ಬೆಂಗಳೂರು : ಹೋಟೆಲ್, ಮೆಡಿಕಲ್ ಸ್ಟೋರ್ ಸೇರಿದಂತೆ ಸಾರ್ವಜನಿಕರು ಭೇಟಿ ನೀಡುವ ಸ್ಥಳಗಳಲ್ಲಿ ಇನ್ಮುಂದೆ QR ಕೋಡ್ ಅಳವಡಿಸಲಾಗುವುದು ಎಂದು ಆರೋಗ್ಯ ಸಚಿವ ಯುಟಿ ಖಾದರ್ ಮಹತ್ವದ ಘೋಷಣೆ ಮಾಡಿದ್ದಾರೆ. QR ಕೋಡ್ ಸ್ಕ್ಯಾನ್ ಮಾಡುವ ಮೂಲಕ ಆಹಾರ ಗುಣಮಟ್ಟ, ಸೇವೆ ಅಥವಾ ಇತರ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ದೂರು ಸಲ್ಲಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
ಆಹಾರ ಇಲಾಖೆ ನಡೆಸಿದ ಕಾರ್ಯಾಚರಣೆಗಳ ಕುರಿತು ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಸಾರ್ವಜನಿಕರ ದೂರುಗಳನ್ನು ತ್ವರಿತವಾಗಿ ಅಧಿಕಾರಿಗಳ ಗಮನಕ್ಕೆ ತರುವ ಉದ್ದೇಶದಿಂದ ಈ ವ್ಯವಸ್ಥೆ ರೂಪಿಸಲಾಗುತ್ತಿದೆ ಎಂದರು. ಕರ್ನಾಟಕದಲ್ಲಿ ಮೊದಲ ಬಾರಿಗೆ ಈ ರೀತಿಯ ವ್ಯವಸ್ಥೆ ಜಾರಿಗೆ ತರಲು ಸರ್ಕಾರ ಮುಂದಾಗಿದೆ ಎಂದು ಹೇಳಿದರು.
ಬೆಂಗಳೂರಿನ ಹೋಟೆಲ್‌ಗಳ ಮೇಲಿನ ದಾಳಿ ಮುಂದುವರಿಯಲಿದೆ. ಇದರ ಜೊತೆಗೆ ಖಾಸಗಿ ಹಾಸ್ಟೆಲ್, ಪಿಜಿ, ಬಸ್ ನಿಲ್ದಾಣ, ಮದುವೆ ಮನೆ, ರೈಲ್ವೆ ಕ್ಯಾಂಟೀನ್ ಹಾಗೂ ವಿಮಾನಗಳಲ್ಲಿ ನೀಡುವ ಆಹಾರವನ್ನೂ ಪರಿಶೀಲಿಸಲಾಗುವುದು ಎಂದು ಖಾದರ್ ಹೇಳಿದ್ದಾರೆ. ಪಿಜಿಗಳಲ್ಲಿ ಕಳಪೆ ಗುಣಮಟ್ಟದ ಆಹಾರ ನೀಡುತ್ತಿರುವುದು ಪತ್ತೆಯಾದರೆ ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ ಎಂದು ಸಚಿವರು ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು ನಗರ ವ್ಯಾಪ್ತಿಯಲ್ಲಿ 60ಕ್ಕೂ ಹೆಚ್ಚು 3-ಸ್ಟಾರ್ ಮತ್ತು 5-ಸ್ಟಾರ್ ಹೋಟೆಲ್‌ಗಳು, 8 ಗೋಡೌನ್‌ಗಳು ಹಾಗೂ 4 ಎಂಟರ್‌ಪ್ರೈಸ್ ರೆಸ್ಟೋರೆಂಟ್‌ಗಳ ಮೇಲೆ ಪರಿಶೀಲನೆ ನಡೆಸಲಾಗಿದೆ. ಆಹಾರ ಸುರಕ್ಷತಾ ಮತ್ತು ಆರೋಗ್ಯ ಸುರಕ್ಷತಾ ಅಧಿಕಾರಿಗಳ ನೇತೃತ್ವದಲ್ಲಿ 30 ತಂಡಗಳನ್ನು ರಚಿಸಿ ಕಾರ್ಯಾಚರಣೆ ನಡೆಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಹೋಟೆಲ್‌ಗಳಲ್ಲಿ ಆಹಾರ ಸುರಕ್ಷತಾ ನಿಯಮ ಪಾಲನೆ, ಆಹಾರ ಸಂಗ್ರಹಣೆ ಹಾಗೂ ಗುಣಮಟ್ಟವನ್ನು ಅಧಿಕಾರಿಗಳು ಪರಿಶೀಲಿಸಿದ್ದಾರೆ.
