ಧಾರವಾಡ : ಧಾರವಾಡ ಜಿಲ್ಲೆಯ ರೈತರು ಈ ಬಾರಿ ತೀವ್ರ ಸಂಕಷ್ಟ ಎದುರಿಸುತ್ತಿದ್ದು, ಜಿಲ್ಲೆಯ ಸುಮಾರು 2.90 ಲಕ್ಷ ಹೆಕ್ಟೇರ್ ಕೃಷಿಯೋಗ್ಯ ಭೂಮಿಯಲ್ಲಿ ಶೇ.96ರಷ್ಟು, ಅಂದರೆ 2.80 ಲಕ್ಷ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಬಿತ್ತನೆ ನಡೆದಿದೆ. ಪ್ರಮುಖವಾಗಿ ಸುಮಾರು 45 ಸಾವಿರ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಹೆಸರು ಹಾಗೂ ಉದ್ದು, 40 ಸಾವಿರ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗಿದೆ.
ಇದಲ್ಲದೆ ಸೋಯಾಬೀನ್, ಹತ್ತಿ, ಕಡಲೆಕಾಯಿ, ಕಬ್ಬು, ಈರುಳ್ಳಿ ಸೇರಿದಂತೆ ವಿವಿಧ ತೋಟಗಾರಿಕಾ ಬೆಳೆಗಳೂ ಸಂಕಷ್ಟಕ್ಕೆ ಸಿಲುಕಿವೆ ಎಂದು ಸಚಿವ ಸಂತೋಷ ಲಾಡ್ ಅವರು ಹೇಳಿದರು. ಧಾರವಾಡ ತಾಲೂಕಿನ ಹಾರೋಬೆಳವಡಿ ಮತ್ತು ನವಲಗುಂದ ತಾಲೂಕಿನ ಶಿರೂರ, ಶಿರಕೋಳ, ಮೊರಬ ಹಾಗೂ ತಿರ್ಲಾಪುರ ಗ್ರಾಮಗಳ ಹೊಲಗಳಿಗೆ ಸಚಿವ ಲಾಡ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮುಖ್ಯಮಂತ್ರಿಗಳ ಸೂಚನೆಯಂತೆ ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಭೇಟಿ ನೀಡಿ ಬೆಳೆಗಳ ವಾಸ್ತವ ಸ್ಥಿತಿಯನ್ನು ಪರಿಶೀಲಿಸಲಾಗುತ್ತಿದೆ. ಸ್ಥಳೀಯ ರೈತರು, ರೈತ ಮುಖಂಡರು ಹಾಗೂ ತಾಂತ್ರಿಕ ತಜ್ಞರೊಂದಿಗೆ ಚರ್ಚೆ ನಡೆಸಿ ವರದಿ ಸಿದ್ಧಪಡಿಸಲಾಗುತ್ತಿದ್ದು, ಅದನ್ನು ಸರ್ಕಾರದ ಗಮನಕ್ಕೆ ತರಲಾಗುವುದು. ಹೊಲಗಳಲ್ಲಿ ಹಸಿರು ಕಾಣುತ್ತಿದ್ದರೂ ಬೆಳೆಗಳ ಬೆಳವಣಿಗೆ ಸಮರ್ಪಕವಾಗಿಲ್ಲ. ಅಗತ್ಯ ಸಮಯದಲ್ಲಿ ಮಳೆ ಸುರಿಯದ ಪರಿಣಾಮ ಬೆಳೆಗಳು ಕುಂಠಿತ ಬೆಳವಣಿಗೆ ಹೊಂದಿದ್ದು, ರೈತರಿಗೆ ಹೆಚ್ಚಿನ ನಷ್ಟ ಉಂಟಾಗಿದೆ.
