kranthikidi.com
ತಾಜಾಸುದ್ದಿರಾಜ್ಯ

ಕಾವೇರಿ ನೀರು ಬಿಡುಗಡೆ ಆದೇಶ ಖಂಡಿಸಿ, ಫ್ರೀಡಂ ಪಾರ್ಕ್‌ನಲ್ಲಿ ಸಂಘಟನೆಗಳಿಂದ ಪ್ರತಿಭಟನೆ..!

ಬೆಂಗಳೂರು : ಕಾವೇರಿ ನೀರು ಹಂಚಿಕೆ ವಿಚಾರ ಮತ್ತೆ ರಾಜ್ಯದಲ್ಲಿ ರಾಜಕೀಯ ಮತ್ತು ಸಾರ್ವಜನಿಕ ಸಂಘಟನೆಗಳ ಪ್ರತಿಭಟನೆಗೆ ಕಾರಣವಾಗಿದೆ. ತಮಿಳುನಾಡಿಗೆ ಪ್ರತಿದಿನ 3,500 ಕ್ಯುಸೆಕ್ ನೀರು ಬಿಡುಗಡೆ ಮಾಡುವ ಕಾವೇರಿ ನೀರು ನಿಯಂತ್ರಣ ಸಮಿತಿಯ ಆದೇಶವನ್ನು ಖಂಡಿಸಿ, ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಕರ್ನಾಟಕ ಚಲನಚಿತ್ರ ಪೋಷಕ ಕಲಾವಿದರ ಸಂಘ ಹಾಗೂ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿವೆ.

ತಮಿಳುನಾಡಿಗೆ 3,500 ಕ್ಯುಸೆಕ್ ಕಾವೇರಿ ನೀರು ಬಿಡುಗಡೆ ಮಾಡುವ ಆದೇಶವನ್ನು ವಿರೋಧಿಸಿ ಕರ್ನಾಟಕ ಚಲನಚಿತ್ರ ಪೋಷಕ ಕಲಾವಿದರ ಸಂಘದ ಸದಸ್ಯರು ಫ್ರೀಡಂ ಪಾರ್ಕ್‌ನಲ್ಲಿ ಖಾಲಿ ಬಿಂದಿಗೆ ಹಿಡಿದು ಅಣಕು ಪ್ರದರ್ಶನ ನಡೆಸಿದರು. ಹಿರಿಯ ಕಲಾವಿದ ಡಿಂಗ್ರಿ ನಾಗರಾಜ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ, ಕಾವೇರಿ ವಿಚಾರದಲ್ಲಿ ಕರ್ನಾಟಕದ ಹಿತಾಸಕ್ತಿಯನ್ನು ಯಾವುದೇ ಕಾರಣಕ್ಕೂ ಕಡೆಗಣಿಸಬಾರದು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ರಾಜ್ಯದ ರೈತರ ಹಿತ ಹಾಗೂ ಕುಡಿಯುವ ನೀರಿನ ಅಗತ್ಯಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ವೈದ್ಯನಾಥ ಬಿರಾದರ್, ನವನೀತಂ, ಗಣೇಶ್ ರಾವ್, ಗಂಡಸಿ ಸದಾನಂದ ಸ್ವಾಮಿ, ಪುಷ್ಪ ಸ್ವಾಮಿ, ಸುಲೋಚನಾ ರೈ, ಕವನ, ಭೂಮಿಕಾ ರೆಡ್ಡಿ, ಜೂನಿಯರ್ ಜಗ್ಗಿ ಸೇರಿದಂತೆ 150ಕ್ಕೂ ಹೆಚ್ಚು ಪೋಷಕ ಕಲಾವಿದರು ಪ್ರತಿಭಟನೆಯಲ್ಲಿ ಭಾಗವಹಿಸಿ ಕಾವೇರಿ ಪರ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಠವಳೆ) ವತಿಯಿಂದಲೂ ಕಾವೇರಿ ನೀರು ಬಿಡುಗಡೆ ಆದೇಶವನ್ನು ಖಂಡಿಸಿ ಪ್ರತಿಭಟನೆ ನಡೆಸಲಾಯಿತು. ರಾಜ್ಯದ ಹಲವು ಜಿಲ್ಲೆಗಳು ಅಲ್ಪವೃಷ್ಟಿ ಮತ್ತು ಬರ ಪರಿಸ್ಥಿತಿಯಿಂದ ಸಂಕಷ್ಟದಲ್ಲಿದ್ದು, ಇಂತಹ ಸಂದರ್ಭದಲ್ಲಿ ರಾಜ್ಯದ ನೀರಿನ ಹಿತಾಸಕ್ತಿಯನ್ನು ಕಾಪಾಡುವುದು ಸರ್ಕಾರದ ಜವಾಬ್ದಾರಿ ಎಂದು ಪಕ್ಷದ ಮುಖಂಡರು ಒತ್ತಾಯಿಸಿದರು.

ಕಾವೇರಿ ನೀರಿನ ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗದಂತೆ ಸರ್ಕಾರ ದೃಢ ನಿಲುವು ತಾಳಬೇಕು. ರೈತರ ಹಿತಾಸಕ್ತಿ ಹಾಗೂ ಗ್ರಾಮೀಣಾಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದ ಆರ್‌ಪಿಐ (ಅಠವಳೆ) ಮುಖಂಡರು, ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳಿಗೆ ಬೆಂಬಲ ನೀಡುವಂತೆ ಮತದಾರರಿಗೆ ಮನವಿ ಮಾಡಿದರು.

ಕಾವೇರಿ ನೀರಿನ ಹಂಚಿಕೆ ವಿಚಾರ ಮತ್ತೆ ರಾಜ್ಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ವಿವಿಧ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳು ಸರ್ಕಾರವು ಕರ್ನಾಟಕದ ಹಿತಾಸಕ್ತಿಯನ್ನು ಕಾಪಾಡುವಂತೆ ಆಗ್ರಹಿಸಿ ಪ್ರತಿಭಟನೆಗಳನ್ನು ಮುಂದುವರಿಸಿವರು. ಇದನ್ನೂ ಓದಿ : ಮುಂದಿನ ಮೂರು ದಿನ ರಾಜ್ಯದ 8 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್..!

Related posts

ತಾಯಿ, ಅಜ್ಜಿ, ಮಾವನನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಮಗ

Kalpana Editor

76 ಕಲ್ಯಾಣ ಕರ್ನಾಟಕ ಪಿಡಿಓಗಳಿಗೆ ನೇಮಕಾತಿ ಪತ್ರ ಹಸ್ತಾಂತರಿಸಿದ; ಈಶ್ವರ ಖಂಡ್ರೆ

Kalpana Editor

ಇಂದಿನಿಂದ 3 ದಿನ ಮಳೆ ಸಾಧ್ಯತೆ; ರಾಜ್ಯದ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

Kalpana Editor