ಹಾವೇರಿ : ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಕ್ರಿಮಿನಲ್ಗಳಿಗೆ ಪೊಲೀಸರ ಹಾಗೂ ಕಾನೂನಿನ ಭಯವೇ ಇಲ್ಲದಂತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾವೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ನಿರಂತರವಾಗಿ ನಡೆಯುತ್ತಿರುವ ಅಪರಾಧ ಕೃತ್ಯಗಳ ಬಗ್ಗೆ ಜಿಲ್ಲಾಡಳಿತ ಹಾಗೂ ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಹಾವೇರಿ ಜಿಲ್ಲೆಯಲ್ಲಿ ಹಿಂದೆಂದೂ ಕೇಳರಿಯದಂತಹ ಅಪರಾಧ ಸರಣಿಗಳು ಈಗ ಸಾಲು ಸಾಲಾಗಿ ನಡೆಯುತ್ತಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಸರಣಿ ಅಪರಾಧಗಳು – ಬೊಮ್ಮಾಯಿ ಅವರು ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಪ್ರಮುಖ ಘಟನೆಗಳನ್ನು ಉಲ್ಲೇಖಿಸಿ ಶಿಗ್ಗಾಂವಿಯಲ್ಲಿ ಸಾರ್ವಜನಿಕವಾಗಿ, ನಡುರಸ್ತೆಯಲ್ಲಿ ಮಧ್ಯಾಹ್ನ 12 ಗಂಟೆಗೆ ಕೊಲೆ ನಡೆದಿರುವುದು ಆತಂಕಕಾರಿ ಸಂಗತಿಯಾಗಿದೆ. ಹಾನಗಲ್ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳು ಬೇಲ್ ಮೇಲೆ ಹೊರಬಂದ ನಂತರ, ತಾವೇನೋ ದೊಡ್ಡ ಯುದ್ಧ ಗೆದ್ದು ಬಂದಂತೆ ಸಾರ್ವಜನಿಕವಾಗಿ ಮೆರವಣಿಗೆ ನಡೆಸಿದ್ದಾರೆ.
ಇದು ಅಪರಾಧಿಗಳಿಗೆ ಕಾನೂನಿನ ಭಯವಿಲ್ಲದಿರುವುದಕ್ಕೆ ಸಾಕ್ಷಿ. ರಾಣೇಬೆನ್ನೂರಿನಲ್ಲಿ ಅಕ್ರಮ ಕಸಾಯಿಖಾನೆಗಳನ್ನು ಮುಚ್ಚುವಂತೆ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ ಬಜರಂಗದಳ ಮತ್ತು ಹಿಂದೂ ಕಾರ್ಯಕರ್ತರನ್ನೇ ಪೊಲೀಸರು ಬಂಧಿಸಿದ್ದಾರೆ. ಪ್ಯಾಟಿಹಾಳ ಗ್ರಾಮದಲ್ಲೂ ಕೂಡ ಇತ್ತೀಚೆಗೆ ಕೊಲೆ ನಡೆದಿದೆ ಎಂದು ತಿಳಿಸಿದರು. ಜಿಲ್ಲೆಯಲ್ಲಿ ಲವ್ ಜಿಹಾದ್ ಹಾಗೂ ಕೊಲೆಯಂತಹ ಗಂಭೀರ ಪ್ರಕರಣಗಳು ನಿರಂತರವಾಗಿ ನಡೆಯುತ್ತಿದ್ದರೂ ಸರ್ಕಾರ ಮತ್ತು ಪೊಲೀಸ್ ಇಲಾಖೆ ಮೂಕಪ್ರೇಕ್ಷಕನಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ವೈಫಲ್ಯವನ್ನು ಖಂಡಿಸಿ ಇಂದು ಹಾವೇರಿಯಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಸ್ಥಳೀಯ ಪೊಲೀಸರ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತ : ಜಿಲ್ಲೆಯಲ್ಲಿ ಹದಗೆಡುತ್ತಿರುವ ಕಾನೂನು ಸುವ್ಯವಸ್ಥೆಗೆ ಸ್ಥಳೀಯ ಪೊಲೀಸರ ಭ್ರಷ್ಟಾಚಾರವೇ ಪ್ರಮುಖ ಕಾರಣ ಎಂದು ಬೊಮ್ಮಾಯಿ ಆರೋಪಿಸಿದರು. ರಾಜಕೀಯ ಮುಖಂಡರ ಒತ್ತಡಕ್ಕೆ ಮಣಿದು ಕಾರ್ಯನಿರ್ವಹಿಸುತ್ತಿರುವ ಪೊಲೀಸರು, ತಮಗೆ ನೀಡಲಾದ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ, ಜನರಿಗೆ ಸೂಕ್ತ ನ್ಯಾಯ ಸಿಗುವವರೆಗೂ ಮತ್ತು ಪೊಲೀಸರ ದೌರ್ಜನ್ಯ ತಡೆಯುವವರೆಗೂ ವಿವಿಧ ಸ್ವರೂಪದ ಹೋರಾಟಗಳು ಮುಂದುವರಿಯಲಿವೆ ಎಂದು ಅವರು ತಿಳಿಸಿದರು.
