kranthikidi.com
ತಾಜಾಸುದ್ದಿಸಿನಿಮಾ

ರಾಜಕೀಯ ಪ್ರವೇಶ, ನಿರ್ಧಾರ ಅಭಿಮಾನಿಗಳ ಕೈಯಲ್ಲಿದೆ; ರಾಘವ್ ಲಾರೆನ್ಸ್

ಸಿನಿಮಾ ನಟ, ನಿರ್ದೇಶಕ ಮತ್ತು ಜನಪ್ರಿಯ ಕೋರಿಯೋಗ್ರಾಫರ್ ರಾಘವ್ ಲಾರೆನ್ಸ್ ಸಿನಿಮಾಗಳ ಜೊತೆಗೆ ತಮ್ಮ ಸಾಮಾಜಿಕ ಕಾರ್ಯದಿಂದಲೂ ಬಲು ಜನಪ್ರಿಯರು. ದಶಕಕ್ಕೂ ಹೆಚ್ಚು ಸಮಯದಿಂದಲೂ ರಾಘವ್ ಲಾರೆನ್ಸ್ ತಮ್ಮನ್ನು ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹಲವಾರು ಮಕ್ಕಳಿಗೆ ಶಿಕ್ಷಣ ಕೊಡಿಸಿದ್ದಾರೆ. ಅಂಗವಿಕಲರಿಗೆ ಬದುಕಲು ಆಸರೆ ಒದಗಿಸಿದ್ದಾರೆ. ಹಲವು ಮಹಿಳೆಯರಿಗೆ ಆಟೊ ರಿಕ್ಷಾ ಕೊಡಿಸಿ ಜೀವನ ಸಾಗಿಸಲು ನೆರವಾಗಿದ್ದಾರೆ. ಇನ್ನೂ ಅನೇಕ ಸಾಮಾಜಿಕ ಸೇವೆಗಳನ್ನು ಅವರು ಮಾಡುತ್ತಾ ಬಂದಿದ್ದಾರೆ. ಇದೀಗ ರಾಘವ್ ಲಾರೆನ್ಸ್ ರಾಜಕೀಯಕ್ಕೆ ಕಾಲಿರಿಸಲು ಮುಂದಾಗಿದ್ದು, ನಿರ್ಧಾರ ತೆಗೆದುಕೊಳ್ಳುವ ಜನವಾಬ್ದಾರಿಯನ್ನು ಅಭಿಮಾನಿಗಳಿಗೆ ವಹಿಸಿದ್ದಾರೆ.

ರಾಘವ್ ಲಾರೆನ್ಸ್ ಅವರು ರಾಜಕೀಯ ಪ್ರವೇಶದ ಬಗ್ಗೆ ಕಳೆದ ಕೆಲ ದಿನಗಳಿಂದಲೂ ಸುದ್ದಿಗಳು ಹರಿದಾಡುತ್ತಿದ್ದು, ತಮಿಳುನಾಡು ಸಿಎಂ ವಿಜಯ್ ಅವರು, ಎರಡು ಕ್ಷೇತ್ರದಿಂದ ಚುನಾವಣೆ ಎದುರಿಸಿ ಗೆದ್ದು ಒಂದು ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದಾರೆ. ಆ ಕ್ಷೇತ್ರದಿಂದ (ತಿರುಚ್ಚೀರ್ ಈಸ್ಟ್) ರಾಘವ್ ಲಾರೆನ್ಸ್ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ವಿಜಯ್ ಅವರ ಪಕ್ಷದಿಂದಲೇ ಅವರು ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದ್ದವು. ಇದರ ನಡುವೆ ಖುದ್ದು ರಾಘವ್ ಲಾರೆನ್ಸ್ ಅವರೇ ರಾಜಕೀಯ ಎಂಟ್ರಿಯ ಸುಳಿವು ನೀಡಿದ್ದಾರೆ.

