June 13, 2026
kranthikidi.com
ತಾಜಾಸುದ್ದಿರಾಜ್ಯ

ನೂತನ ಶೈಕ್ಷಣಿಕ ವರ್ಷಕ್ಕೆ ಕಾಲಿಡುತ್ತಿರುವ ವಿದ್ಯಾರ್ಥಿಗಳಿಗೆ ಶುಭವಾಗಲಿ – ಡಿ.ಕೆ. ಶಿವಕುಮಾರ್

ಬೆಂಗಳೂರು : “ಇಂದಿನಿಂದ ನೂತನ ಶೈಕ್ಷಣಿಕ ವರ್ಷ ಪ್ರಾರಂಭವಾಗಲಿದೆ. ನನ್ನ ಪ್ರೀತಿಯ ವಿದ್ಯಾರ್ಥಿಗಳಿಗೆ ಶುಭವಾಗಲಿ, ಯಶಸ್ಸು ಸಿಗಲಿ ಎಂದು ಸರ್ಕಾರದ ಪರವಾಗಿ ಹಾಗೂ ವೈಯಕ್ತಿಕವಾಗಿ ಹಾರೈಸುತ್ತೇನೆ” ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾದ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳಿಗೆ ಶಿವಕುಮಾರ್ ಅವರು ಸೋಮವಾರ ಪ್ರತಿಕ್ರಿಯೆ ನೀಡಿದರು.

“ನಮ್ಮಲ್ಲಿ ಓದಿರುವ ವಿದ್ಯಾರ್ಥಿಗಳು ಜಾಗತಿಕ ಮಟ್ಟದಲ್ಲಿ ಅತ್ಯಮೂಲ್ಯ ಮಾನವ ಸಂಪನ್ಮೂಲವಾಗಿ ತಮ್ಮದೇ ಆದ ಕೊಡುಗೆ ನೀಡಿದ್ದು, ಇಡೀ ವಿಶ್ವ ಇದಕ್ಕೆ ಸಾಕ್ಷಿಯಾಗಿದೆ. ನಮ್ಮ ಜ್ಞಾನದ ಭಂಡಾರ ಇಡೀ ವಿಶ್ವವನ್ನೇ ಆಕರ್ಷಿಸುತ್ತಿದೆ. ಜಗತ್ತಿನ ಬಹುತೇಕ ವಿಶ್ವ ವಿದ್ಯಾಲಯಗಳಲ್ಲಿ ನಮ್ಮ ವಿದ್ಯಾರ್ಥಿಗಳು ಓದಿ ಅನೇಕ ಸಾಧನೆ ಮಾಡಿದ್ದಾರೆ” ಎಂದರು.

“ನಮ್ಮಲ್ಲಿ ಅಮೂಲ್ಯ ಮಾನವ ಸಂಪನ್ಮೂಲಗಳಿವೆ. ಹೀಗಾಗಿ ಜಗತ್ತು ಭಾರತವನ್ನು ಕರ್ನಾಟಕ ಮೂಲಕ ನೋಡುತ್ತಿದೆ. ಇದೇ ಕಾರಣಕ್ಕೆ ನಮ್ಮ ಹಿರಿಯರು, ಐಐಟಿ, ಐಐಎಂ, ರಾಷ್ಟ್ರೀಯ ಕಾನೂನು ಕಾಲೇಜು, ಇಸ್ರೋ ಸೇರಿದಂತೆ ಹೆಚ್ ಎಎಲ್ ಹಾಗೂ ಇತರೆ ಪ್ರಮುಖ ಸಂಸ್ಥೆಗಳನ್ನು ಇಲ್ಲೇ ಆರಂಭಿಸಿದ್ದಾರೆ. ಇವುಗಳನ್ನು ಮುಂದುವರಿಸಿಕೊಂಡು ಹೋಗುವ ನಿಟ್ಟಿನಲ್ಲಿ ಮಕ್ಕಳು ತಮ್ಮ ವಿದ್ಯಾಭ್ಯಾಸ ಮಾಡಬೇಕಾಗುತ್ತದೆ” ಎಂದು ಸಲಹೆ ನೀಡಿದರು.

