ಬೆಂಗಳೂರು : ಬೈಕ್ ಟ್ಯಾಕ್ಸಿ ಸೇವೆಗಳ ವಿರುದ್ಧ ಸಾರಿಗೆ ಇಲಾಖೆ ರಾಜ್ಯ ರಾಜಧಾನಿಯಲ್ಲಿ ವಿಶೇಷ ಕಾರ್ಯಾಚರಣೆ ಆರಂಭಿಸಿದೆ. ಇಂದಿನಿಂದ ಒಂದು ವಾರಗಳ ಕಾಲ ನಡೆಯಲಿರುವ ಈ ಕಾರ್ಯಾಚರಣೆಯಲ್ಲಿ ನಗರದ 11 RTO ವ್ಯಾಪ್ತಿಯಲ್ಲಿ ಬೈಕ್ ಟ್ಯಾಕ್ಸಿ ವಾಹನಗಳನ್ನು ತಪಾಸಣೆ ಮಾಡಿ ಜಪ್ತಿ ಮಾಡಲಾಗುತ್ತಿದೆ. ಕಾನೂನುಬಾಹಿರವಾಗಿ ಮೊಬೈಲ್ ಆ್ಯಪ್ಗಳ ಮೂಲಕ ಬಾಡಿಗೆ ಸೇವೆ ನೀಡುತ್ತಿದ್ದ ಬೈಕ್ಗಳನ್ನು ಅಧಿಕಾರಿಗಳು ವಶಕ್ಕೆ ಪಡೆಯುತ್ತಿದ್ದಾರೆ. ಈಗಾಗಲೇ ಬೆಂಗಳೂರು ಪಶ್ಚಿಮ RTO ವ್ಯಾಪ್ತಿಯಲ್ಲಿ 10 ವಾಹನಗಳು, ಉತ್ತರ ಆರ್ಟಿಒದಲ್ಲಿ 8 ವಾಹನಗಳು ಹಾಗೂ ರಾಜಾಜಿನಗರದಲ್ಲಿ 12 ವಾಹನಗಳನ್ನು ಜಪ್ತಿ ಮಾಡಲಾಗಿದೆ.
ಯಲಹಂಕದ ಸಿಂಗನಾಯಕನಹಳ್ಳಿ ಆರ್ಟಿಒ ವ್ಯಾಪ್ತಿಯಲ್ಲಿ ಒಂದೇ ದಿನ ಸುಮಾರು 40ಕ್ಕೂ ಹೆಚ್ಚು ಬೈಕ್ಗಳನ್ನು ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಪರಿಶೀಲನೆಗಾಗಿ ಕೆಲ ಬೈಕ್ ಸವಾರರ ಮೊಬೈಲ್ಗಳನ್ನು ಕೂಡ ವಶಕ್ಕೆ ಪಡೆದು ದಾಖಲೆ ಪರಿಶೀಲನೆ ನಡೆಸಲಾಗಿದೆ. ಕಾನೂನುಬಾಹಿರವಾಗಿ ಬೈಕ್ ಟ್ಯಾಕ್ಸಿ ಸೇವೆ ನಡೆಸುತ್ತಿರುವವರ ವಿರುದ್ಧ ವಾಹನ ಜಪ್ತಿ ಮಾತ್ರವಲ್ಲ, ಚಾಲಕರ ಡ್ರೈವಿಂಗ್ ಲೈಸೆನ್ಸ್ (DL) ಹಾಗೂ ವಾಹನದ ಆರ್ಸಿ (RC) ಅಮಾನತು ಮಾಡುವ ಕ್ರಮವೂ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜಾಜಿನಗರದಲ್ಲಿ 50ಕ್ಕೂ ಹೆಚ್ಚು ವಾಹನಗಳನ್ನು ಜಪ್ತಿ ಮಾಡಲಾಗಿದ್ದು, RTO ಕಚೇರಿ ಬಳಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ರ್ಯಾಪಿಡೋ ಚಾಲಕರು, ಆಟೋ ಚಾಲಕರೇ ಬೈಕ್ ಟ್ಯಾಕ್ಸಿ ಬುಕ್ ಮಾಡಿ ಅಧಿಕಾರಿಗಳಿಗೆ ಮಾಹಿತಿ ನೀಡಿ ವಾಹನಗಳನ್ನು ಸೀಜ್ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಸಾರಿಗೆ ಇಲಾಖೆಯ ಈ ವಿಶೇಷ ಕಾರ್ಯಾಚರಣೆ ಇನ್ನೂ ಒಂದು ವಾರ ಮುಂದುವರಿಯಲಿದ್ದು, ನಿಯಮ ಉಲ್ಲಂಘಿಸಿ ಬೈಕ್ ಟ್ಯಾಕ್ಸಿ ಸೇವೆ ನಡೆಸುವವರ ವಿರುದ್ಧ ಕ್ರಮ ಇನ್ನಷ್ಟು ಕಠಿಣವಾಗುವ ಸಾಧ್ಯತೆ ಇದೆ. ಇದನ್ನೂ ಓದಿ : ಮೇಕೆದಾಟು ಯೋಜನೆ ವಿರುದ್ಧ ರಾಜ್ಯಸಭೆಯಲ್ಲಿ ಡಿಎಂಕೆ ನಿಲುವಳಿ ಮಂಡನೆ..!
