27.8 C
ಬೆಂಗಳೂರು
October 11, 2026
kranthikidi.com
ತಾಜಾಸುದ್ದಿರಾಜಕೀಯರಾಜ್ಯ

ಇದು ಕೇವಲ ಆರಂಭ, ಮುಂದೆ ಹೋರಾಟ ದೊಡ್ಡಮಟ್ಟದಲ್ಲಿ ಇದೆ – ನಿಖಿಲ್ ಕುಮಾರಸ್ವಾಮಿ

ರಾಮನಗರ : ಟೌನ್‌ಶಿಪ್ ಯೋಜನೆ ವಿರೋಧಿಸಿ ಜೆಡಿಎಸ್ ಕೈಗೊಂಡಿರುವ ಬೃಹತ್ ಪಾದಯಾತ್ರೆಯಲ್ಲಿ ಮಾತನಾಡಿದ ಯುವನಾಯಕ ನಿಖಿಲ್ ಕುಮಾರಸ್ವಾಮಿ, ಇದು ಕೇವಲ ಆರಂಭ, ಮುಂದೆ ಹೋರಾಟ ದೊಡ್ಡಮಟ್ಟದಲ್ಲಿ ಇದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಬಿಡದಿ ಟೌನ್‌ಶಿಪ್ ಯೋಜನೆ ವಿರೋಧಿಸಿ ಜೆಡಿಎಸ್ ನೇತೃತ್ವದಲ್ಲಿ ಬೃಹತ್ ಪಾದಯಾತ್ರೆ ಪ್ರಾರಂಭವಾಗಿದೆ.

ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಯೋಜನಾ ವ್ಯಾಪ್ತಿಯ ಎಂಟು ಗ್ರಾಮಗಳಲ್ಲಿ ಸುಮಾರು 11 ಕಿಲೋಮೀಟರ್ ಪಾದಯಾತ್ರೆ ನಡೆಯಲಿದ್ದು, ಬೆಳಿಗ್ಗೆ ಅಂಚಿಪುರ ಗ್ರಾಮದ ದಂಡಿನ ಮಾರಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಿಖಿಲ್ ಕುಮಾರಸ್ವಾಮಿ ಪಾದಯಾತ್ರೆ ಆರಂಭಿಸಿದರು. ಅಂಚಿಪುರ, ಅಂಚಿಪುರ ಕಾಲೋನಿ, ಬನ್ನಿಗಿರಿ, ಮೆರೆವೇಗೌಡನದೊಡ್ಡಿ, ಗುಂಡುತೋಪು, ಗೊಲ್ಲಹಳ್ಳಿ, ಕೋಡಿಪಾಳ್ಯ ಹಾಗೂ ಹೊಸೂರು ಗ್ರಾಮಗಳಲ್ಲಿ ಪಾದಯಾತ್ರೆ ನಡೆಯಿತು.

ಪಾದಯಾತ್ರೆಯಲ್ಲಿ ಸಾವಿರಾರು ರೈತರು, ಜೆಡಿಎಸ್ ಕಾರ್ಯಕರ್ತರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದರು. ಎಂಎಲ್‌ಸಿ ಜವರಾಯಿಗೌಡ ಹಾಗೂ ಮಾಜಿ ಎಂಎಲ್‌ಸಿ ಶ್ರೀಕಂಠೇಗೌಡ ಕೂಡ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಇಂದಿನ ಪಾದಯಾತ್ರೆ ರಾಜಕೀಯ ಲಾಭ-ನಷ್ಟಕ್ಕಾಗಿ ಅಲ್ಲ. ರೈತರ ಬದುಕು ಉಳಿಸುವ ಉದ್ದೇಶದಿಂದ ನಡೆಸಲಾಗುತ್ತಿದೆ ಎಂದರು.

ಇದು ಒಂದು ದಿನದ ಹೋರಾಟವಲ್ಲ. ಕೇವಲ ಭಾಷಣಕ್ಕೆ ಸೀಮಿತವಾಗುವ ಕಾರ್ಯಕ್ರಮವೂ ಅಲ್ಲ. ಇದು ಆರಂಭ ಮಾತ್ರ. ಮುಂದೆ ದೊಡ್ಡ ಮಟ್ಟದ ಹೋರಾಟ ನಡೆಸುತ್ತೇವೆ. ಯೋಜನೆಗೆ ಒಪ್ಪಿಗೆ ಪಡೆಯಲು ಸರ್ಕಾರ ರೈತರಿಗೆ ಆಮಿಷ ಒಡ್ಡುತ್ತಿದೆ. ಕೃಷಿ ಭೂಮಿ ಕಳೆದುಕೊಂಡರೆ ರೈತರ ಬದುಕೇ ಸಂಕಷ್ಟಕ್ಕೆ ಸಿಲುಕಲಿದೆ. ಟೌನ್‌ಶಿಪ್ ಯೋಜನೆಯಿಂದ ಸಣ್ಣ ರೈತರಿಗೆ ಹೆಚ್ಚು ಅನ್ಯಾಯವಾಗಲಿದೆ.

