August 1, 2026
kranthikidi.com
ತಾಜಾಸುದ್ದಿದೇಶರಾಜಕೀಯ

ತಮಿಳುನಾಡಿಗೆ ಕಾವೇರಿ ನೀರು ಹರಿಸುವ ಆದೇಶದ ವಿರುದ್ಧ ಮೇಲ್ಮನವಿಗೆ ತೀರ್ಮಾನ; ಸಿಎಂ ಡಿಕೆ ಶಿವಕುಮಾರ್

ನವದೆಹಲಿ : “ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರವಾಗಿ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಆದೇಶದ ವಿರುದ್ಧ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ (CWMA) ಮೇಲ್ಮನವಿ ಸಲ್ಲಿಸಲು ನಿರ್ಧಾರ ಮಾಡಲಾಗಿದೆ. ಅಡ್ವೊಕೇಟ್ ಜನರಲ್, ಕಾನೂನು ತಜ್ಞರು ಹಾಗೂ ಅಧಿಕಾರಿಗಳ ಜೊತೆ ಸಭೆ ಮಾಡಲಾಗಿದ್ದು, ಮೇಲ್ಮನವಿಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು. ದೆಹಲಿಯ ಕರ್ನಾಟಕ ಭವನದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಬುಧವಾರ ಪ್ರತಿಕ್ರಿಯೆ ನೀಡಿದರು.

ತಮಿಳುನಾಡಿಗೆ ನೀರು ಹರಿಸುವ ಬಗ್ಗೆ CWRC ನೀಡಿರುವ ಆದೇಶದ ಬಗ್ಗೆ ಕೇಳಿದಾಗ, “ಈ ವಿಚಾರವಾಗಿ ಸಭೆ ಮಾಡಿದ್ದೇವೆ. ಈ ಬಾರಿ ವರುಣ ಕೃಪೆ ತೋರಿಲ್ಲ. ಈ ಹಿಂದೆ ಸಮಿತಿಯು ಕಾವೇರಿ ನೀರು ಹರಿಸಬೇಕು ಎಂಬ ತಮಿಳುನಾಡಿನ ಮನವಿಯನ್ನು ಎರಡು ಬಾರಿ ತಿರಸ್ಕರಿಸಿತ್ತು. ಈ ಬಾರಿ ನೀರು ಹರಿಸಲು ಸೂಚಿಸಿದೆ. ಈ ಆದೇಶದ ವಿರುದ್ಧ ಮೇಲ್ಮನವಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದೇವೆ” ಎಂದರು.

“ಬೆಂಗಳೂರಿಗೆ ಮರಳಿದ ನಂತರ ವಿರೋಧ ಪಕ್ಷದ ನಾಯಕರ ಜೊತೆಯೂ ಈ ಬಗ್ಗೆ ಚರ್ಚೆ ಮಾಡಲಾಗುವುದು. ಈ ಮಧ್ಯೆ ತಮಿಳುನಾಡು ಸಿಎಂ ನನ್ನ ಜೊತೆ ಚರ್ಚೆ ಮಾಡಲು ಇಂಗಿತ ವ್ಯಕ್ತಪಡಿಸಿ ಮುಖ್ಯಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದು, ನನ್ನ ಜತೆ ದೂರವಾಣಿ ಮೂಲಕ ಮಾತನಾಡಿದ್ದಾರೆ. ನಾವು ಅವರಿಗೆ ಕೊಡಬೇಕಾದ ಗೌರವ ನೀಡಿ, ಸಭೆಗೆ ಬನ್ನಿ ಎಂದು ಹೇಳಿದ್ದೇನೆ. ನಮ್ಮ ರಾಜ್ಯಕ್ಕೆ ಬರುತ್ತೇವೆ ಎನ್ನುವ ಅತಿಥಿಗಳನ್ನು ಗೌರವದಿಂದ ಸ್ವೀಕಾರ ಮಾಡುವುದು ನಮ್ಮ ಕರ್ತವ್ಯ. ಹೀಗಾಗಿ ಬನ್ನಿ ಎಂದು ಹೇಳಿದ್ದು, ಅದಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ” ಎಂದು ತಿಳಿಸಿದರು.

