ತುಮಕೂರು : ಮಾನ್ಯ ಉಪಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಾದ ಡಾ. ಜಿ.ಪರಮೇಶ್ವರ್ ಅವರು ಇಂದು ಗುಬ್ಬಿ ತಾಲೂಕಿನ ಸಿ.ಎಸ್.ಪುರ ಹೋಬಳಿಯ ಯಡುವನಹಳ್ಳಿಗೆ ಭೇಟಿ ನೀಡಿ, ತುರ್ತು ಕ್ರಿಯಾ ಯೋಜನೆ ಅನುದಾನದಡಿ ಕೊರೆಸಲಾದ ಕುಡಿಯುವ ನೀರಿನ ಕೊಳವೆಬಾವಿಯನ್ನು ಪರಿಶೀಲಿಸಿದರು. ಸಿಎಪಿ ಅನುದಾನದಡಿ ಕೊರೆದಿರುವ ಕುಡಿಯುವ ನೀರಿನ ಬೋರ್‌ವೆಲ್‌ನ್ನು ವೀಕ್ಷಿಸಿ, ಬೋರ್‌ವೆಲ್‌ನ ಪ್ರಸ್ತುತ ಸ್ಥಿತಿಗತಿ ಹಾಗೂ ನೀರಿನ ಲಭ್ಯತೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಗ್ರಾಮಸ್ಥರಿಗೆ ಕುಡಿಯುವ ನೀರು ಪೂರೈಸಲು ಕೈಗೊಂಡಿರುವ ವ್ಯವಸ್ಥೆಯ ಬಗ್ಗೆ ಪರಿಶೀಲನೆ ನಡೆಸಿದರು.
ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ಜನರಿಗೆ ಅಗತ್ಯ ಪ್ರಮಾಣದಲ್ಲಿ ಕುಡಿಯುವ ನೀರು ಲಭ್ಯವಾಗುವಂತೆ ಅಧಿಕಾರಿಗಳು ನಿರಂತರವಾಗಿ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುವಂತೆ ಪರಮೇಶ್ವರ್ ಸೂಚಿಸಿದರು. ಈ ವೇಳೆ ಗ್ರಾಮಸ್ಥರು, ಕಸ ವಿಲೇವಾರಿ, ಆಸ್ಪತ್ರೆ ಸಮಸ್ಯೆ ಕುರಿತು ಹಾಗೂ ಸ್ಮಶಾನ ಭೂಮಿ ಮಂಜೂರು ಮಾಡುವಂತೆ ಕೋರಿ ಡಿಸಿಎಂ ಅವರಿಗೆ ಮನವಿ ಸಲ್ಲಿಸಿದರು. ಶೀಘ್ರವಾಗಿ ಪರಿಶೀಲಿಸಿ ಪರಿಹಾರ ಕ್ರಮ ಕೈಗೊಳ್ಳುವಂತೆ ಡಿಸಿ ಅವರಿಗೆ ಸೂಚಿಸಿದರು.
ಕುಣಿಗಲ್ ತಾಲೂಕಿನ ನಾಗನಹಳ್ಳಿ, ಮಂಡನಪಾಳ್ಯ ಗ್ರಾಮದ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಬರ ಪರಿಸ್ಥಿತಿಯನ್ನು ಪರಿಶೀಲಿಸಿದರು. ಅಡಿಕೆ ತೋಟಗಳಿಗೆ ಭೇಟಿ ನೀಡಿದ ಅವರು, ಫಲವತ್ತಾದ ಮಣ್ಣಿನಲ್ಲಿ ಬೆಳೆದಿದ್ದ ಅಡಿಕೆ ಬೆಳೆ, ನೀರಿನ ಕೊರತೆಯಿಂದ ಒಣಗುತ್ತಿರುವುದನ್ನು ಖುದ್ದು ವೀಕ್ಷಿಸಿದರು. ಬರದಿಂದ ರೈತರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ರೈತರು ಬರ ಪರಿಹಾರ ಒದಗಿಸುವಂತೆ ಹಾಗೂ ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಮೂಲಕ ಕುಣಿಗಲ್ ತಾಲೂಕಿಗೆ ನೀರು ಹರಿಸುವಂತೆ ಉಪಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.
ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆಗೆ ಸರ್ಕಾರ ಈಗಾಗಲೇ 1,000 ಕೋಟಿ ರೂ. ಅನುದಾನ ಮೀಸಲಿಟ್ಟು ಕಾಮಗಾರಿಗೆ ಅನುಮೋದನೆ ನೀಡಿದೆ. ಈ ಪೈಕಿ 450 ಕೋಟಿ ಹಣವನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ ಎಂದು ಡಿಸಿಎಂ ತಿಳಿಸಿದರು. ಆದರೆ ತುರುವೇಕೆರೆ ಹಾಗೂ ಚಿಕ್ಕನಾಯಕನಹಳ್ಳಿ ಭಾಗದ ರೈತರು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ಸಮಸ್ಯೆ ಉಂಟಾಗಿದೆ. ಈ ವಿಚಾರವನ್ನು ಮಾತುಕತೆಯ ಮೂಲಕ ಬಗೆಹರಿಸಲಾಗುವುದು ಎಂದು ಡಾ. ಜಿ.ಪರಮೇಶ್ವರ ಅವರು ರೈತರಿಗೆ ಭರವಸೆ ನೀಡಿದರು. ಇದನ್ನೂ ಓದಿ : ಅತ್ಯಾಚಾರ, ಬೆದರಿಕೆ ಆರೋಪದಡಿ ಕ್ರಿಕೆಟಿಗ ಅಭಿಷೇಕ್ ಪೊರೆಲ್ ಬಂಧನ..!