ಆತ್ಮ ವಿಶ್ವಾಸ ಕಳೆದುಕೊಳ್ಳಬಾರದು – “ನಾವು ಕೃತಕಬುದ್ಧಿಮತ್ತೆ ಯುಗಕ್ಕೆ ಹೋಗುತ್ತಿದ್ದು, ಇದಕ್ಕೆ ಪೂರಕವಾಗಿ ವಿದ್ಯಾಭ್ಯಾಸ ಮಾಡಬೇಕು. ಮುಂದಿನ ದಿನಗಳಲ್ಲಿ ನಮ್ಮ ಶಿಕ್ಷಣ ನೀತಿಯನ್ನು ತಿಳಿಸಲಾಗುವುದು. ಈ ವರ್ಷ ನಿಮಗೆ ಶುಭವಾಗಲಿ, ಯಶಸ್ಸು ಸಿಗಲಿ. ಸರ್ಕಾರಿ ಶಾಲಾ ಮಕ್ಕಳು ಆತ್ಮ ವಿಶ್ವಾಸ ಕಳೆದುಕೊಳ್ಳಬಾರದು. ನಮ್ಮ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಕರಿದ್ದಾರೆ. ಖಾಸಗಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳಷ್ಟೇ ಪ್ರತಿಭೆ ನಿಮ್ಮಲ್ಲೂ ಇದೆ” ಎಂದು ತಿಳಿಸಿದರು.

ಹಿಜಾಬ್ ಗೆ ಪರ್ಯಾಯವಾಗಿ ಕೇಸರಿ ಶಾಲು ಕೊಡುವ ಕರೆ ಬಗ್ಗೆ ಕೇಳಿದಾಗ, “ಕೇಸರಿ ಶಾಲು ಬೇಕೇ, ರಾಷ್ಟ್ರ ಧ್ವಜದ ಶಾಲು ಬೇಕೇ ಎಂದು ಮುಂದೆ ಚರ್ಚೆ ಮಾಡೋಣ” ಎಂದು ತಿಳಿಸಿದರು. ದೆಹಲಿ ಭೇಟಿ ಬಗ್ಗೆ ಕೇಳಿದಾಗ, “ನಾನು ಹಾಗೂ ಸಿದ್ದರಾಮಯ್ಯ ಅವರು ದೆಹಲಿಗೆ ಹೋಗುತ್ತಿದ್ದೇವೆ” ಎಂದು ತಿಳಿಸಿದರು.

ಗುಜರಾತಿನವರು ಮತ್ತೆ ನಮ್ಮ ಪಂದ್ಯ ಕಿತ್ತುಕೊಳ್ಳದಂತೆ ಕ್ರಮ ಕೈಗೊಳ್ಳುತ್ತೇವೆ – ಐಪಿಎಲ್ ಟೂರ್ನಿಯಲ್ಲಿ ಆರ್ ಸಿಬಿ ವಿಜೇತವಾಗಿರುವ ಬಗ್ಗೆ ಕೇಳಿದಾಗ, “ಐಪಿಎಲ್ ಫೈನಲ್ ಪಂದ್ಯ ಬೆಂಗಳೂರಿನಲ್ಲಿ ನಡೆಯಬೇಕಿತ್ತು. ನಾವು ಅದಕ್ಕೆ ಅನುಮತಿ ನೀಡಿದ್ದೆವು. ಆದರೆ ಗುಜರಾತಿನವರು ತಮ್ಮ ಪ್ರಭಾವ ಬಳಸಿ ನಮ್ಮಿಂದ ಪಂದ್ಯ ಕಿತ್ತುಕೊಂಡಿದ್ದಾರೆ. ಮುಂದೆ ಮತ್ತೆ ಈ ರೀತಿ ಕಿತ್ತುಕೊಳ್ಳದಂತೆ ಅಗತ್ಯ ಸಿದ್ಧತೆ ಮಾಡುತ್ತಿದ್ದೇವೆ. ಇದಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ. ನಮ್ಮ ಕ್ರೀಡಾಪ್ರೇಮಿಗಳಿಗೆ ಅನ್ಯಾಯ ಆಗಿರಬಹುದು. ನಮ್ಮ ರಾಜ್ಯ ಹೆಸರಿನಲ್ಲಿ ಪ್ರತಿನಿಧಿಸುವ ತಂಡ ಉತ್ತಮವಾಗಿ ಆಡಿ ಗೆದ್ದಿದ್ದಾರೆ. ನಮ್ಮೆಲ್ಲರಿಗೂ ಹೆಮ್ಮೆ ತಂದಿದ್ದಾರೆ. ಕರ್ನಾಟಕ ರಾಜ್ಯದ ಜನರ ಪರವಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ” ಎಂದು ತಿಳಿಸಿದರು.

Related posts

ನಟ ಪುನೀತ್ ಒಡನಾಟ ನೆನೆದ ಮಲಯಾಳಂ ಹಿರಿಯ ನಟಿ ಊರ್ವಶಿ

Kalpana Editor

ಪ್ರಧಾನಮಂತ್ರಿಗಳಾಗಿ 4399 ದಿನ ನಿರಂತರ ಸೇವೆ; ಬಿ.ವೈ. ವಿಜಯೇಂದ್ರ ಮೆಚ್ಚುಗೆ..!

Kalpana Editor

ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ; ರಾಜ್ಯಪಾಲರ ಕಾರ್ಯದರ್ಶಿಗೆ ಪತ್ರ ಹಸ್ತಾಂತರ..!

Kalpana Editor