ರಾಜ್ಯಕ್ಕೆ ಮುಂಗಾರು ಮಳೆಯ ಆಗಮನವಾಗಿದ್ದರೂ ಕಾವೇರಿ ಮತ್ತು ಕೃಷ್ಣಾ ನದಿ ಜಲಾನಯನ ಪ್ರದೇಶಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಹಿನ್ನೆಲೆಯಲ್ಲಿ ಭೀಕರ ಬರಗಾಲದ ಪರಿಸ್ಥಿತಿ ನಿರ್ಮಾಣವಾಗುವ ಆತಂಕ ಎದುರಾಗಿದೆ. ಕಾವೇರಿ ಕೊಳ್ಳದ ಜೀವನಾಡಿಗಳಾದ ಕೆಆರ್ಎಸ್, ಕಬಿನಿ, ಹೇಮಾವತಿ ಹಾಗೂ ಉತ್ತರ ಕರ್ನಾಟಕದ ಪ್ರಮುಖ ಜಲಾಶಯವಾದ ಆಲಮಟ್ಟಿಯಲ್ಲೂ ನೀರಿನ ಸಂಗ್ರಹ ಗಣನೀಯವಾಗಿ ಕುಸಿದಿದೆ. ಜೂನ್ ಎರಡನೇ ವಾರ ಕಳೆದರೂ ಸಮರ್ಪಕ ಮಳೆಯಾಗದ ಕಾರಣ ಕುಡಿಯುವ ನೀರಿಗೂ ತತ್ವಾರ ಉಂಟಾಗುವ ಭೀತಿ ಎದುರಾಗಿದ್ದು, ರೈತ ವಲಯದಲ್ಲಿ ತೀವ್ರ ಆತಂಕ ಮೂಡಿಸಿದೆ.
ಕೆ.ಆರ್.ಎಸ್ ಜಲಾಶಯ – ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆ.ಆರ್.ಎಸ್ ಜಲಾಶಯದ ನೀರಿನ ಮಟ್ಟ ಸದ್ಯ 81.36 ಅಡಿಗೆ (ಗರಿಷ್ಠ 124.80 ಅಡಿ) ಕುಸಿದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 108.64 ಅಡಿ ನೀರಿದ್ದು, ಜೂನ್ನಲ್ಲೇ ಬಾಗಿನ ಅರ್ಪಿಸಲಾಗಿತ್ತು. ಸದ್ಯ ಡ್ಯಾಂನಲ್ಲಿರುವ 11.399 ಟಿಎಂಸಿ ನೀರಿನಲ್ಲಿ 5 ಟಿಎಂಸಿ ಡೆಡ್ ಸ್ಟೋರೇಜ್ ಆಗಿದ್ದು, ಬಳಕೆಗೆ ಸಿಗುವುದು ಕೇವಲ 6 ಟಿಎಂಸಿ ಮಾತ್ರ! ಸದ್ಯ ಒಳಹರಿವು ಕೇವಲ 581 ಕ್ಯೂಸೆಕ್ ಇದೆ. ಕಳೆದ ವರ್ಷ ತಮಿಳುನಾಡಿಗೆ ಹೆಚ್ಚುವರಿಯಾಗಿ 30 ಟಿಎಂಸಿ ನೀರು ಹರಿಸಲಾಗಿತ್ತು, ಆದರೆ ಈ ಬಾರಿ ನಿಗದಿತ 9 ಟಿಎಂಸಿ ನೀರು ಕೊಡುವುದೂ ಅಸಾಧ್ಯವಾಗಿದೆ.
ಕಬಿನಿ ಜಲಾಶಯ – ಮೈಸೂರು ಜಿಲ್ಲೆಯ ಕಬಿನಿ ಜಲಾಶಯದ ಸ್ಥಿತಿ ಮತ್ತಷ್ಟು ಶೋಚನೀಯವಾಗಿದ್ದು, ನೀರಿನ ಮಟ್ಟ 52.16 ಅಡಿಗೆ (ಗರಿಷ್ಠ 84 ಅಡಿ) ಕುಸಿದಿದೆ. ಪ್ರಸ್ತುತ ಕೇವಲ 4.68 ಟಿಎಂಸಿ ನೀರು ಮಾತ್ರ ಸಂಗ್ರಹವಿದ್ದು, ಬಳಸಬಹುದಾದ (Live Storage) ನೀರಿನ ಪ್ರಮಾಣ ಸಂಪೂರ್ಣ ಶೂನ್ಯವಾಗಿದೆ! ಕಳೆದ ವರ್ಷ ಇಲ್ಲಿ 15.89 ಟಿಎಂಸಿ ನೀರಿತ್ತು. ಸದ್ಯ ಎಡ ಮತ್ತು ಬಲದಂಡೆ ಕಾಲುವೆಗಳಿಗೆ ನೀರು ಬಿಡುಗಡೆಯನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ.
