ಬೆಂಗಳೂರು : ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಲಾಡ್ಲೆ ಮಶಾಕ್ ದರ್ಗಾ ಗಲಭೆ ಸೇರಿದಂತೆ 52 ಕ್ರಿಮಿನಲ್ ಕೇಸ್ ಹಿಂಪಡೆದಿದ್ದ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ ತಡೆ ನೀಡಿದೆ. ಸಚಿವ ಸಂಪುಟದ ಈ ನಿರ್ಧಾರವನ್ನು ಗಿರೀಶ್ ಭರದ್ವಾಜ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ತೀವ್ರವಾಗಿ ಆಕ್ಷೇಪಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಹಾಗೂ ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರಿದ್ದ ವಿಭಾಗೀಯ ಪೀಠವು ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ವಿಧಿಸಿದೆ.
ಅರ್ಜಿದಾರರ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ವೆಂಕಟೇಶ್ ದಳವಾಯಿ ಅವರು, ರಾಜ್ಯದ ಮೂವರು ಹಿರಿಯ ಸಚಿವರ ನೇರ ಶಿಫಾರಸಿನ ಮೇರೆಗೆ ನಿಯಮಗಳನ್ನು ಗಾಳಿಗೆ ತೂರಿ ಈ ಕೇಸ್‌ಗಳನ್ನು ಕೈಬಿಡಲಾಗಿದೆ. ಹೂಡಲಾಗಿದ್ದ ಕ್ರಿಮಿನಲ್ ಪ್ರಕರಣಗಳನ್ನು ಪ್ರಾಸಿಕ್ಯೂಷನ್‌ನಿಂದ ಹಿಂಪಡೆಯುವ ಸರ್ಕಾರದ ಈ ನಿಲುವು, ಇದೇ ವಿಷಯಕ್ಕೆ ಸಂಬಂಧಿಸಿದಂತೆ 2025 ರಲ್ಲಿ ಹೈಕೋರ್ಟ್ ನೀಡಿದ್ದ ಕಟ್ಟುನಿಟ್ಟಿನ ಆದೇಶಕ್ಕೆ ಸಂಪೂರ್ಣ ತದ್ವಿರುದ್ಧವಾಗಿದೆ. ಇದು ಕೇವಲ ರಾಜಕೀಯ ದುರುದ್ದೇಶದಿಂದ ಕೂಡಿದ ತೀರ್ಮಾನ ಎಂದು ವಾದಿಸಿದ್ದರು.
2022ರ ಮಹಾ ಶಿವರಾತ್ರಿಯಂದು ಲಾಡ್ಲೆ ಮಶಾಕ್ ದರ್ಗಾ ಆವರಣದಲ್ಲಿದ್ದ ರಾಘವ ಚೈತನ್ಯ ಶಿವಲಿಂಗಕ್ಕೆ ಕಿಡಿಗೇಡಿಗಳು ಮಲಮೂತ್ರ ವಿಸರ್ಜನೆ ಮಾಡಿ ವಿಕೃತಿ ಮೆರೆದಿದ್ದರು. ಈ ಹಿನ್ನೆಲೆಯಲ್ಲಿ ಜಾಗವನ್ನು ಸ್ವಚ್ಛಗೊಳಿಸಿ ಪೂಜೆ ಮಾಡಲು ತೆರಳಿದ್ದ ಅಂದಿನ ಕೇಂದ್ರ ಸಚಿವ ಭಗವಂತ ಖೂಬಾ, ಸ್ಥಳೀಯ ಶಾಸಕರು ಹಾಗೂ ಭದ್ರತೆಯ ಉಸ್ತುವಾರಿ ಹೊತ್ತಿದ್ದ ಡಿಸಿ ಮತ್ತು ಎಸ್‌ಪಿ ಅವರ ಕಾರುಗಳ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಕಲ್ಲು ತೂರಾಟ ನಡೆಸಲಾಗಿತ್ತು.
ಈ ಗಲಭೆಗೆ ಸಂಬಂಧಿಸಿದಂತೆ ವಿವಿಧ ಮುಸ್ಲಿಂ ಮುಖಂಡರು ಮತ್ತು ಯುವಕರ ಮೇಲೆ ಒಟ್ಟು 13 ಪ್ರಕರಣಗಳು ದಾಖಲಾಗಿದ್ದವು. ಅಂದಿನ ವಿಧಾನಸಭಾ ಸಭಾಧ್ಯಕ್ಷರಾದ ಯು.ಟಿ ಖಾದರ್ ಅವರ ಲಿಖಿತ ಮನವಿಯ ಮೇರೆಗೆ ಸರ್ಕಾರ ಈ ಎಲ್ಲಾ ಕೇಸ್‌ಗಳನ್ನು 2026 ಮೇ 27ರ ರಂದು ವಾಪಸ್ ಪಡೆದಿತ್ತು. ಇದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
ಸರ್ಕಾರದ ಈ ಆದೇಶದಿಂದಾಗಿ ಕೋಮು ಗಲಭೆಯ ಆರೋಪಿಗಳು, ಕೆಲವು ರಾಜಕಾರಣಿಗಳು, ರೈತಪರ ಹಾಗೂ ಕನ್ನಡಪರ ಸಂಘಟನೆಗಳ ಹೋರಾಟಗಾರರಿಗೆ ದೊಡ್ಡ ನಿರಾಳತೆ ಸಿಕ್ಕಂತಾಗಿತ್ತು. ಆದರೆ ಹೈಕೋರ್ಟ್ ಈಗ ನೀಡಿರುವ ತಡೆಯಾಜ್ಞೆಯಿಂದಾಗಿ ಎಲ್ಲಾ 52 ಕ್ರಿಮಿನಲ್ ಪ್ರಕರಣಗಳ ಕಾನೂನು ಪ್ರಕ್ರಿಯೆಗಳು ಹಾಗೂ ನ್ಯಾಯಾಲಯದ ವಿಚಾರಣೆಗಳು ಯಥಾಸ್ಥಿತಿಯಲ್ಲಿ ಮುಂದುವರಿಯಲಿವೆ. ಮುಂಬರುವ ದಿನಗಳಲ್ಲಿ ಸರ್ಕಾರದ ಮುಂದಿನ ನಡೆ ಏನು ಎಂಬುದು ಕುತೂಹಲ ಮೂಡಿಸಿದೆ. ಇದನ್ನೂ ಓದಿ : ಕಲ್ಲು ಕ್ವಾರೆ ದುರಂತ; ಮೃತರ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಲಿ – ಹೆಚ್‌ಡಿಕೆ