ಕಾವೇರಿ ಭಾಗದ ಪರಿಸ್ಥಿತಿ ವೀಕ್ಷಿಸಲು ಸಿಎಂ ವಿಜಯ್ ಗೆ ಮನವಿ – “ನಮ್ಮ ಕಾವೇರಿ ಜಲಾನಯನ ಪ್ರದೇಶದ ಪರಿಸ್ಥಿತಿ ನೋಡಿ ಎಂದು ಸಿಎಂ ವಿಜಯ್ ಅವರಿಗೆ ನಾವು ಮನವಿ ಮಾಡಿದ್ದೇವೆ. ಅದಕ್ಕೆ ಅಗತ್ಯವಿರುವ ಹೆಲಿಕಾಪ್ಟರ್ ವ್ಯವಸ್ಥೆ ಕೂಡ ಮಾಡಲಾಗುವುದು ಎಂದೂ ಹೇಳಿದ್ದೇನೆ. ಅವರಿಗೂ ವಾಸ್ತವ ಪರಿಸ್ಥಿತಿ ಅನುಭವ ಆಗಬೇಕು. ಅವರ ತೀರ್ಮಾನ ಏನು ಎಂದು ನೋಡೋಣ” ಎಂದು ತಿಳಿಸಿದರು. ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಪ್ರಯೋಗ, ನನ್ನ ರಾಜಕೀಯದಲ್ಲೇ ಮೊದಲ ಬಾರಿಗೆ ಕಂಡಿದ್ದೇನೆ

ಸಂಸತ್ತಿನಲ್ಲಿ ರಾಹುಲ್ ಗಾಂಧಿ ಅವರು ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಪೊಲೀಸರ ದಾಳಿಗೆ ಗೃಹ ಸಚಿವ ಅಮಿತ್ ಶಾ ಅವರೇ ಹೊಣೆ ಎಂದು ಹೇಳಿರುವ ಬಗ್ಗೆ ಕೇಳಿದಾಗ, “ಇದು ಕೇವಲ ರಾಹುಲ್ ಗಾಂಧಿ ಅವರ ಹೇಳಿಕೆ ಮಾತ್ರವಲ್ಲ. ಇದು ದೇಶದ ಪ್ರಶ್ನೆ. ಇದು ದೊಡ್ಡ ವಿಚಾರವಾದರೂ, ರಾಹುಲ್ ಗಾಂಧಿ ಅವರು ಕೇಳಿರುವುದು ಸಣ್ಣ ಪ್ರಶ್ನೆ ಅಷ್ಟೆ. ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಪ್ರಯೋಗಕ್ಕೆ ಅನುಮತಿ ಕೊಟ್ಟವರು ಯಾರು? ದೆಹಲಿ ಪೊಲೀಸರು ಕೇಂದ್ರ ಸರ್ಕಾರದ ಅಧೀನದಲ್ಲಿರುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಮೂಲಭೂತ ಪ್ರಶ್ನೆ ಕೇಳುವುದು ವಿರೋಧ ಪಕ್ಷದ ನಾಯಕರು ಹಾಗೂ ಪ್ರತಿಯೊಬ್ಬರ ಕರ್ತವ್ಯವಾಗಿದೆ.

ನನ್ನ ರಾಜಕೀಯ ಇತಿಹಾಸದಲ್ಲಿ ಇಂತಹ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಪ್ರಯೋಗವಾಗಿರುವುದನ್ನು ನೋಡುತ್ತಿರುವುದು ಇದೇ ಮೊದಲು. ಈ ಬಗ್ಗೆ ವಿವರಣೆ ನೀಡುವುದು ಗೃಹ ಸಚಿವರ ಕರ್ತವ್ಯವಾಗಿದೆ” ಎಂದು ತಿಳಿಸಿದರು. ಸಚಿವ ಸಂಪುಟ ವಿಸ್ತರಣೆ ಬಗ್ಗೆ ಕೇಳಿದಾಗ, “ಚರ್ಚೆಗಳು ಆಗಿವೆ. ಹೈಕಮಾಂಡ್ ನಾಯಕರ ಜೊತೆ ಅಂತಿಮವಾಗಿ ಮಾತನಾಡುವುದು ಬಾಕಿ ಇದೆ. ನಮ್ಮ ನಾಯಕರು ಚರ್ಚೆ ಮಾಡಲು ಕರೆಯುವುದಾಗಿ ಹೇಳಿದ್ದಾರೆ” ಎಂದು ತಿಳಿಸಿದರು. ಇದನ್ನೂ ಓದಿ : ಕರ್ನಾಟಕ ಸರ್ಕಾರ ತಮಿಳುನಾಡಿಗೆ ನೀರು ಬಿಡಬಾರದು; ಜೆಡಿಎಸ್ ಆಗ್ರಹ..!

Related posts

ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಪಟುಗಳಿಗೆ ಲಕ್ಷ ಲಕ್ಷ ಪ್ರೋತ್ಸಾಹಧನ..!

Kalpana Editor

ಇಂದಿನಿಂದ 23ನೇ ಆವೃತ್ತಿಯ FIFA ವಿಶ್ವಕಪ್ ಆರಂಭ..!

Kalpana Editor

ಫೈವ್‌ ಸ್ಟಾರ್‌ ಹೋಟೆಲ್‌ನಲ್ಲಿ ರೆಬಲ್‌ ಸಂಸದರು; ನಾಳೆಯೇ ಶಿಂಧೆ ಬಣ ಸೇರುವ ಸಾಧ್ಯತೆ..!

Kalpana Editor