಯುವಂತೆ ಸೂಚಿಸಿದರು.
ಪೊಲೀಸರ ಸಮಯೋಚಿತ ಕ್ರಮ: ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿ ತಕ್ಷಣವೇ ಕಾರ್ಯಪ್ರವೃತ್ತರಾಗಿ, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆಯಾಗಿ ವಿವಾದಿತ ಪೋಸ್ಟರ್ಗಳನ್ನು ವಶಪಡಿಸಿಕೊಂಡರು. ಕೆಲಕಾಲ ಸ್ಥಳದಲ್ಲಿ ತೀವ್ರ ಗೊಂದಲ ಹಾಗೂ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದರೂ, ಪೊಲೀಸರು ಸಮಯೋಚಿತವಾಗಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.