ನಿಷ್ಕ್ರಿಯಗೊಂಡ ನೀರಾವರಿ ಇಲಾಖೆ : ರಾಜ್ಯದಲ್ಲಿ ಸುಮಾರು 350ಕ್ಕೂ ಹೆಚ್ಚು ಏತ ನೀರಾವರಿ ಯೋಜನೆಗಳಿದ್ದರೂ, ನೀರಾವರಿ ಇಲಾಖೆಯು ಕಳೆದ ಮೂರು ವರ್ಷಗಳಿಂದ ಸಂಪೂರ್ಣವಾಗಿ ನಿಷ್ಕ್ರಿಯಗೊಂಡಿದೆ. ಹಾಲಿ ಮುಖ್ಯಮಂತ್ರಿಗಳೇ ಈ ಹಿಂದೆ ಈ ಇಲಾಖೆಯ ಸಚಿವರಾಗಿದ್ದರೂ ಯಾವುದೇ ಗಮನಾರ್ಹ ಪ್ರಗತಿಯಾಗಿಲ್ಲ. ನದಿಗಳಲ್ಲಿದ್ದ ನೀರು ಸದ್ಬಳಕೆಯಾಗಿಲ್ಲ : ಪಶ್ಚಿಮ ಘಟ್ಟಗಳಲ್ಲಿ ಹಾಗೂ ರಾಜ್ಯದ ವಿವಿಧ ಭಾಗಗಳಲ್ಲಿ ಉತ್ತಮ ಮಳೆಯಾಗಿ, ತುಂಗಾ ಜಲಾಶಯ ಭರ್ತಿಯಾಗಿತ್ತು. ಅಲ್ಲದೆ ವರದಾ, ಮಲಪ್ರಭಾ, ಘಟಪ್ರಭಾ ಮತ್ತು ಕೃಷ್ಣಾ ನದಿಗಳಲ್ಲೂ ಸಾಕಷ್ಟು ನೀರಿತ್ತು. ಆದರೆ, ಈ ನೀರನ್ನು ಏತ ನೀರಾವರಿ ಯೋಜನೆಗಳ ಮೂಲಕ ಸದ್ಬಳಕೆ ಮಾಡಿಕೊಳ್ಳಲು ಇಲಾಖೆ ವಿಫಲವಾಗಿದೆ ಎಂದು ಆರೋಪಿಸಿದರು.
ಬಿಲ್ ಬಾಕಿ ಮತ್ತು ನಿರ್ವಹಣೆ ಕೊರತೆ: ಯೋಜನೆಗಳಿಗೆ ಸಂಬಂಧಿಸಿದಂತೆ ವಿದ್ಯುತ್ ಬಿಲ್ (ಪವರ್ ಚಾರ್ಜಸ್) ಪಾವತಿಸದ ಕಾರಣ ಯೋಜನೆಗಳು ಸ್ಥಗಿತಗೊಂಡಿವೆ. ಅಲ್ಲದೆ, ಕಾಲುವೆಗಳ ಹೂಳು ತೆಗೆಯುವ ಕನಿಷ್ಠ ಕೆಲಸವನ್ನೂ ಇಲಾಖೆ ಮಾಡಿಲ್ಲ. ಹೊಸ ಯೋಜನೆಗಳನ್ನು ಜಾರಿಗೆ ತರುವುದಿರಲಿ, ಕನಿಷ್ಠ ಪಕ್ಷ ಹಳೆಯ ಯೋಜನೆಗಳನ್ನಾದರೂ ಸರಿಯಾಗಿ ನಿರ್ವಹಿಸಲು ಈ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಬಸವರಾಜ ಬೊಮ್ಮಾಯಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಬೆಳೆ ವಿಮೆ ವಿಳಂಬ: ನಾಳೆ ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿ – ಇದೇ ವೇಳೆ ರಾಜ್ಯದಲ್ಲಿ ರೈತರ ಬೆಳೆ ವಿಮೆ ದೃಢೀಕರಣ ಪತ್ರ ವಿತರಣೆಯಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, “ಈಗಾಗಲೇ ಈ ಕುರಿತು ಸಂಬಂಧಪಟ್ಟವರಿಗೆ ಪತ್ರ ಬರೆಯಲಾಗಿದೆ. ನಾಳೆ ದೆಹಲಿಗೆ ಭೇಟಿ ನೀಡಲಿದ್ದು, ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಖುದ್ದಾಗಿ ಭೇಟಿಯಾಗಿ ಚರ್ಚಿಸಿ ಈ ಸಮಸ್ಯೆಯನ್ನು ಆದಷ್ಟು ಬೇಗ ಇತ್ಯರ್ಥಪಡಿಸಲಾಗುವುದು” ಎಂದು ಭರವಸೆ ನೀಡಿದರು. ಹಾವೇರಿ ಮೆಡಿಕಲ್ ಕಾಲೇಜು ಸೋರುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಕುರಿತು ಖುದ್ದಾಗಿ ಭೇಟಿ ನೀಡಿ ಪರಿಶೀಲಿಸುವುದಾಗಿ ತಿಳಿಸಿದರು. ಇದನ್ನೂ ಓದಿ : ಹೊತ್ತಿ ಉರಿದ ಕೊಟ್ಟಿಗೆ – 12 ಜಾನುವಾರುಗಳು ಸಜೀವ ದಹನ..!
