21.6 C
ಬೆಂಗಳೂರು
August 7, 2026
kranthikidi.com
ತಾಜಾಸುದ್ದಿರಾಜಕೀಯರಾಜ್ಯ

ಕೊಪ್ಪಳ ಉಸ್ತುವಾರಿ ಸ್ಥಾನಕ್ಕೆ ರಾಯರೆಡ್ಡಿ, ಶಿವರಾಜ ತಂಗಡಗಿ ಪೈಪೋಟಿ..!

ಕೊಪ್ಪಳ : ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನಕ್ಕಾಗಿ ಕಾಂಗ್ರೆಸ್‌ನ ಇಬ್ಬರು ಸಚಿವರ ನಡುವೆ ಪೈಪೋಟಿ ಶುರುವಾಯಿತೇ ಎಂಬ ಚರ್ಚೆ ಇದೀಗ ಮುನ್ನೆಲೆಗೆ ಬಂದಿದೆ. ಸಚಿವರಾದ ಬಸವರಾಜ ರಾಯರೆಡ್ಡಿ ಹಾಗೂ ಶಿವರಾಜ ತಂಗಡಗಿ ಕೊಪ್ಪಳ ಜಿಲ್ಲಾ ಉಸ್ತುವಾರಿ ಸ್ಥಾನದ ಮೇಲೆ ಆಸಕ್ತಿ ಹೊಂದಿದ್ದಾರೆ ಎನ್ನಲಾಗುತ್ತಿದ್ದು, ಇಬ್ಬರ ಹೇಳಿಕೆಗಳು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿವೆ.

ಗದಗ ಜಿಲ್ಲೆಯ ಬರ ಪರಿಸ್ಥಿತಿ ಪರಿಶೀಲನೆಗೆ ತೆರಳಿದ್ದ ಸಚಿವ ಬಸವರಾಜ ರಾಯರೆಡ್ಡಿ, ಗುರುವಾರ ಯಲಬುರ್ಗಾ ಹಾಗೂ ಕುಕನೂರು ಭಾಗಗಳಲ್ಲಿ ಬರ ಪರಿಶೀಲನೆ ನಡೆಸಿದರು. ಸಚಿವ ಶಿವರಾಜ ತಂಗಡಗಿ ಅವರೊಂದಿಗೆ ರಾಯರೆಡ್ಡಿ ಈ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಇದಕ್ಕೂ ಮುನ್ನವೇ ಅವರು ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಭೇಟಿ ಮಾಡಿ ಪರಿಚಯ ಮಾಡಿಕೊಂಡಿದ್ದರು ಎನ್ನಲಾಗಿದೆ.

ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರ ಜವಾಬ್ದಾರಿ ಕುರಿತು ಮಾತನಾಡಿದ್ದ ರಾಯರೆಡ್ಡಿ, ಜಿಲ್ಲಾ ಉಸ್ತುವಾರಿ ಎಂದರೆ ವಿಶೇಷವಾದದ್ದೇನಿಲ್ಲ, ಕೆಡಿಪಿ ಸಭೆ ನಡೆಸುವುದು ಮತ್ತು ಧ್ವಜಾರೋಹಣ ಮಾಡುವುದು ಅಷ್ಟೇ ಎಂಬ ಅರ್ಥದಲ್ಲಿ ಹೇಳಿಕೆ ನೀಡಿದ್ದರು. ಆದರೆ ಇದೀಗ ಕೊಪ್ಪಳದ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಅವರು ನಡೆಸಿದ ಭೇಟಿಗಳು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿವೆ.

