ಮಂಡ್ಯ : ತಮಿಳುನಾಡಿನ ಮಾಜಿ ಸಿಎಂ ಎಂ.ಕೆ. ಸ್ಟಾಲಿನ್ ಅವರ ಪತ್ನಿ ದುರ್ಗಾ ಸ್ಟಾಲಿನ್ ಅವರು ನಿನ್ನೆ ಮಂಡ್ಯ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಶ್ರೀರಂಗಪಟ್ಟಣ ತಾಲ್ಲೂಕಿನ ಗಂಜಾಂನಲ್ಲಿರುವ ಐತಿಹಾಸಿಕ ಶ್ರೀ ನಿಮಿಷಾಂಬಾದೇವಸ್ಥಾನಕ್ಕೆ ಕುಟುಂಬಸ್ಥರೊಂದಿಗೆ ಭೇಟಿ ನೀಡಿದ ಅವರು, ಶಕ್ತಿ ದೇವತೆಯ ಆಶೀರ್ವಾದ ಪಡೆದರು. ಮೈಸೂರು ಭಾಗದ ಪ್ರಭಾವಿ ನಾಯಕ, ಶಾಸಕ ಜಿ.ಟಿ. ದೇವೇಗೌಡ ಅವರ ಪುತ್ರಿ ಹಾಗೂ ಅಳಿಯನೊಂದಿಗೆ ದೇಗುಲಕ್ಕೆ ಆಗಮಿಸಿದ ದುರ್ಗಾ ಸ್ಟಾಲಿನ್ ದೇವಿಗೆ ವಿಶೇಷ ಕಾಣಿಕೆಗಳನ್ನು ಸಮರ್ಪಿಸಿದರು.
ಹುಣ್ಣಿಮೆಯ ಹಿನ್ನೆಲೆಯಲ್ಲಿ ರೇಷ್ಮೆ ಸೀರೆ, ಗಾಜಿನ ಬಳೆಗಳು ಹಾಗೂ ಹೂ-ಹಣ್ಣು, ಕಾಯಿಗಳ ಮೂಲಕ ದೇವಿಯ ಮಡಿಲು ತುಂಬಿಸಿ ಶ್ರದ್ಧಾಭಕ್ತಿಯಿಂದ ‘ಉಡಿಸೇವೆ’ ನೆರವೇರಿಸಿದರು. ಸುಮಾರು 30 ನಿಮಿಷಗಳ ಕಾಲ ದೇವಸ್ಥಾನದಲ್ಲೇ ತಂಗಿದ್ದ ಅವರು, ದೇವಿಯ ಸಾಂಪ್ರದಾಯಿಕ ಪೂಜಾ ಕೈಂಕರ್ಯಗಳಲ್ಲಿ ಭಾಗಿಯಾದರು. ಇದೇ ವೇಳೆ ಶ್ರೀ ಅಂಜನೇಯಸ್ವಾಮಿಗೂ ಪೂಜೆ ಸಲ್ಲಿಸಿದ ಅವರು, ದೇಗುಲದ ಪ್ರಾಂಗಣದಲ್ಲಿ ಕುಳಿತು ಕೆಲಕಾಲ ಧ್ಯಾನಿಸಿದರು.
ದೇವಾಲಯದ ಪ್ರಧಾನ ಅರ್ಚಕರಾದ ಸೂರ್ಯನಾರಾಯಣ ಭಟ್ ಅವರು ದೇವಿಗೆ ಕುಂಕುಮಾರ್ಚನೆ, ದುರ್ಗಾ ಸಪ್ತಶತಿ ಪಾರಾಯಣದೊಂದಿಗೆ ಮಹಾಮಂಗಳಾರತಿ ನೆರವೇರಿಸಿ, ಬಳಿಕ ತೀರ್ಥ ಪ್ರಸಾದ ವಿತರಿಸಿದರು. ದುರ್ಗಾ ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್ ಅವರು ಈ ಹಿಂದೆ “ಸನಾತನ ಧರ್ಮವನ್ನು ಸೊಳ್ಳೆ, ಮಲೇರಿಯಾದಂತೆ ನಿರ್ಮೂಲನೆ ಮಾಡಬೇಕು” ಎಂದು ಹೇಳಿಕೆ ನೀಡಿ ದೇಶಾದ್ಯಂತ ತೀವ್ರ ವಿವಾದ ಹಾಗೂ ಆಕ್ರೋಶಕ್ಕೆ ಕಾರಣವಾಗಿದ್ದರು.
ತಮಿಳುನಾಡು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಉದಯನಿಧಿ ಅವರು, ಇತ್ತೀಚೆಗೆ ಮುಖ್ಯಮಂತ್ರಿ ದಳಪತಿ ವಿಜಯ್ ಅವರ ಸಮ್ಮುಖದಲ್ಲೂ “ಜನರನ್ನು ವಿಭಜಿಸುವ ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು” ಎಂದು ಹೇಳಿಕೆ ನೀಡಿ ಮತ್ತೆ ಸುದ್ದಿಯಾಗಿದ್ದರು. ಮಗ ಸನಾತನ ಧರ್ಮದ ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸುತ್ತಿದ್ದರೆ, ತಾಯಿ ದುರ್ಗಾ ಸ್ಟಾಲಿನ್ ಮಾತ್ರ ಮಗನ ಒಳಿತಿಗಾಗಿ ಶಕ್ತಿ ದೇವತೆಯ ಮೊರೆ ಹೋಗಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