ಕೆಲವು ಪ್ರದೇಶಗಳಲ್ಲಿ ನಿರೀಕ್ಷೆಗಿಂತ ಹೆಚ್ಚು ಮಳೆಯಾಗಿದ್ದರೂ ಅದು ಸಮರ್ಪಕ ಸಮಯದಲ್ಲಿ ಹಾಗೂ ಸಮಾನವಾಗಿ ಸುರಿಯದ ಕಾರಣ ಬೆಳೆಗಳಿಗೆ ಪ್ರಯೋಜನವಾಗಿಲ್ಲ ಎಂದು ತಿಳಿಸಿದರು. ರೈತರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಬೆಳೆ ವಿಮೆ ಸೇರಿದಂತೆ ಸರ್ಕಾರದಿಂದ ಹಾಗೂ ವಿಮಾ ಸಂಸ್ಥೆಗಳ ಮೂಲಕ ದೊರೆಯಬಹುದಾದ ಎಲ್ಲ ಸೌಲಭ್ಯಗಳನ್ನು ರೈತರಿಗೆ ತಲುಪಿಸುವ ಪ್ರಯತ್ನ ಮಾಡಲಾಗುವುದು.ರೈತ ಮುಖಂಡರು ಹಾಗೂ ಶಾಸಕರ ಸಲಹೆಗಳನ್ನು ಸಹ ಸರ್ಕಾರದ ಗಮನಕ್ಕೆ ತರಲಾಗುವುದು.
ರೈತರ ಪರವಾಗಿ ಬಂದಿರುವ ಅಭಿಪ್ರಾಯಗಳನ್ನು ಕ್ರೋಡೀಕರಿಸಿ ಮುಂದಿನ ಕ್ರಮಕ್ಕಾಗಿ ಸರ್ಕಾರಕ್ಕೆ ಸಲ್ಲಿಸಲಾಗುವುದು. ಬರ ಘೋಷಣೆಗೆ ಕೇಂದ್ರ ಸರ್ಕಾರದ ಮಾರ್ಗಸೂಚಿ ಹಾಗೂ ನಿಗದಿತ ತಾಂತ್ರಿಕ ಮಾನದಂಡಗಳಿದ್ದು, ಅವುಗಳನ್ನು ಅನುಸರಿಸಿ ಮಾತ್ರ ನಿರ್ಧಾರ ಕೈಗೊಳ್ಳಬೇಕಾಗಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ರೈತರ ಸಮಸ್ಯೆಯನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗುವುದು. ಅಗತ್ಯ ಮಾಹಿತಿಯನ್ನು ಸರ್ಕಾರಕ್ಕೆ ಸಲ್ಲಿಸಿ, ಮುಂದಿನ ಕ್ರಮಕ್ಕೆ ಸಹಕರಿಸಲಾಗುವುದು.

ಮಳೆಯ ಪ್ರಮಾಣ ಮಾತ್ರವಲ್ಲದೆ, ಬೆಳೆ ಬೆಳವಣಿಗೆಗೆ ಅಗತ್ಯವಾದ ಸಮಯದಲ್ಲಿ ಮಳೆ ಸುರಿದಿದೆಯೇ ಎಂಬ ಅಂಶವೂ ಪ್ರಮುಖವಾಗಿದೆ. ಈ ವಿಚಾರವನ್ನು ರಾಜ್ಯ ಸರ್ಕಾರದ ಮೂಲಕ ಕೇಂದ್ರ ಸರ್ಕಾರದ ಗಮನಕ್ಕೂ ತರಲಾಗುವುದು ಎಂದು ಅವರು ಹೇಳಿದರು. ನವಲಗುಂದ ಶಾಸಕರಾದ ಎನ್.ಎಚ್ ಕೋನರೆಡ್ಡಿ ಮಾತನಾಡಿ. ಅಲ್ಪ ಪ್ರಮಾಣದ ಮಳೆಯಾಗಿದ್ದರೂ ಹೆಸರು ಹಾಗೂ ಹತ್ತಿ ಬೆಳೆಗಳು ಹೊರನೋಟಕ್ಕೆ ಹಸಿರಾಗಿ ಕಂಡರೂ ಒಳಗೆ ಬೆಳೆ ಇಲ್ಲದಂತಾಗಿದೆ. ಹೆಸರು ಬೆಳೆ ಹೂ ಬಿಡದೆ ವಯಸ್ಸು ಮುಗಿಯುವ ಸ್ಥಿತಿ ಎದುರಾಗಿದೆ.
