July 12, 2026
kranthikidi.com
ತಾಜಾಸುದ್ದಿದೇಶ

ಪೆಟ್ರೋಲ್‌ ಟ್ಯಾಂಕ್‌ಗೆ ನೀರು ಹಾಕಿ ಎಥೆನಾಲ್‌ ವಿರುದ್ಧ ಅಪಪ್ರಚಾರ; ಯೂಟ್ಯೂಬರ್‌ ವಿರುದ್ಧ ಟೊಯೋಟಾ ಎಫ್‌ಐಆರ್‌

ನವದೆಹಲಿ : ಕೇಂದ್ರ ಸರ್ಕಾರದ ಎಥೆನಾಲ್ ಮಿಶ್ರಿತ ಪೆಟ್ರೋಲ್ ನೀತಿಯನ್ನು ವಿರೋಧಿಸಿ ವಿಡಿಯೋ ಮಾಡಿದ್ದ ಬಿಹಾರದ ಪ್ರಸಿದ್ಧ ಯೂಟ್ಯೂಬರ್ ಮನೀಶ್ ಕಶ್ಯಪ್ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸುಳ್ಳು ಆರೋಪ ಮತ್ತು ವದಂತಿ ಹರಡಿದ ಹಿನ್ನೆಲೆಯಲ್ಲಿ ಪ್ರಮುಖ ಕಾರು ತಯಾರಿಕಾ ಕಂಪನಿ ಟೊಯೋಟಾ ಮನೀಶ್ ವಿರುದ್ಧ ಎಫ್‌ಐಆರ್ ದಾಖಲಿಸಿದೆ. ಈ ಕುರಿತು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಮನೀಶ್ ಕಶ್ಯಪ್ ಅವರ ಆರೋಪಗಳನ್ನು ಸಂಪೂರ್ಣ ಸುಳ್ಳು ಎಂದು ತಳ್ಳಿಹಾಕಿದ್ದಾರೆ.

ಇತ್ತೀಚೆಗೆ ಮನೀಶ್ ಕಶ್ಯಪ್ ಅವರು ಟೊಯೋಟಾ ಕಂಪನಿಯ ಹೊಸ ಇನ್ನೋವಾ ಹೈಕ್ರಾಸ್ ಕಾರನ್ನು ಖರೀದಿಸಿದ್ದರು. ಕಾರು ಖರೀದಿಸಿದ ಕೆಲವೇ ದಿನಗಳಲ್ಲಿ ಅದರ ಇಂಜಿನ್‌ನಲ್ಲಿ ಭಾರಿ ಕಂಪನ ಮತ್ತು ಶಬ್ದ ಬರುತ್ತಿದೆ ಎಂದು ಟೊಯೋಟಾ ಸರ್ವಿಸ್ ಸೆಂಟರ್‌ನಿಂದ ವಿಡಿಯೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಸರ್ಕಾರ ಜಾರಿಗೆ ತಂದಿರುವ ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಸಿದ್ದರಿಂದಲೇ ತಮ್ಮ ಹೊಸ ಕಾರಿನ ಇಂಜಿನ್ ಹಾಳಾಗಿದೆ ಎಂದು ಮನೀಶ್ ನೇರವಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ಸರ್ಕಾರದ ಎಥೆನಾಲ್ ನೀತಿಯನ್ನು ತೀವ್ರವಾಗಿ ಟೀಕಿಸಿದ್ದರು. ಈ ವಿಡಿಯೋ ದೇಶಾದ್ಯಂತ ಭಾರಿ ವೈರಲ್ ಆಗಿ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿತ್ತು.

ವಿಡಿಯೋ ವೈರಲ್ ಆದ ಬೆನ್ನಲ್ಲೇ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಅಧಿಕೃತ ಪ್ರಕಟಣೆ ಹೊರಡಿಸಿ ಮನೀಶ್ ಅವರ ಆರೋಪವನ್ನು ಸಂಪೂರ್ಣವಾಗಿ ನಿರಾಕರಿಸಿತು. ಕಂಪನಿಯ ತಾಂತ್ರಿಕ ಪರಿಣಿತರು ಕಾರನ್ನು ತಪಾಸಣೆ ನಡೆಸಿದಾಗ ಮಹತ್ವದ ಸತ್ಯ ಹೊರಬಿದ್ದಿದೆ. ಇನೋವಾ ಹೈಕ್ರಾಸ್ ಕಾರನ್ನು ಮೊದಲೇ E20 ಇಂಧನಕ್ಕೆ ತಕ್ಕಂತೆ ವಿನ್ಯಾಸಗೊಳಿಸಿ, ಪ್ರಮಾಣೀಕರಿಸಲಾಗಿದೆ. ಮನೀಶ್ ಅವರ ಕಾರಿನ ಇಂಧನ ಟ್ಯಾಂಕ್ ಅನ್ನು ಪರಿಶೀಲಿಸಿದಾಗ, ಅದರಲ್ಲಿ ಪೆನಾಲ್ಟಿ ಇಂಧನದ ಜೊತೆಗೆ ನೀರು ಮತ್ತು ಕಸದಂತಹ ಹೊರಗಿನ ಕಲ್ಮಶಗಳು ಪತ್ತೆಯಾಗಿವೆ.