ತಪಾಸಣೆ ವೇಳೆ ಅವಧಿ ಮೀರಿದ, ತಪ್ಪು ಲೇಬಲ್ ಹೊಂದಿರುವ ಹಾಗೂ ಅಸಮರ್ಪಕವಾಗಿ ಸಂಗ್ರಹಿಸಿದ್ದ ಹಲವು ಆಹಾರ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂಬ ಬಗ್ಗೆಯೂ ಸಚಿವರು ಮಾಹಿತಿ ನೀಡಿದರು. ದಾಳಿ ವೇಳೆ ಏನೇನು ವಶ? ಖಾದರ್ ಕೊಟ್ಟ ಮಾಹಿತಿ ಇಲ್ಲಿದೆ.
ಮಟನ್/ಚಿಕನ್: 378 ಕೆಜಿ – ತಪ್ಪು ಲೇಬಲ್, ಎಕ್ಸ್‌ಪೈರಿ ದಿನಾಂಕ ಇಲ್ಲ
ಮಟನ್/ಚಿಕನ್: 51 ಕೆಜಿ – ಅವಧಿ ಮೀರಿದ
ಮೀನು: 203 ಕೆಜಿ – ಅತಿಯಾದ ಅವಧಿ ಮೀರಿದ
ಸಸ್ಯಾಹಾರಿ ಆಹಾರ: 200 ಕೆಜಿ – ಮಾಂಸಾಹಾರದೊಂದಿಗೆ ಸಂಗ್ರಹಣೆ
ತರಕಾರಿ: 76 ಕೆಜಿ – ಕೊಳೆತ/ಫಂಗಸ್
ಹಾಲು/ಮೊಸರು: 45 ಲೀಟರ್ – ಅವಧಿ ಮೀರಿದ
ಬೇಕರಿ ಉತ್ಪನ್ನ: 12 ಕೆಜಿ – ಅವಧಿ ಮೀರಿದ
ಧಾನ್ಯಗಳು ಮತ್ತು ಇತರೆ: 67 ಕೆಜಿ – ತಪ್ಪು ಲೇಬಲ್/ಅವಧಿ ಮೀರಿದ
ಬಳಸಿದ ಅಡುಗೆ ಎಣ್ಣೆ: 49 ಲೀಟರ್ – ನಿಯಮಬಾಹಿರ ಬಳಕೆ
ಹಾಲು, ಮೊಟ್ಟೆ ಮೇಯೊನೇಸ್ ಮಾದರಿ ಸಂಗ್ರಹ
ರಾಜ್ಯದಲ್ಲಿ 25 ಹಾಲು ಹಾಗೂ ಹಾಲಿನ ಉತ್ಪನ್ನಗಳ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಈ ಪೈಕಿ ಒಂದು ಮಾದರಿ Substandard ಎಂದು ವರದಿಯಾಗಿದೆ. ರಾಜ್ಯಾದ್ಯಂತ 124 ಶಾಲೆ ಮತ್ತು ಕಾಲೇಜುಗಳ ಆವರಣದಲ್ಲಿರುವ ಆಹಾರ ಘಟಕಗಳನ್ನೂ ಪರಿಶೀಲಿಸಲಾಗಿದ್ದು, 53 ಆಹಾರ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಇದರ ಜೊತೆಗೆ Egg Mayonnaiseನ 36 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ : ಟೆಂಡರ್‌ಗಳಲ್ಲಿ ಕಮಿಷನ್ ಕೇಳ್ತಿದ್ದಾರೆ; ವಿಜಯ್ ಸರ್ಕಾರದ ವಿರುದ್ಧ ಅಣ್ಣಾಮಲೈ ಭ್ರಷ್ಟಾಚಾರ ಬಾಂಬ್..!
