ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಗೀತು ಮೋಹನ್‌ದಾಸ್ ನಿರ್ದೇಶನದ ‘ಟಾಕ್ಸಿಕ್’ಸಿನಿಮಾ ಸದ್ಯ ಭಾರತೀಯ ಚಿತ್ರರಂಗದಲ್ಲೇ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟುಹಾಕಿದೆ. ಈ ಚಿತ್ರದ ಟೀಸರ್ಗೆ ಅನೇಕರು ಟೀಕೆ ಹೊರಹಾಕಿದ್ದರು. ಇತ್ತೀಚಿಗೆ ಮಾಧ್ಯಮಗಳ ಜೊತೆ ಮಾತನಾಡುವಾಗ ಅವರು ‘ಟಾಕ್ಸಿಕ್’ ಟೀಸರ್ ಮತ್ತು ದೊಡ್ಡ ಸಿನಿಮಾಗಳು ತಡವಾಗುತ್ತಿರುವ ಬಗ್ಗೆ ಕೇಳಲಾದ ಪ್ರಶ್ನೆಗಳಿಗೆ ಖಡಕ್ ಉತ್ತರ ನೀಡಿದ್ದಾರೆ. ‘ಟಾಕ್ಸಿಕ್’ ಬಗ್ಗೆ ಪಾಸಿಟಿವ್ ವಿಷಯ ಹೇಳಿಕೊಂಡಿದ್ದಾರೆ.
‘ಟಾಕ್ಸಿಕ್’ ಸಿನಿಮಾದ ಟೀಸರ್ನಲ್ಲಿ ಬೋಲ್ಡ್ ದೃಶ್ಯ ಇತ್ತು. ಕನ್ನಡ ವೀಕ್ಷಕರಿಗೆ ಈ ರೀತಿಯ ವಿಷಯ ನೀಡೋದು ಸರಿ ಅಲ್ಲ ಎಂಬ ಮಾತು ಕೇಳಿ ಬಂದವು. ಆದರೆ, ಪುಷ್ಪಾ ಅವರು ಇದನ್ನು ಸಮರ್ಥಿಸಿಕೊಂಡಿದ್ದಾರೆ. ‘ಟಾಕ್ಸಿಕ್’ ವಿಳಂಬದ ಬಗ್ಗೆ ಅವರಿಗೆ ಯಾವುದೇ ತಕರಾರು ಇಲ್ಲ ಎಂದರು.
‘ಯಾವಾಗ ಯೂತ್ಸ್ ಬದಲಾಗುತ್ತಾರೋ, ಹಳೆಯ ಕಾಲದ ಸಿನಿಮಾಗಳನ್ನು ನೋಡಲು ಇಷ್ಟಪಡುತ್ತಾರೋ ಆಗ ನಿರ್ದೇಶಕರು ಅಂತಹ ಸಿನಿಮಾಗಳನ್ನೇ ಮಾಡುತ್ತಾರೆ. ಟೀಸರ್ ಎನ್ನುವುದು ಕೇವಲ ಪ್ರೇಕ್ಷಕರನ್ನು ಸೆಳೆಯುವ ಒಂದು ಸಣ್ಣ ಆಕರ್ಷಣೆಯಷ್ಟೇ. ಟೀಸರ್ ನೋಡಿಯೇ ಇಡೀ ಸಿನಿಮಾ ಹೀಗೆ ಇರುತ್ತದೆ ಎಂದು ನಿರ್ಧರಿಸಲು ಸಾಧ್ಯವಿಲ್ಲ. ಚಿತ್ರಮಂದಿರಕ್ಕೆ ಹೋಗಿ ಇಡೀ ಸಿನಿಮಾ ನೋಡಿದ ಮೇಲಷ್ಟೇ ಅದರ ಸಂಪೂರ್ಣ ಕಥೆ ತಿಳಿಯುತ್ತದೆ’ ಎಂದು ಟ್ರೋಲರ್‌ಗಳಿಗೆ ಪರೋಕ್ಷವಾಗಿ ಉತ್ತರಿಸಿದರು. ಅಲ್ಲದೆ ಯಾರು ಯಾವುದನ್ನು ಇಷ್ಟಪಡುತ್ತಾರೋ ಅದನ್ನೇ ಯಶ್ ನೀಡುತ್ತಾರೆ ಎಂದಿದ್ದಾರೆ ಅವರು.
ಯಶ್ ಅವರಂತಹ ದೊಡ್ಡ ಸ್ಟಾರ್‌ಗಳ ಸಿನಿಮಾಗಳು ಬಿಡುಗಡೆಯಾಗಲು ತುಂಬ ಸಮಯ ತೆಗೆದುಕೊಳ್ಳುತ್ತಿವೆ ಎನ್ನುವ ಚರ್ಚೆಗೆ ಉತ್ತರಿಸಿದ ಪುಷ್ಪಾ ಅವರು, ‘ಕನ್ನಡ ಚಿತ್ರರಂಗದವರು ಇಂದು ಇಷ್ಟು ದೊಡ್ಡ ಮಟ್ಟದ ಸಿನಿಮಾಗಳನ್ನು ಮಾಡುತ್ತಿದ್ದಾರೆ ಎನ್ನುವುದಕ್ಕೆ ನಾವು ಹೆಮ್ಮೆ ಪಡಬೇಕು. ನಮ್ಮವರು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವ ಬಿಗ್ ಬಜೆಟ್ ಸಿನಿಮಾಗಳನ್ನು ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದಾರೆ ಎಂದು ಬೇಜಾರು ಮಾಡಿಕೊಳ್ಳಬೇಕೋ ಅಥವಾ ಅವರು ಇಷ್ಟು ದೊಡ್ಡ ಸಾಧನೆ ಮಾಡುತ್ತಿದ್ದಾರೆ ಎಂದು ಹೆಮ್ಮೆ ಪಡಬೇಕೋ ನೀವೇ ಹೇಳಿ’ಎಂದು ಪ್ರಶ್ನಿಸುವ ಮೂಲಕ ಯಶ್ ಸಿನಿಮಾ ಮಾಡುತ್ತಿರುವ ಹೆಜ್ಜೆಯನ್ನು ಬೆಂಬಲಿಸಿದರು.
