ಬೆಂಗಳೂರು : ಸ್ವಜನಪಕ್ಷಪಾತ ಸೇರಿದಂತೆ ವಿವಿಧ ಗಂಭೀರ ಆರೋಪಗಳ ಹಿನ್ನೆಲೆ ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅಮಾನತ್ತಿನ ನಡುವೆಯೇ ಕೆಪಿಎಸ್ಸಿಯಲ್ಲಿ ಮತ್ತೊಂದು ಬ್ರಹ್ಮಾಂಡ ಅಕ್ರಮ ನಡೆದಿರುವ ಆರೋಪ ಕೇಳಿಬಂದಿದೆ. ಪಶು ವೈದ್ಯಾಧಿಕಾರಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಗೋಲ್ಮಾಲ್ ನಡೆದಿದೆ ಎಂದು ದೂರಲಾಗಿದ್ದು, ನೇಮಕಾತಿ ಪ್ರಕ್ರಿಯೆಯನ್ನೇ ರದ್ದುಗೊಳಿಸುವಂತೆ ಆಕಾಂಕ್ಷಿಗಳು ಒತ್ತಾಯಿಸಿದ್ದಾರೆ.
ನೇಮಕಾತಿಯಲ್ಲಿ ಶೇ.60ರಷ್ಟು ಅಕ್ರಮ ಆಗಿರುವ ಬಗ್ಗೆ ಆರೋಪಿಸಲಾಗಿದ್ದು, ಇದರಲ್ಲಿಯೂ ಇತ್ತೀಚೆಗಷ್ಟೇ ಅಮಾನತ್ತಾಗಿರುವ ಶಿವಶಂಕರಪ್ಪ ಸಾಹುಕಾರ್ ಹೆಸರು ತಳಕುಹಾಕಿಕೊಂಡಿದೆ. ಜನವರಿ 8 ರಂದು 400 ಪಶು ವೈದ್ಯಾಧಿಕಾರಿಗಳ ಹುದ್ದೆಗೆ ಪರೀಕ್ಷೆ ನಡೆದಿದ್ದು, ಜುಲೈ 17ರಂದು ಹೊರಬಿದ್ದ ಫಲಿತಾಂಶ ಕಂಡು ಅಭ್ಯರ್ಥಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಒಂದು ಹುದ್ದೆ ಬರೋಬ್ಬರಿ 80 ಲಕ್ಷ ರೂಪಾಯಿಗೆ ಬಿಕರಿ ಆಗಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ 50ಕ್ಕೂ ಹೆಚ್ಚು ಅಭ್ಯರ್ಥಿಗಳು ಆಗಮಿಸಿ ವಿಧಾನಸೌಧ ಪೋಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿರೋದೀಗ ಹೊಸ ಚರ್ಚೆ ಹುಟ್ಟುಹಾಕಿದೆ.
ಶಿವಶಂಕರಪ್ಪ, ಸೇರಿ ಹಲವು ಕೆಪಿಎಸ್ಸಿ ಸದಸ್ಯರೂ ಅಕ್ರಮದಲ್ಲಿ ಭಾಗಿ ಆಗಿದ್ದಾರೆ. ಮಧ್ಯವರ್ತಿಗಳ ಮೂಲಕ ಭಾರೀ ಮಟ್ಟದಲ್ಲಿ ವ್ಯವಹಾರ ನಡೆದಿದೆ. ಇಂಥವರ ವಿರುದ್ಧ ಕೇವಲ ಕ್ರಮವಲ್ಲ, ಗಲ್ಲು ಶಿಕ್ಷೆ ಆಗಬೇಕು ಎಂದು ವಿಧ್ಯಾರ್ಥಿ ಸಂಘಟನೆ ಅಧ್ಯಕ್ಷ ಕಾಂತ್ ಕುಮಾರ್ ಆಗ್ರಹಿಸಿದ್ದಾರೆ. ಗ್ರೂಪ್ ಎ ಹುದ್ದೆಯಾಗಿರುವ ಪಶು ವೈದ್ಯಾಧಿಕಾರಿಗಳ ಸೀಟ್ಗೆ ದುಡ್ಡು ಕೊಡಿ ಎಂದು ಅಭ್ಯರ್ಥಿಗಳಿಗೆ ಕರೆ ಮಾಡಿ ಬೇಡಿಕೆ ಇಟ್ಟಿದ್ದಾರೆ . ಹೀಗಾಗಿ ನೇಮಕಾತಿ ಪ್ರಕ್ರಿಯೆಯನ್ನೇ ರದ್ದು ಮಾಡಬೇಕು. UPSC ಬರೆದ ಅಭ್ಯರ್ಥಿಗಳು ಪಾಸ್ ಆಗಲು ಕಷ್ಟ ಪಟ್ಟಿದ್ದರೆ, ಶಿವಶಂಕರಪ್ಪ ಸಂಬಂಧಿಕರು ಮೆರಿಟ್ ಅಂಕ ಗಳಿಸಿದ್ದಾರೆ. ಪ್ರತಿಭಾವಂತ ವಿಧ್ಯಾರ್ಥಿಗಳು 300 ಅಂಕ ದಾಟುವುದು ಕಷ್ಟ ಇರುವಾಗ ಇದು ಹೇಗೆ ಸಾಧ್ಯ ಎಂದವರು ಪ್ರಶ್ನಿಸಿದ್ದಾರೆ. ಇದನ್ನೂ ಓದಿ : ಸೂಟ್ಕೇಸ್ನಲ್ಲಿ ಮಹಿಳೆಯ ಶವ ಪತ್ತೆ ಪ್ರಕರಣ; ಭೇದಿಸಿದ ಪೊಲೀಸರು..!