ಇತ್ತ ಸಚಿವ ಶಿವರಾಜ ತಂಗಡಗಿ ಅವರು ಜಿಲ್ಲಾ ಉಸ್ತುವಾರಿ ಸಚಿವರ ಜವಾಬ್ದಾರಿಯ ಮಹತ್ವವನ್ನು ಪ್ರತಿಪಾದಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಎಂದರೆ ಜಿಲ್ಲೆಗೆ ಮುಖ್ಯಮಂತ್ರಿ ಇದ್ದಂತೆ ಎಂದು ಅವರು ಹೇಳಿದ್ದಾರೆ. ರಾಯರೆಡ್ಡಿ ಅವರು ಜಿಲ್ಲಾ ಉಸ್ತುವಾರಿ ಕುರಿತು ಯಾವ ಅರ್ಥದಲ್ಲಿ ಹೇಳಿಕೆ ನೀಡಿದ್ದಾರೆ ಎಂಬುದು ಗೊತ್ತಿಲ್ಲ ಎಂದೂ ತಂಗಡಗಿ ಪ್ರತಿಕ್ರಿಯಿಸಿದ್ದಾರೆ. ರಾಯರೆಡ್ಡಿ ಅವರು ತಮ್ಮಗಿಂತ ಹಿರಿಯ ನಾಯಕರು. ಆದರೆ ತಮ್ಮ ಮುಂದೆ ಅವರು ಆ ರೀತಿಯ ಯಾವುದೇ ನಡೆ ತೋರಿಸಿಲ್ಲ ಎಂದು ತಂಗಡಗಿ ಹೇಳಿದ್ದಾರೆ.

ಅಲ್ಲದೆ, ರಾಯರೆಡ್ಡಿ ಅವರಿಗೆ ಎರಡು ಜಿಲ್ಲೆಗಳ ಬರ ಪರಿಶೀಲನೆ ಜವಾಬ್ದಾರಿ ನೀಡಲಾಗಿದ್ದರೆ ಮತ್ತೊಂದು ಜಿಲ್ಲೆಯನ್ನು ನೀಡಲಿ ಎಂದರು. ಮತ್ತೊಂದೆಡೆ, ರಾಯರೆಡ್ಡಿ ‘ನನಗೆ ಕೊಪ್ಪಳ ಎಂದು ಹೇಳಿದ್ದರು, ಹಾಗಾಗಿ ಕೊಪ್ಪಳಕ್ಕೆ ಬಂದಿದ್ದೇನೆ. ನನ್ನ ಜಿಲ್ಲೆಯಲ್ಲಿ ನಾನು ಇರಬೇಕು ಎಂಬ ಆಸೆ ನನಗಿದೆ’ ಎಂದು ಹೇಳಿದ್ದಾರೆ. ಹೀಗಾಗಿ ಕೊಪ್ಪಳ ಜಿಲ್ಲಾ ಉಸ್ತುವಾರಿ ಸ್ಥಾನ ಯಾರಿಗೆ ಸಿಗಲಿದೆ ಎಂಬ ಕುತೂಹಲ ಹೆಚ್ಚಾಗಿದೆ. ಸದ್ಯ ಇಬ್ಬರು ಸಚಿವರ ಹೇಳಿಕೆಗಳು ಹಾಗೂ ಕೊಪ್ಪಳದಲ್ಲಿ ಅವರ ಚಟುವಟಿಕೆಗಳು ಉಸ್ತುವಾರಿ ಸ್ಥಾನದ ಪೈಪೋಟಿಯ ಚರ್ಚೆಗೆ ಮತ್ತಷ್ಟು ಬಲ ನೀಡಿವೆ. ಇದನ್ನೂ ಓದಿ : ಮಳೆ ಬಂದ್ರೆ ಜೀವಭಯ; ಶಿಥಿಲಗೊಂಡ ಬ್ರೀಮ್ಸ್ ಕಟ್ಟಡದಲ್ಲಿ ನಲುಗುತ್ತಿರೋ ರೋಗಿಗಳು

Related posts

ಜಿಬಿಎ ಎಲೆಕ್ಷನ್;‌ ರಾಜ್ಯ ಸರ್ಕಾರಕ್ಕೆ ಮತ್ತೆ ಸಮಯಾವಕಾಶ ನೀಡಿದ ಸುಪ್ರೀಂ

Kalpana Editor

ನಮ್ಮ ಮೆಟ್ರೋ 3ನೇ ಹಂತಕ್ಕೆ ಕೇಂದ್ರ ಸರ್ಕಾರದಿಂದ ಶೀಘ್ರ ಅನುಮೋದನೆ ಸಾಧ್ಯತೆ..!

Kalpana Editor

ಕಾಂಗ್ರೆಸ್ ಜೊತೆ ವಿಲೀನಕ್ಕೆ ಠಾಕ್ರೆ ಪ್ಲಾನ್ ಎಂದ 6 ಬಂಡಾಯ ಸಂಸದರು

Kalpana Editor