ಹೇಮಾವತಿ ಜಲಾಶಯ – ಹಾಸನ ಜಿಲ್ಲೆಯ ಗೊರೂರಿನಲ್ಲಿರುವ ಹೇಮಾವತಿ ಜಲಾಶಯದ ಒಡಲು ಕೂಡ ಬರಿದಾಗುತ್ತಿದೆ. 37.103 ಟಿಎಂಸಿ ಸಾಮರ್ಥ್ಯದ ಡ್ಯಾಂನಲ್ಲಿ ಸದ್ಯ ಕೇವಲ 14.586 ಟಿಎಂಸಿ ನೀರಿದ್ದು, ಬಳಕೆಗೆ ಯೋಗ್ಯವಿರುವುದು 10.214 ಟಿಎಂಸಿ ಮಾತ್ರ. ಮೂಡಿಗೆರೆ, ಸಕಲೇಶಪುರ ಭಾಗದಲ್ಲಿ ಮಳೆಯಾಗದಿದ್ದರೆ ಹಾಸನ ಮಾತ್ರವಲ್ಲದೆ ಮಂಡ್ಯ, ಮೈಸೂರು ಹಾಗೂ ತುಮಕೂರು ಜಿಲ್ಲೆಗಳ ಕೃಷಿಗೆ ಭಾರಿ ಹೊಡೆತ ಬೀಳಲಿದೆ.
ಕೃಷ್ಣಾ ನದಿ – ಉತ್ತರ ಕರ್ನಾಟಕದ ಭಾಗದಲ್ಲೂ ಮುಂಗಾರು ಕೈಕೊಟ್ಟಿದ್ದು, ಕೃಷ್ಣಾ ನದಿಯ ಉಗಮಸ್ಥಳವಾದ ಮಹಾರಾಷ್ಟ್ರದ ಮಹಾಬಲೇಶ್ವರದಲ್ಲಿ ಮಳೆ ಕೊರತೆಯಾಗಿದೆ. ಇದರ ನೇರ ಪರಿಣಾಮ ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯದ ಮೇಲೆ ಬಿದ್ದಿದ್ದು, ಸದ್ಯ ಜಲಾಶಯಕ್ಕೆ ಒಳಹರಿವು ಸಂಪೂರ್ಣ ಶೂನ್ಯವಾಗಿದೆ. ಪ್ರಸ್ತುತ ಆಲಮಟ್ಟಿ ಡ್ಯಾಂನ ನೀರಿನ ಮಟ್ಟ 508.26 ಮೀಟರ್ ಇದ್ದು, ಕಳೆದ ವರ್ಷ 514.72 ಮೀಟರ್ ದಾಖಲಾಗಿತ್ತು. ಮಳೆ ಕೊರತೆ ಹೀಗೆಯೇ ಮುಂದುವರಿದರೆ ವಿಜಯಪುರ ಸೇರಿದಂತೆ ಹಲವು ಪ್ರಮುಖ ನಗರಗಳ ಕುಡಿಯುವ ನೀರಿಗೆ ತೀವ್ರ ಸಂಕಷ್ಟ ಎದುರಾಗಲಿದೆ. ಇದನ್ನೂ ಓದಿ : ಒಂದು ವಾಹನಕ್ಕೆ 200 ಲೀಟರ್ ದಿನಕ್ಕೆ ಮಾತ್ರ – ಡೀಸೆಲ್ ಮಾರಾಟ ಮಿತಿಗೊಳಿಸಿದ ಕೇಂದ್ರ ಸರ್ಕಾರ..!
ಮಳೆ ಕೊರತೆಯಿಂದಾಗಿ ರಾಜ್ಯಾದ್ಯಂತ ಕೃಷಿ ಚಟುವಟಿಕೆಗಳು ಸಂಪೂರ್ಣ ವಿಳಂಬವಾಗಿವೆ. ಮಂಡ್ಯ ಜಿಲ್ಲೆಯಲ್ಲಿ ಈ ಬಾರಿ 2.07 ಲಕ್ಷ ಹೆಕ್ಟೇರ್ ಕೃಷಿ ಗುರಿ ಹೊಂದಲಾಗಿತ್ತಾದರೂ, ಕೇವಲ 11.138 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಇತ್ತ ವಿಜಯಪುರ ಜಿಲ್ಲೆಯಲ್ಲೂ 7.75 ಲಕ್ಷ ಹೆಕ್ಟೇರ್ ಮುಂಗಾರು ಬಿತ್ತನೆ ಗುರಿಯ ಪೈಕಿ ಪ್ರಸ್ತುತ ಬಿತ್ತನೆ ಪ್ರಮಾಣ ಭಾರಿ ಕುಸಿತ ಕಂಡಿದೆ. ಕಳೆದ ವರ್ಷ ಜೂನ್ ಆರಂಭದಲ್ಲೇ ಭರ್ಜರಿ ಬಿತ್ತನೆ ಕಾರ್ಯ ನಡೆದಿತ್ತು. ಆದರೆ ಈ ಬಾರಿ ಜಲಾಶಯಗಳು ಬರಿದಾಗುತ್ತಿರುವುದು ಮತ್ತು ಮುಂಗಾರು ಮಳೆ ಕೈಕೊಟ್ಟಿರುವುದು ಅನ್ನದಾತರನ್ನು ಕಣ್ಣೀರಲ್ಲಿ ಕೈ ತೊಳೆಯುವಂತೆ ಮಾಡಿದೆ.
