21.5 C
ಬೆಂಗಳೂರು
September 22, 2026
kranthikidi.com
ತಾಜಾಸುದ್ದಿರಾಜ್ಯ

76 ಕಲ್ಯಾಣ ಕರ್ನಾಟಕ ಪಿಡಿಓಗಳಿಗೆ ನೇಮಕಾತಿ ಪತ್ರ ಹಸ್ತಾಂತರಿಸಿದ; ಈಶ್ವರ ಖಂಡ್ರೆ

ಬೆಂಗಳೂರು : ಸರ್ಕಾರಿ ಅಧಿಕಾರಿಗಳ ಹುದ್ದೆ, ಅಧಿಕಾರ, ದರ್ಪ ಚಲಾವಣೆಗೆ ಅಲ್ಲ, ಬದಲಾಗಿ ಅದು ಜನಸೇವೆ ಮಾಡಲು ಸಿಕ್ಕ ಅವಕಾಶ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಹೇಳಿದ್ದಾರೆ. ಕಲ್ಯಾಣ ಕರ್ನಾಟಕ ವೃಂದದ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ಹುದ್ದೆಗೆ ಹೊಸದಾಗಿ ನೇಮಕಗೊಂಡಿರುವ 66 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ವಿತರಿಸಿ, ಪ್ರಾಮಾಣಿಕತೆ, ದಕ್ಷತೆ ಮತ್ತು ನಿಷ್ಠೆಯ ಪ್ರಮಾಣ ವಚನ ಭೋಧಿಸಿ ಮಾತನಾಡಿ ಅವರು, ರಾಜ್ಯದಲ್ಲಿರುವ ಎಲ್ಲ 5927 ಗ್ರಾಮ ಪಂಚಾಯತಿಗಳ ಅಭಿವೃದ್ಧಿ ಅಧಿಕಾರಿಗಳು ಸ್ವಾರ್ಥ ಮರೆತು, ಇಚ್ಛಾಶಕ್ತಿಯಿಂದ ಕೆಲಸ ಮಾಡಿದರೆ ಪ್ರತಿ ಗ್ರಾಮವೂ ಆದರ್ಶಗ್ರಾಮವಾಗುತ್ತದೆ ಎಂದರು.

ಗ್ರಾಮೀಣ ಪ್ರದೇಶದಲ್ಲಿ ನಗರ, ಪಟ್ಟಣಗಳಲ್ಲಿರುವಂತೆ ಮೂಲಭೂತ ಸೌಕರ್ಯ ನೀಡಿದರೆ ವಲಸೆ ತಡೆಯಲು ಸಾಧ್ಯವಾಗುತ್ತದೆ. ಗ್ರಾಮಗಳ ಅಭಿವೃದ್ಧಿಯೂ ಆಗುತ್ತದೆ, ನಗರಗಳ ಮೇಲಿನ ಒತ್ತಡವೂ ತಗ್ಗುತ್ತದೆ ಎಂದು ಈಶ್ವರ ಖಂಡ್ರೆ ಹೇಳಿದರು.
ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಕುಡಿಯುವ ನೀರು ಪೂರೈಕೆ, ಗ್ರಾಮೀಣ ರಸ್ತೆ ಅಭಿವೃದ್ಧಿ, ಸ್ವಚ್ಛತೆ, ಗ್ರಾಮೀಣ ವಸತಿ, ಇ-ಸ್ವತ್ತು ಮೊದಲಾದ ಕಾರ್ಯಗಳನ್ನು ನಿಷ್ಠೆಯಿಂದ, ವಿಳಂಬವಿಲ್ಲದೆ ಮಾಡಬೇಕು. ಗ್ರಾಮೀಣ ಜನರು ಪಂಚಾಯತಿ ಕಚೇರಿಗೆ ಅಲೆಯದ ರೀತಿಯಲ್ಲಿ ನಿಷ್ಠೆಯಿಂದ ಕೆಲಸ ಮಾಡಬೇಕು ಎಂದರು.

ಮಹಾತ್ಮಾ ಗಾಂಧೀ ಅವರ ಗ್ರಾಮ ಸ್ವರಾಜ್ಯದ ಕನಸನ್ನು ನನಸು ಮಾಡುವ ಮಹತ್ವದ ಜವಾಬ್ದಾರಿ ಪಂಚಾಯತಿ ಅಧಿಕಾರಿಗಳ ಮೇಲಿದೆ. ಶತಮಾನಗಳ ಶಾಪದಿಂದ ಮತ್ತು ದಬ್ಬಾಳಿಕೆಯಿಂದ ತೀವ್ರ ಹಿಂದುಳಿದಿರುವ ಕಲ್ಯಾಣ ಕರ್ನಾಟಕದ ಜನರ ನೋವು ನಿಮಗೆ ಅರಿವಿದ್ದು, ನೀವು ಈ ಭಾಗದ ಗ್ರಾಮಗಳ ಅಭಿವೃದ್ಧಿಗಾಗಿ ಶ್ರಮಿಸಬೇಕು ಎಂದು ಕಿವಿ ಮಾತು ಹೇಳಿದರು. ಉಳಿಕೆ ವೃಂದದಲ್ಲಿ 150 ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಆಯ್ಕೆಯಾಗಿದ್ದು, 3 ತಿಂಗಳ ಒಳಗಾಗಿ ವೈದ್ಯಕೀಯ ಪರೀಕ್ಷೆ, ಮೂಲ ಪ್ರಮಾಣ ಪತ್ರಗಳ ಪರಿಶೀಲನೆ ಪ್ರಕ್ರಿಯೆ ಮುಗಿಸಿ ನೇಮಕಾತಿ ಪತ್ರ ನೀಡಲಾಗುವುದು ಎಂದೂ ಈಶ್ವರ ಖಂಡ್ರೆ ತಿಳಿಸಿದರು.