ರೈತರ ಭೂಮಿ ಕಸಿದುಕೊಳ್ಳಲು ದಲ್ಲಾಳಿಗಳನ್ನು ಬಳಸಲಾಗುತ್ತಿದೆ. ರೈತರ ಒಗ್ಗಟ್ಟು ಒಡೆಯುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು. ಯೋಜನೆಯ ಒಟ್ಟು ವೆಚ್ಚ ಸುಮಾರು 18 ಸಾವಿರ ಕೋಟಿ ರೂ. ಎಂದು ಹೇಳಲಾಗುತ್ತಿದೆ. ರೈತರ ಜಮೀನು ಪಡೆದು 33 ಸಾವಿರ ಕೋಟಿ ರೂ. ಲಾಭ ಗಳಿಸುವ ಉದ್ದೇಶ ಇದರ ಹಿಂದೆ ಇದೆ. ಇದರಿಂದ ಯಾರಿಗೆ ಲಾಭವಾಗಲಿದೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಪ್ರಶ್ನಿಸಿದರು.

ಇದೇ ವೇಳೆ ಕುಮಾರಸ್ವಾಮಿ ಕುಟುಂಬದ ಭೂಮಿ ಕುರಿತು ಕೇಳಿಬಂದ ಆರೋಪಗಳಿಗೆ ಪ್ರತಿಕ್ರಿಯಿಸಿದ ನಿಖಿಲ್, ತಮ್ಮ ಕುಟುಂಬದ ಜಮೀನುಗಳನ್ನು ಕಾನೂನುಬದ್ಧವಾಗಿ ಖರೀದಿಸಲಾಗಿದೆ ಎಂದು ಸ್ಪಷ್ಟಪಡಿಸಿದರು. ನಮ್ಮ ಜಮೀನಿನಲ್ಲಿ ಯಾವುದೇ ವಾಣಿಜ್ಯ ಕಟ್ಟಡ ನಿರ್ಮಿಸಿಲ್ಲ. ರೈತರಿಗೆ ಅನುಕೂಲವಾಗುವ ಯೋಜನೆಗಳಿಗೆ ಬಳಸಲು ಜಮೀನು ಉಳಿಸಿಕೊಂಡಿದ್ದೇವೆ. ಅಗತ್ಯವಿದ್ದರೆ ಶಾಲೆ ಅಥವಾ ಆಸ್ಪತ್ರೆಗೆ ಜಮೀನು ನೀಡಲು ಸಿದ್ಧ ಎಂದು ಹೇಳಿದರು.

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಮಾತನಾಡಿ, ಟೌನ್‌ಶಿಪ್ ಯೋಜನೆ ರೈತ ವಿರೋಧಿ ಯೋಜನೆಯಾಗಿದೆ. ರೈತರನ್ನು ಒಕ್ಕಲೆಬ್ಬಿಸುವ ಪ್ರಯತ್ನದ ವಿರುದ್ಧವೇ ಈ ಹೋರಾಟ ನಡೆಯುತ್ತಿದೆ ಎಂದರು. ಈ ಹೋರಾಟಕ್ಕೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಆಶೀರ್ವಾದವಿದೆ. ಇನ್ನೆರಡು ದಿನಗಳಲ್ಲಿ ಮುಖ್ಯಮಂತ್ರಿ ಅವರಿಗೆ ಪತ್ರ ಬರೆಯಲಿದ್ದಾರೆ. ಯೋಜನೆ ಕೈಬಿಡದಿದ್ದರೆ ಸ್ವತಃ ಹೋರಾಟಕ್ಕೆ ಇಳಿಯುವುದಾಗಿ ಪತ್ರದಲ್ಲಿ ತಿಳಿಸಲಿದ್ದಾರೆ. ರೈತರು ಆತಂಕ ಪಡುವ ಅಗತ್ಯವಿಲ್ಲ. ರೈತರ ಹಿತ ಕಾಪಾಡಲು ಜೆಡಿಎಸ್ ಎಲ್ಲಾ ರೀತಿಯ ಹೋರಾಟ ನಡೆಸಲಿದೆ ಎಂದು ಅವರು ಭರವಸೆ ನೀಡಿದರು. ಇದನ್ನೂ ಓದಿ : ಧರ್ಮಸ್ಥಳದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ; ಶಾಸಕರಿಂದ ಆಣೆ-ಪ್ರಮಾಣಕ್ಕೆ ನಿರ್ಧಾರ..!

Related posts

ರಸ್ತೆಯಲ್ಲೇ ಇ-ರಿಕ್ಷಾ ಹ್ಯಾಕ್ – ವಿಡಿಯೋ ವೈರಲ್‌ ಬೆನ್ನಲ್ಲೇ, ಚೀನಿ ಆ್ಯಪ್‌ ಬ್ಯಾನ್..!

Kalpana Editor

ಉತ್ತರ ಕರ್ನಾಟಕದಲ್ಲಿ ಮಣ್ಣೆತ್ತಿನ ಅಮವಾಸ್ಯೆ ಸಂಭ್ರಮ; ಮಳೆಗಾಗಿ ವಿಶೇಷ ಪೂಜೆ, ಪ್ರಾರ್ಥನೆ..!

Kalpana Editor

ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ; ಸಿಟಿ ರವಿ ನೇತೃತ್ವದ ಸಮಿತಿಯಿಂದ ಬಿವೈವಿಗೆ ವರದಿ ಸಲ್ಲಿಕೆ..!

Kalpana Editor