ಮಂಡ್ಯ : ಕಾವೇರಿ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಉತ್ತಮ ಮಳೆಯಿಂದಾಗಿ ಮಂಡ್ಯ ಜಿಲ್ಲೆಯ ಪ್ರಸಿದ್ಧ ಕೃಷ್ಣರಾಜಸಾಗರ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದುಬರುತ್ತಿದ್ದು, ಕಾವೇರಿಯ ನೀರಿನ ಮಟ್ಟ 100 ಅಡಿಗೆ ಏರಿಕೆಯಾಗಿ ‘ಶತಕ’ ಬಾರಿಸಿದೆ.
ಕಳೆದ ಮೂರೇ ದಿನಗಳ ಅಂತರದಲ್ಲಿ ಜಲಾಶಯದ ನೀರಿನ ಮಟ್ಟದಲ್ಲಿ ಬರೋಬ್ಬರಿ 8 ಅಡಿ ಏರಿಕೆ ಕಂಡುಬಂದಿದ್ದು, ಪ್ರಸ್ತುತ ಡ್ಯಾಂನಲ್ಲಿ 23 ಟಿಎಂಸಿ ನೀರು ಸಂಗ್ರಹವಾಗಿದೆ. ಕಾವೇರಿ ಕೊಳ್ಳದಲ್ಲಿ ಮುಖ್ಯವಾಗಿ ಕೊಡಗು ಭಾಗದಲ್ಲಿ ಮಳೆಯ ಅಬ್ಬರ ಮುಂದುವರಿದಿರುವುದರಿಂದ ಕೆಆರ್‌ಎಸ್‌ಗೆ ಹರಿದುಬರುತ್ತಿರುವ ಒಳಹರಿವಿನ ಪ್ರಮಾಣ ಮತ್ತಷ್ಟು ಹೆಚ್ಚಾಗಿದೆ.
ನೀರಿನ ಮಟ್ಟ ಎಷ್ಟಿದೆ? – ಗರಿಷ್ಠ ಮಟ್ಟ: 124.80 ಅಡಿ, ಇಂದಿನ ಮಟ್ಟ : 100.34 ಅಡಿ, ಒಳಹರಿವು : 32,048 ಕ್ಯೂಸೆಕ್, ಹೊರಹರಿವು : 1,821 ಕ್ಯೂಸೆಕ್, ಗರಿಷ್ಠ ಸಾಮರ್ಥ್ಯ: 49.452 ಟಿಎಂಸಿ, ಇಂದಿನ ಸಂಗ್ರಹ : 23.079 ಟಿಎಂಸಿ
ನದಿಯ ಮೇಲ್ಭಾಗದಲ್ಲಿ ಮಳೆ ಮುಂದುವರಿದಿರುವುದರಿಂದ ಜಲಾಶಯಕ್ಕೆ ಬರೋಬ್ಬರಿ 32,048 ಕ್ಯೂಸೆಕ್ ನೀರು ಹರಿದುಬರುತ್ತಿದ್ದು, ಹೊರಹರಿವು ಕೇವಲ 1,821 ಕ್ಯೂಸೆಕ್ ಇದೆ. ಹೀಗಾಗಿ ಜಲಾಶಯದ ನೀರಿನ ಮಟ್ಟದಲ್ಲಿ ತೀವ್ರ ಏರಿಕೆ ಕಂಡುಬರುತ್ತಿದೆ.
ಇದೇ ವೇಗದಲ್ಲಿ ಇನ್ನು 10 ರಿಂದ 15 ದಿನಗಳ ಕಾಲ ಜಲಾಶಯಕ್ಕೆ ಒಳಹರಿವು ಮುಂದುವರಿದರೆ ಜಲಾಶಯ ಸಂಪೂರ್ಣ ಭರ್ತಿಯಾಗುವ ಸಾಧ್ಯತೆಯಿದೆ. ಜಲಾಶಯ ಭರ್ತಿಯತ್ತ ಸಾಗುತ್ತಿರುವುದು ಒಂದೆಡೆ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದ್ದರೆ, ಮತ್ತೊಂದೆಡೆ ನೀರಿನ ಕೊರತೆಯಿಂದಾಗಿ ತೀವ್ರಗೊಂಡಿದ್ದ ಕಾವೇರಿ ಹೋರಾಟದ ಕಾವು ಇದೀಗ ತಣ್ಣಗಾಗಿದೆ. ಇದನ್ನೂ ಓದಿ : ಕರ್ನಾಟಕ-ತಮಿಳುನಾಡು ಭಾರತ-ಪಾಕಿಸ್ತಾನವಲ್ಲ – ಮಾಣಿಕಂ ಟ್ಯಾಗೋರ್