ಹೊಸದಾಗಿ ನೇಮಕಗೊಂಡಿರುವ ಎಲ್ಲ ಪಿಡಿಓಗಳಿಗೆ ತರಬೇತಿ ನೀಡಿ, ಸ್ಥಳ ನಿಯೋಜನೆ ಮಾಡಲಾಗುವುದು ಎಂದ ಅವರು, 80 ಪಿಡಿಓಗಳ ವರ್ಗಾವಣೆಯನ್ನು ಕೌನ್ಸೆಲಿಂಗ್ ಮೂಲಕ ಪಾರದರ್ಶಕವಾಗಿ ಮಾಡಲಾಗಿದೆ ಎಂದು ತಿಳಿಸಿದರು. ಮಹಾತ್ಮಾ ಗಾಂಧೀ ಪಂಚಾಯತಿ ಫಲಕ ಹಾಕಲು ಆ.15ರ ಗಡುವು : ಕೇಂದ್ರ ಸರ್ಕಾರ ಮಹಾತ್ಮಾ ಗಾಂಧೀ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಿಂದ ಮಹಾತ್ಮಾ ಗಾಂಧೀ ಹೆಸರು ತೆಗೆದುಹಾಕಿದೆ. ರಾಷ್ಟ್ರಪಿತನಿಗೆ ಅವಮಾನ ಮಾಡಿದೆ. ರಾಜ್ಯ ಸರ್ಕಾರ ಎಲ್ಲ 5927 ಗ್ರಾಮ ಪಂಚಾಯತಿಗಳಿಗೂ ಮಹಾತ್ಮಾ ಗಾಂಧೀ ಹೆಸರಿಡಲು ತೀರ್ಮಾನಿಸಿದ್ದು, ಫಲಕ ಬದಲಾವಣೆ ಮಾಡಲು ಆ.15ರ ಗಡುವು ನೀಡಲಾಗಿದೆ ಎಂದು ಈಶ್ವರ ಖಂಡ್ರೆ ಸ್ಪಷ್ಟಪಡಿಸಿದರು.

ಸಮಾರಂಭದಲ್ಲಿ ಇಲಾಖೆಯ ಕಾರ್ಯದರ್ಶಿ ಡಿ. ರಂದೀಪ್, ಆಯುಕ್ತರಾದ ಡಾ.ಅರುಂಧತಿ ಚಂದ್ರಶೇಖರ್ ಮತ್ತಿತರರು ಪಾಲ್ಗೊಂಡಿದ್ದರು. ಕಾವೇರಿ ನೀರು ಹಂಚಿಕೆ: ರಾಜ್ಯದ ಹಿತ ಸರ್ಕಾರ ಕಾಯುತ್ತದೆ- ಈಶ್ವರ ಖಂಡ್ರೆ, ಕಾವೇರಿ ನದಿ ನೀರಿನ ಹಂಚಿಕೆ ವಿಚಾರದಲ್ಲಿ ರಾಜ್ಯದ ಜನರ ಹಿತವನ್ನು ಕಾಯುವ ಕಾರ್ಯವನ್ನು ಸರ್ಕಾರ ಮತ್ತು ಮುಖ್ಯಮಂತ್ರಿಗಳು ಮಾಡುತ್ತಾರೆ ಎಂದು ಈಶ್ವರ ಖಂಡ್ರೆ ಸ್ಪಷ್ಟಪಡಿಸಿದರು. ರಾಜ್ಯದಲ್ಲಿರುವ ಬರ ಪರಿಸ್ಥಿತಿಯ ಬಗ್ಗೆ ಮಾತನಾಡುವ ಪ್ರತಿಪಕ್ಷ ಬಿಜೆಪಿ ನಾಯಕರು ರಾಜ್ಯದ ಪಂಚಾಯತಿಗಳಿಗೆ ಕೇಂದ್ರ ಸರ್ಕಾರದಿಂದ 15ನೇ ಹಣಕಾಸಿನ ಆಯೋಗದ ಶಿಫಾರಸಿನಂತೆ 2186 ಕೋಟಿ ರೂ. ಏಕೆ ಬಿಡುಗಡೆ ಮಾಡಿಲ್ಲ ಕೇಳಲಿ ಎಂದರು. ಇದನ್ನೂ ಓದಿ : ʼನನಗಿನ್ನೂ 15 ವರ್ಷ, ನನ್ನನ್ನು ಕ್ಷಮಿಸಿʼ – ಪ್ರಧಾನಿ ವಿರುದ್ಧ ಅವಾಚ್ಯ ಶಬ್ದ ಬಳಸಿದ್ದಕ್ಕೆ, ಅಪ್ರಾಪ್ತೆ ಕ್ಷಮೆಯಾಚನೆ..!

Related posts

ತ್ವಿಶಾ ಶರ್ಮಾ ಪ್ರಕರಣ; ಸಾಕ್ಷಿಯ ಮೇಲೆ ಪತಿ ಸ್ನೇಹಿತರಿಂದ ಹಲ್ಲೆ..!

Kalpana Editor

ಸೋಷಿಯಲ್ ಮೀಡಿಯಾ ವಿಜಿಲಾಂಟಿಸಂ ಸಹಿಸಲ್ಲ – ಪ್ರಿಯಾಂಕ್ ಖರ್ಗೆ

kknewskannada1987@gmail.com

ಉಕ್ಕಿ ಹರಿಯುತ್ತಿರುವ ತುಂಗಭದ್ರಾ ನದಿ; ಉಕ್ಕಡಗಾತ್ರಿ ದೇವಸ್ಥಾನ ಮುಳುಗಡೆ..!

kknewskannada1987@gmail.com