ಸಮಸ್ಯೆಯು ಕಲಬೆರಕೆ ಇಂಧನದಿಂದಾಗಿದೆಯೇ ಹೊರತು E20 ಪೆಟ್ರೋಲ್‌ನಿಂದಲ್ಲ ಎಂದು ಸ್ಪಷ್ಟಪಡಿಸಿದ ಕಂಪನಿ ಸುಳ್ಳು ಮಾಹಿತಿ ಹರಡಿ ಕಂಪನಿಯ ಹೆಸರಿಗೆ ಮಸಿ ಬಳಿಯಲು ಯತ್ನಿಸಿದ್ದಕ್ಕಾಗಿ ಮನೀಶ್ ವಿರುದ್ಧ ಎಫ್‌ಐಆರ್‌ ದಾಖಲಿಸಿದೆ. ಕಾರ್ಯಕ್ರಮವೊಂದರಲ್ಲಿ ಈ ಕುರಿತು ಮಾತನಾಡಿದ ಕೇಂದ್ರ ಸಚಿವ ನಿತಿನ್ ಗಡ್ಕರಿ, “ಆ ಯೂಟ್ಯೂಬರ್ ಸಾರ್ವಜನಿಕವಾಗಿ ನಮ್ಮ ಎಥೆನಾಲ್ ನೀತಿಯನ್ನು ಟೀಕಿಸಿದ್ದರು. ಆದರೆ ಆರಂಭದಲ್ಲಿ ಅವರು ತಮ್ಮ ಕಾರನ್ನು ತಪಾಸಣೆಗೆ ನೀಡಲು ನಿರಾಕರಿಸಿದ್ದರು. ಕಂಪನಿಯು ಕಾನೂನು ಕ್ರಮದ ಎಚ್ಚರಿಕೆ ನೀಡಿದ ಬಳಿಕವಷ್ಟೇ ಕಾರನ್ನು ನೀಡಿದರು.

ತಪಾಸಣೆಯಲ್ಲಿ ಅವರ ಕಾರಿನ ಟ್ಯಾಂಕ್‌ನಲ್ಲಿ ಪೆಟ್ರೋಲ್ ಜೊತೆ ನೀರು ಮಿಶ್ರಣವಾಗಿರುವುದು ಪತ್ತೆಯಾಗಿದೆ” ಎಂದು ಬಹಿರಂಗಪಡಿಸಿದರು. ಇದೇ ವೇಳೆ ಗಡ್ಕರಿ ಅವರು “ದೇಶದಲ್ಲಿ ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಸಿದ್ದರಿಂದ ಇಂಜಿನ್ ಹಾಳಾಗಿರುವ ಒಂದೇ ಒಂದು ಕಾರನ್ನು ತೋರಿಸಿ” ಎಂದು ಬಹಿರಂಗ ಸವಾಲು ಹಾಕಿದ್ದಾರೆ. ಮನೀಶ್ ಕಶ್ಯಪ್ ಅವರ ಸುಳ್ಳು ಆರೋಪ ಅವರನ್ನೇ ಕಾನೂನು ಸಂಕಷ್ಟಕ್ಕೆ ದೂಡಿದೆ. ಇದನ್ನೂ ಓದಿ : ಸೂರ್ಯ, ಚಂದ್ರ ಇರೋವರೆಗೂ ಜಾನಕಿ ಅಮ್ಮ ಶಾಶ್ವತ; ವಿಜಯ ಪ್ರಕಾಶ್‌ ಭಾವುಕ..!

Related posts

ಕಾಂಗ್ರೆಸ್ ಜೊತೆ ವಿಲೀನಕ್ಕೆ ಠಾಕ್ರೆ ಪ್ಲಾನ್ ಎಂದ 6 ಬಂಡಾಯ ಸಂಸದರು

Kalpana Editor

ಕಂದಾಯ ಇಲಾಖೆಯಲ್ಲಿ ಭಾರಿ ಗೋಲ್ಮಾಲ್, 1000 ಎಕರೆ ಭೂ ಅಕ್ರಮ ಬಯಲಿಗೆ..!

Kalpana Editor

ಪದ್ಮನಾಭಸ್ವಾಮಿ ದೇವಸ್ಥಾನದಲ್ಲಿ ಭದ್ರತಾ ಲೋಪ; ಚಿನ್ನ, ಅಮೂಲ್ಯ ವಜ್ರಾಭರಣ ನಾಪತ್ತೆ..!

Kalpana Editor