ರಾಮನಗರ : ಬಿಡದಿ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದಂತೆ ಜಂಟಿ ಭೂಮಾಪನ ಕಾರ್ಯದ ವೇಳೆ ಉಂಟಾದ ಜಟಾಪಟಿ ಈಗ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಮಂಡಲಹಳ್ಳಿಯಲ್ಲಿ ಜೆಎಂಸಿ ಸರ್ವೆಗೆ ತಡೆಯೊಡ್ಡಿ, ಕಂದಾಯ ಇಲಾಖೆಯ ಅಧಿಕಾರಿಗಳ ಮೇಲೆ ದೈಹಿಕ ಹಲ್ಲೆ ಹಾಗೂ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ 20ಕ್ಕೂ ಹೆಚ್ಚು ರೈತರ ವಿರುದ್ಧ ಬಿಡದಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಕಂದಾಯ ಅಧಿಕಾರಿಗಳು ನೀಡಿದ ಅಧಿಕೃತ ದೂರಿನ ಅನ್ವಯ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.
ಬಿಡದಿ ಟೌನ್‌ಶಿಪ್ ಯೋಜನೆಯ ವ್ಯಾಪ್ತಿಗೆ ಬರುವ ಹಲವು ಗ್ರಾಮಗಳಲ್ಲಿ ಇಂದೂ ಕೂಡ ರೈತರು ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ. ಜಿಲ್ಲಾಡಳಿತ ಅಥವಾ ಅಧಿಕಾರಿಗಳು ಮತ್ತೆ ಜೆಎಂಸಿ ಸರ್ವೆಯನ್ನು ಮುಂದುವರಿಸಲು ಮುಂದಾದರೆ, ಸ್ಥಳದಲ್ಲೇ ತಡೆದು ತೀವ್ರ ಪ್ರತಿಭಟನೆ ನಡೆಸಲು ರೈತ ಸಂಘಟನೆಗಳು ಮತ್ತು ಸ್ಥಳೀಯರು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.

ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಸದ್ಯಕ್ಕೆ ಜೆಎಂಸಿ ಸರ್ವೆ ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಗೊಂದಲ ಮತ್ತು ಸಂಘರ್ಷಕ್ಕೆ ಆಸ್ಪದ ನೀಡದೆ, ಮುಂದಿನ ದಿನಗಳಲ್ಲಿ ಮೊದಲು ಪ್ರತಿಭಟನಾ ನಿರತ ರೈತರೊಂದಿಗೆ ಶಾಂತಿಯುತ ಮಾತುಕತೆ ನಡೆಸಲು ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.
ಮತ್ತೊಂದೆಡೆ, ಯೋಜನೆಗೆ ಒಪ್ಪಿಗೆ ಸೂಚಿಸಿರುವ ಅಂದರೆ ಟೌನ್‌ಶಿಪ್ ಪರವಾಗಿರುವ ರೈತರ ಜಮೀನುಗಳ ಸರ್ವೆ ಕಾರ್ಯವನ್ನು ಮಾತ್ರ ಕೈಗೆತ್ತಿಕೊಳ್ಳಲು ಜಿಲ್ಲಾಡಳಿತ ನಿರ್ಧರಿಸಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಹೆಚ್ಚಿನ ಪೊಲೀಸ್ ಭದ್ರತೆಯನ್ನು ಪಡೆದುಕೊಂಡು, ಯೋಜನೆ ಪರ ಇರುವ ರೈತರ ಜಮೀನಿನ ಜೆಎಂಸಿ ಸರ್ವೆ ನಡೆಸಲು ಅಧಿಕಾರಿಗಳು ಸದ್ದಿಲ್ಲದೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ : ಬಿಜೆಪಿ ಹಿರಿಯ ನಾಯಕ, ಮಾಜಿ ಸಚಿವ ರಾಮಚಂದ್ರೇಗೌಡ ನಿಧನ..!