ರಾಘವ್ ಲಾರೆನ್ಸ್ ಅವರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ತಾವು ರಜನೀಕಾಂತ್ ಅವರು ರಾಜಕೀಯ ಪ್ರವೇಶಿಸುವಾಗಲೇ ಅವರೊಟ್ಟಿಗೆ ರಾಜಕೀಯ ಪ್ರವೇಶಕ್ಕೆ ಉತ್ಸುಕರಾಗಿದ್ದಾಗಿ ಹೇಳಿಕೊಂಡಿದ್ದಾರೆ. ಆದರೆ ತಮ್ಮ ತಾಯಿ ಬೇಡ ಎಂದಿದ್ದ ಕಾರಣಕ್ಕಾಗಿ ಆಗಲೂ ಮತ್ತು ವಿಜಯ್ ಅವರು ಮೊದಲ ಬಾರಿ ಸಿಎಂ ಆದಾಗಲೂ ರಾಜಕೀಯದಿಂದ ದೂರ ಇದ್ದಿದ್ದಾಗಿ ಹೇಳಿದ್ದಾರೆ. ಆದರೆ ವಿಜಯ್ ಅವರ ಗೆಲುವು ಅವರ ತಾಯಿಯವರ ಮನಸ್ಥಿತಿಯನ್ನು ಬದಲಾಯಿಸಿದ್ದು, ಈಗ ತಾಯಿಯ ಅನುಮತಿ ಪಡೆದು ರಾಜಕೀಯಕ್ಕೆ ಬರುವ ಮನಸ್ಸು ಮಾಡಿರುವುದಾಗಿ ಹೇಳಿದ್ದಾರೆ. ಇದನ್ನೂ ಓದಿ : ಕಾಡುಗೋಡಿ ಮಗು ಕೊಲೆ ಪ್ರಕರಣ; ಮೂವರು ಪೊಲೀಸರ ತಲೆದಂಡ..!

ವಿಜಯ್ ಅವರ ಟಿವಿಕೆ ಪಕ್ಷದಿಂದ, ವಿಜಯ್ ಅವರ ಕ್ಷೇತ್ರವೇ ಆಗಿರುವ ತಿರುಚ್ಚಿ ಈಸ್ಟ್​​ನಿಂದ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿರುವುದಾಗಿ ರಾಘವ್ ಲಾರೆನ್ಸ್ ಹೇಳಿದ್ದಾರೆ. ಆದರೆ ತಾವು ರಾಜಕೀಯ ಪ್ರವೇಶಿಸಬೇಕೊ ಬೇಡವೊ ಎಂಬ ನಿರ್ಧಾರವನ್ನು ಅಭಿಮಾನಿಗಳ ಮೇಲೆ ಬಿಟ್ಟಿರುವುದಾಗಿ ಹೇಳಿರುವ ರಾಘವ್ ಲಾರೆನ್ಸ್, ತಾವು ರಾಜಕೀಯಕ್ಕೆ ಬರುವುದು ಇಷ್ಟವಾದರೆ ಎಸ್ ಎಂದೂ, ಇಷ್ಟವಿಲ್ಲವಾದರೆ ನೋ ಎಂದೂ ಕಮೆಂಟ್ ಮಾಡಿರೆಂದು ಹೇಳಿದ್ದಾರೆ. ಈಗಾಗಲೇ ಸಾಕಷ್ಟು ಮಂದಿ ಲಾರೆನ್ಸ್ ವಿಡಿಯೋಕ್ಕೆ ‘ಎಸ್’ ಎಂದು ಕಮೆಂಟ್ ಮಾಡುತ್ತಿದ್ದಾರೆ. ಕೆಲವರು ನೋ ಎಂದು ಸಹ ಕಮೆಂಟ್ ಮಾಡಿದ್ದಾರೆ.

Related posts

ಕೊಪ್ಪಳದಲ್ಲಿ ಪತ್ತೆಯಾದ ಶಿವಲಿಂಗಕ್ಕೂ ಸಿಎಂ ಡಿಕೆ ಶಿವಕುಮಾರ್​​ಗೂ ಲಿಂಕ್

Kalpana Editor

ಗ್ರಾಮಸ್ಥರಲ್ಲಿ ನಡುಕ ಹುಟ್ಟಿಸಿದ್ದ ಚಿರತೆ ಸೆರೆ; ನಿಟ್ಟುಸಿರು ಬಿಟ್ಟ ಜನ..!

Kalpana Editor

ಬುಡುಬುಡುಕೆ ಸ್ವಾಮೀಜಿ ವೇಷದಲ್ಲಿ ಬಂದು ಚಿನ್ನಾಭರಣ ದೋಚಿದ ಆಸಾಮಿ

Kalpana Editor