ಬೆಂಗಳೂರು : ಖಾತೆ ವಿಚಾರಕ್ಕೆ ಬೇಸರಗೊಂಡಿದ್ದ ಸಚಿವ ಕೃಷ್ಣ ಬೈರೇಗೌಡ ತಣ್ಣಗಾಗಿದ್ದಾರೆ. ಕೊನೆಗೂ ಬೆಂಗಳೂರು ಅಭಿವೃದ್ಧಿ ಖಾತೆ ಸಚಿವರಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ಕೃಷ್ಣಬೈರೇಗೌಡ ಅವರು ಇಂದು ಜಿಬಿಎ ಕೇಂದ್ರ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದ್ದಾರೆ. ಬಳಿಕ ಐದು ಜಿಬಿಎ ಆಯುಕ್ತರ ಜೊತೆ ಸಭೆ ನಡೆಸಿದರು.
ಜಿಬಿಎಯಲ್ಲಿ ಆಗುತ್ತಿರುವ ಪ್ರಗತಿ ಮತ್ತು ಯೋಜನೆಗಳ ಬಗ್ಗೆ ಚರ್ಚೆ ಆಯುಕ್ತರ ಸಭೆಯಲ್ಲಿ ಚರ್ಚಿಸಿದರು. ಸಭೆಯಲ್ಲಿ ಅಧಿಕಾರಿಗಳಿಗೆ ಸಚಿವರು ಕ್ಲಾಸ್ ತೆಗೆದುಕೊಂಡರು. ರಸ್ತೆ ಗುಂಡಿಗಳು ಬೀಳುತ್ತಿವೆ ಎಂದರು.
ನಿಮಗೆ ಗುಂಡಿಯಲ್ಲದ ರಸ್ತೆ ಮಾಡೋಕೆ ಆಗಲ್ವಾ..? ಒಂದು ಕಡೆ ರಸ್ತೆ ಮಾಡ್ತೀರಾ, ಮತ್ತೊಂದು ಕಡೆ ಗುಂಡಿ ಬೀಳುತ್ತೆ ಯಾಕೆ..? ಬೇರೆ ರಾಜ್ಯದಲ್ಲಿ ಈ ಸಮಸ್ಯೆ ಇಲ್ಲ, ಬೆಂಗಳೂರಲ್ಲಿ ಯಾಕೆ..? ಬೆಂಗಳೂರು ಅಂದರೆ ಗುಂಡಿ ಯಾಕೆ ಎಂದು ತರಾಟೆಗೆ ತೆಗೆದುಕೊಂಡರು. ಇದನ್ನೂಓದಿ : ಡ್ರಗ್ಸ್ ನೀಡಿ ಮಹಿಳೆ ಮೇಲೆ ಅತ್ಯಾಚಾರ, ಬಲವಂತದ ಮತಾಂತರ – ಇಬ್ಬರು ಬಂಧನ..!
ನಗರದ ರಸ್ತೆ ಗುಂಡಿಗಳನ್ನು ಮುಚ್ಚಲು ಅಗತ್ಯ ಅನುದಾನ ಲಭ್ಯವಿದೆ. ವ್ಯವಸ್ಥಿತವಾಗಿ ಹಾಗೂ ಗುಣಮಟ್ಟದೊಂದಿಗೆ ಗುಂಡಿ ಮುಚ್ಚುವ ಕಾಮಗಾರಿಗಳನ್ನು ಕೈಗೊಳ್ಳಬೇಕು. ಇದರಿಂದ ಭವಿಷ್ಯದಲ್ಲಿ ಉಂಟಾಗುವ ಸಮಸ್ಯೆಗಳನ್ನು ತಡೆಯಲು ಸಾಧ್ಯವಾಗುತ್ತದೆ. ರಸ್ತೆ ಕಾಮಗಾರಿಗಳ ಗುಣಮಟ್ಟವನ್ನು ಮತ್ತಷ್ಟು ಸುಧಾರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ನಗರದಲ್ಲಿ ಮನೆ-ಮನೆಗೆ ಕಸ ಸಂಗ್ರಹಿಸುವ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಕೆಲವರು ಮನೆ ಬಾಗಿಲಿಗೆ ಕಸ ಸಂಗ್ರಹ ವಾಹನ ಬಂದರೂ ರಸ್ತೆ ಬದಿಯಲ್ಲಿ ಕಸವನ್ನು ತಂದು ಹಾಕುತ್ತಿರುವುದು ಕಂಡುಬರುತ್ತಿದೆ. ಕಸ ಸಂಗ್ರಹಣಾ ವ್ಯವಸ್ಥೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ನಾಗರಿಕರ ಸಹಕಾರವೂ ಅಗತ್ಯವಾಗಿದೆ. ಅಧಿಕಾರಿಗಳು ಮತ್ತು ಸಾರ್ವಜನಿಕರು ಒಟ್ಟಾಗಿ ಕೆಲಸ ಮಾಡಿದಾಗ ಮಾತ್ರ ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಾಧ್ಯ ಎಂದು ಹೇಳಿದರು.
ಸಭೆಯಲ್ಲಿ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಮುಖ್ಯ ಆಯುಕ್ತ ಮಹೇಶ್ವರ ರಾವ್, ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್, ಸುಷಮಾ ಗೋಡಬೋಲೆ, ಡಾ. ಕೆ. ಹರೀಶ್ ಕುಮಾರ್, ವೆಂಕಟ ಚಲಪತಿ, ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ ಸಿಇಒ ಕರೀಗೌಡ, ನಗರ ಪಾಲಿಕೆ ಆಯುಕ್ತರಾದ ರಮೇಶ್ ಡಿ.ಎಸ್., ಪೊಮ್ಮಲ ಸುನೀಲ್ ಕುಮಾರ್, ಜಿ. ಜಗದೀಶ್, ರಮೇಶ್ ಕೆ.ಎನ್., ಡಾ. ರಾಜೇಂದ್ರ ಕೆ.ವಿ., ಅಪರ ಆಯುಕ್ತರು, ಜಂಟಿ ಆಯುಕ್ತರು, ಮುಖ್ಯ ಅಭಿಯಂತರರು ಸೇರಿದಂತೆ ಇತರೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಇದನ್ನೂ ಓದಿ : ವಚನಾನಂದ ಶ್ರೀಗೆ ನಿರೀಕ್ಷಣಾ ಜಾಮೀನು ಕೊಟ್ಟ ರೀತಿ ಆಘಾತಕಾರಿ ಎಂದ ಹೈಕೋರ್ಟ್
