ಕೊಪ್ಪಳ : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಗೃಹಲಕ್ಷ್ಮಿ’ ಯೋಜನೆಯಡಿ ಕೊಪ್ಪಳ ಜಿಲ್ಲೆಯಲ್ಲಿ ಭಾರೀ ಪ್ರಮಾಣದ ಅಕ್ರಮ ಹಾಗೂ ಗೋಲ್ ಮಾಲ್ ನಡೆದಿರುವುದು ಬಯಲಿಗೆ ಬಂದಿದೆ. ಜಿಲ್ಲೆಯಲ್ಲಿ ಮೃತಪಟ್ಟ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೂ ಸತತವಾಗಿ ಹಣ ಜಮೆಯಾಗುತ್ತಿದ್ದು, ಇದನ್ನು ಗಮನಿಸಿದ ಗ್ಯಾರಂಟಿ ಯೋಜನೆಗಳ ಜಾರಿ ಸಮಿತಿ ತನಿಖೆ ನಡೆಸಿ ಇದುವರೆಗೆ 86 ಲಕ್ಷ ರೂಪಾಯಿಗಳನ್ನು ರಿಕವರಿ ಮಾಡಿದೆ.
ಈ ಕುರಿತು ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಶ್ರೀನಿವಾಸ್ ರೆಡ್ಡಿ ಅವರು ಸುದ್ದಿಗೋಷ್ಠಿ ನಡೆಸಿ ಸ್ಫೋಟಕ ಸತ್ಯಗಳನ್ನು ಹೊರಹಾಕಿದ್ದಾರೆ. ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 7,085 ಮೃತ ಫಲಾನುಭವಿಗಳ ಖಾತೆಗಳಿಗೆ ಹಣ ಜಮೆಯಾಗುತ್ತಿತ್ತು. ಈ ಪೈಕಿ ಹಲವು ಕುಟುಂಬದವರು ತಮ್ಮ ಮನೆಯಲ್ಲಿ ಸದಸ್ಯರು ಮೃತಪಟ್ಟಿರುವ ವಿಷಯವನ್ನು ಇಲಾಖೆಗೆ ತಿಳಿಸಿರಲಿಲ್ಲ. ಗ್ಯಾರಂಟಿ ಸಮಿತಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಮರಣ ಪ್ರಮಾಣ ಪತ್ರಗಳನ್ನು ಮತ್ತು ದಾಖಲೆಗಳನ್ನು ಪರಿಶೀಲಿಸಿದಾಗ ಈ ಅಕ್ರಮ ಬೆಳಕಿಗೆ ಬಂದಿದೆ.
ಮೃತರ ಖಾತೆಯಿಂದ ಹಣ ಡ್ರಾ ಮಾಡಿದ್ದ ಮತ್ತು ಡ್ರಾ ಮಾಡದೇ ಉಳಿದಿದ್ದ ಖಾತೆಗಳನ್ನು ಪರಿಶೀಲಿಸಿ ಇದುವರೆಗೆ 86 ಲಕ್ಷ ರೂಪಾಯಿಗಳನ್ನು ರಿಕವರಿ ಮಾಡಿ ಸರ್ಕಾರಕ್ಕೆ ಒಪ್ಪಿಸಲಾಗಿದೆ. ಈ ವಿಚಾರವನ್ನು ಮುಖ್ಯಮಂತ್ರಿಗಳ ಗಮನಕ್ಕೂ ತರಲಾಗಿದೆ. ಜಿಲ್ಲೆಯಲ್ಲಿ ಇದುವರೆಗೆ ಮೃತರ ಖಾತೆಗಳ ಮೂಲಕ ಸುಮಾರು 2 ರಿಂದ 3 ಕೋಟಿ ರೂಪಾಯಿಗಳಷ್ಟು ಹಣ ತಪ್ಪು ಖಾತೆಗಳಿಗೆ ತಲುಪಿರುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.
ಪರಿಶೀಲನೆ ವೇಳೆ ಜಿಲ್ಲೆಯಲ್ಲಿ ಸುಮಾರು 26,000 ಮಲ್ಟಿಪಲ್ (ಬಹುವಿಧ) ಖಾತೆಗಳು ಪತ್ತೆಯಾಗಿದ್ದು, ಕೆಲವು ಫಲಾನುಭವಿಗಳ ಖಾತೆಗಳು ಹೊರ ರಾಜ್ಯಗಳಲ್ಲೂ ಇರುವುದು ಕಂಡುಬಂದಿದೆ. ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 3,13,500 ಗೃಹಲಕ್ಷ್ಮಿ ಫಲಾನುಭವಿಗಳಿದ್ದು, ಪ್ರತಿ ತಿಂಗಳು ಸುಮಾರು 63 ಕೋಟಿ ರೂಪಾಯಿ ಜಮೆಯಾಗುತ್ತಿದೆ. ಇದೀಗ ಸರ್ಕಾರ ಸೂಚನೆಯಂತೆ ಪ್ರತಿಯೊಂದು ಖಾತೆಯನ್ನೂ ತೀವ್ರ ಪರಿಶೀಲನೆಗೆ ಒಳಪಡಿಸಲಾಗುತ್ತಿದೆ. ಇದನ್ನೂ ಓದಿ : ಇಂದು ಟಾಕ್ಸಿಕ್ ಟ್ರೈಲರ್ ರಿಲೀಸ್ – ಸ್ಫೋಟಕ್ಕೆ ಟೈಮ್ ಫಿಕ್ಸ್..!