ಹತ್ತಿ ಬೆಳೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಕಾಯಿ ಬರುತ್ತಿಲ್ಲ. ಸಾಮಾನ್ಯವಾಗಿ ಹೆಚ್ಚು ಕಾಯಿ ಬಿಡಬೇಕಾದ ಬೆಳೆ ಈಗ ಕೇವಲ 5ರಿಂದ 10 ಕಾಯಿ ಮಾತ್ರ ಬಿಡುತ್ತಿರುವ ಪರಿಸ್ಥಿತಿ ಇದೆ. ಆದ್ದರಿಂದ ಸರ್ಕಾರವು ಪರಿಹಾರ ನೀಡುವ ಸಂದರ್ಭದಲ್ಲಿ ಮಾನದಂಡಗಳನ್ನು ಸ್ವಲ್ಪ ಸಡಿಲಿಸಿ, ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಅಂಕಿ-ಅಂಶಗಳನ್ನು ಸಿದ್ಧಪಡಿಸಬೇಕು ಎಂದು ಅವರು ಹೇಳಿದರು.
ಮುಖ್ಯಮಂತ್ರಿಗಳ ಸೂಚನೆಯಂತೆ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಬರ ಪರಿಸ್ಥಿತಿಯ ಅವಲೋಕನ ನಡೆಸಲಾಗುವುದು. ತಾಂತ್ರಿಕವಾಗಿ ಚರ್ಚಿಸಿ ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಂಡು ರೈತರಿಗೆ ಪರಿಹಾರ ಒದಗಿಸುವ ಪ್ರಯತ್ನ ಮಾಡಲಾಗುವುದು. ಕಳೆದ ಎರಡು ವರ್ಷಗಳಿಂದ ಬೆಳೆ ವಿಮೆ ರೈತರಿಗೆ ಸಿಗದಿರುವ ಬಗ್ಗೆ ಆತಂಕ ವ್ಯಕ್ತಪಡಿಸಿ, ಖಾಸಗಿ ವಿಮಾ ಕಂಪನಿಗಳು ಲಾಭ ಪಡೆಯುವ ಬದಲು ರೈತರಿಗೆ ಸೌಲಭ್ಯ ದೊರೆಯುವಂತೆ ಕ್ರಮ ಕೈಗೊಳ್ಳುವ ಪ್ರಯತ್ನ ನಡೆಯುತ್ತಿದೆ.
ಕೇಂದ್ರ ಸಚಿವ ಹಾಗೂ ಕ್ಷೇತ್ರದ ಸಂಸದರಾದ ಪ್ರಲ್ಹಾದ್ ಜೋಶಿ ಮತ್ತು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ, ರೈತರ ಪರವಾಗಿ ಧ್ವನಿ ಎತ್ತಿ ಪರಿಹಾರ ದೊರಕಿಸುವ ವಿಶೇಷ ಪ್ರಯತ್ನ ಮುಂದುವರಿಸಲಾಗುವುದು ಎಂದು ಅವರು ಹೇಳಿದರು. ಜಿಲ್ಲಾಧಿಕಾರಿ ಸ್ನೇಹಲ್.ಆರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭುವನೇಶ ಪಾಟೀಲ, ಪ್ರೊಬೆಷನರಿ ಐಎಎಸ್ ಅಧಿಕಾರಿ ಅನುಪ್ರಿಯಾ ಸಾಕ್ಯಾ, ಉಪ ವಿಭಾಗಾಧಿಕಾರಿ ಪ್ರಭಾವತಿ ಫಕೀರಪುರ, ನವಲಗುಂದ ತಾಲೂಕಿನ ತಹಶೀಲ್ದಾರ ಸುಧೀರ ಸಾಹುಕಾರ ಹಾಗೂ ಅಧಿಕಾರಿಗಳು ಬೆಳೆಗಳ ಸ್ಥಿತಿಯನ್ನು ವೀಕ್ಷಣೆ ಮಾಡಿದರು. ಇದನ್ನೂ ಓದಿ : ತಿಮ್ಮಾಪುರ್-ನಂಜಯ್ಯಮಠ ಆಡಿಯೋ ಬಗ್ಗೆ ಛಲವಾದಿ ದೂರು ಕೊಡಲಿ; ಪ್ರಿಯಾಂಕ್ ಖರ್ಗೆ
