ಭುವನೇಶ್ವರ : ಜಗನ್ನಾಥ ರಥಯಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸಿರುವ ನಡುವೆ ಜೇಬುಗಳ್ಳರ ವಿರುದ್ಧ ಪುರಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಇದುವರೆಗೆ 103 ಮಂದಿಯನ್ನು ಬಂಧಿಸಿ, ಕಳುವಾಗಿದ್ದ 203 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ರಥಯಾತ್ರೆ ವೇಳೆ ಕಳ್ಳತನ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಈ ಬಾರಿ ಪೊಲೀಸರು ವಿಶೇಷ ಕಳ್ಳತನ ವಿರೋಧಿ ಕಾರ್ಯಾಚರಣೆ ನಡೆಸಿದ್ದಾರೆ. ಕಳೆದ ವರ್ಷಗಳ ಅನುಭವದ ಆಧಾರದ ಮೇಲೆ ಈ ಬಾರಿ ಮುಂಚಿತವಾಗಿಯೇ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ಗ್ರ್ಯಾಂಡ್ ರಸ್ತೆ, ಜಗನ್ನಾಥ ದೇವಸ್ಥಾನದ ಸುತ್ತಮುತ್ತ, ಕಡಲತೀರ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಹಾಗೂ ಪಾರ್ಕಿಂಗ್ ಪ್ರದೇಶಗಳಲ್ಲಿ 24 ಗಂಟೆಗಳ ಕಾಲ ಪೊಲೀಸರು ನಿಗಾ ವಹಿಸಿದ್ದಾರೆ. ವಿವಿಧ ಪೊಲೀಸ್ ಠಾಣೆಗಳ ಸಿಬ್ಬಂದಿ, ವಿಶೇಷ ಕಳ್ಳತನ ವಿರೋಧಿ ತಂಡ ಹಾಗೂ ಗುಪ್ತಚರ ವಿಭಾಗದ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.
ಸಿಸಿಟಿವಿ ದೃಶ್ಯಗಳು, ಗುಪ್ತಚರ ಮಾಹಿತಿ ಮತ್ತು ಆಧುನಿಕ ತನಿಖಾ ತಂತ್ರಜ್ಞಾನ ಬಳಸಿ ಶಂಕಿತರನ್ನು ಪತ್ತೆಹಚ್ಚಲಾಗಿದೆ. ಈ ಕಾರ್ಯಾಚರಣೆಯಲ್ಲಿ ವಶಪಡಿಸಿಕೊಂಡಿರುವ 203 ಮೊಬೈಲ್‌ಗಳನ್ನು ಕಾನೂನು ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅವುಗಳ ಮಾಲೀಕರಿಗೆ ಹಿಂತಿರುಗಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಥಯಾತ್ರೆಗೆ ಬಂದಿರುವ ಭಕ್ತರು ಹಾಗೂ ಪ್ರವಾಸಿಗರು ತಮ್ಮ ಮೊಬೈಲ್, ಪರ್ಸ್ ಮತ್ತು ಆಭರಣಗಳ ಬಗ್ಗೆ ವಿಶೇಷ ಎಚ್ಚರಿಕೆ ವಹಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ. ರಥಯಾತ್ರೆ ಮುಗಿದ ಬಳಿಕವೂ ಕಳ್ಳತನ ವಿರೋಧಿ ಕಾರ್ಯಾಚರಣೆ ಮುಂದುವರಿಯಲಿದ್ದು, ಜೇಬುಗಳ್ಳರ ವಿರುದ್ಧ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ : ಮೆಜೆಸ್ಟಿಕ್, ಮಲ್ಲೇಶ್ವರಂ ಸೇರಿದಂತೆ ನಗರದ ಹಲವೆಡೆ ಧಾರಾಕಾರ ಮಳೆ
