ಬಳ್ಳಾರಿ : ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಕಸ್ಟಡಿಯಲ್ಲಿದ್ದ ವ್ಯಕ್ತಿಯೋರ್ವ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾನೆ. ಹರಪನಹಳ್ಳಿ ಮೂಲದ ಕಟ್ಟಡ ಕಾರ್ಮಿಕ ಖಲೀಲ್ (38) ಮೃತಪಟ್ಟ ದುರ್ದೈವಿಯಾಗಿದ್ದು, ಪೊಲೀಸರ ಭೀಕರ ಹಲ್ಲೆಯಿಂದಲೇ ಈ ಸಾವು ಸಂಭವಿಸಿದೆ ಎಂದು ಮೃತನ ಕುಟುಂಬಸ್ಥರು ಗಂಭೀರವಾಗಿ ಆರೋಪಿಸಿದ್ದಾರೆ.
ಮನೆಯಲ್ಲಿ ಪತ್ನಿಯೊಂದಿಗೆ ನಡೆದಿದ್ದ ಸಣ್ಣ ಜಗಳಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಪೊಲೀಸರು ಶನಿವಾರ (ಆಗಸ್ಟ್ 1) ರಾತ್ರಿ ಖಲೀಲ್‌ನನ್ನು ಹಗರಿಬೊಮ್ಮನಹಳ್ಳಿ ಠಾಣೆಗೆ ಕರೆತಂದಿದ್ದರು. ಆದರೆ, ಕಸ್ಟಡಿಯಲ್ಲಿದ್ದಾಗಲೇ ಖಲೀಲ್ ಮೃತಪಟ್ಟಿದ್ದಾನೆ. ಮೃತನ ಬೆನ್ನು ಹಾಗೂ ತಲೆ ಭಾಗಕ್ಕೆ ಬಲವಾದ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವವಾಗಿದೆ. ಮೃತದೇಹದ ಮೇಲಿರುವ ಗಾಯದ ಗುರುತುಗಳು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿವೆ. ವಿಚಾರಣೆ ನೆಪದಲ್ಲಿ ಪೊಲೀಸರು ಖಲೀಲ್ ಮೇಲೆ ಭೀಕರವಾಗಿ ಹಲ್ಲೆ ನಡೆಸಿ, ಕೊಲೆ ಮಾಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಇತ್ತ ಪೊಲೀಸರು ಖಲೀಲ್‌ನಿಗೆ ದಿಢೀರ್ ಪಿಟ್ಸ್ (ಮೂರ್ಛೆ ರೋಗ) ಬಂದು ಮೃತಪಟ್ಟಿದ್ದಾನೆ ಎಂದು ಸಬೂಬು ನೀಡುತ್ತಿದ್ದಾರೆ. ಆದರೆ ಪಿಟ್ಸ್ ಬಂದಿದ್ದರೆ ದೇಹದ ಮೇಲೆ ಇಷ್ಟೊಂದು ತೀವ್ರ ಸ್ವರೂಪದ ಗಾಯಗಳು ಹೇಗೆ ಸಾಧ್ಯ? ಎಂಬ ಕುಟುಂಬಸ್ಥರು ಮತ್ತು ಸಾರ್ವಜನಿಕರ ಪ್ರಶ್ನೆಗೆ ಪೊಲೀಸರ ಬಳಿ ಸೂಕ್ತ ಉತ್ತರಗಳಿಲ್ಲ. ಈ ಘಟನೆ ತಿಳಿಯುತ್ತಿದ್ದಂತೆ ಹಗರಿಬೊಮ್ಮನಹಳ್ಳಿ ಸರ್ಕಾರಿ ಆಸ್ಪತ್ರೆಯ ಮುಂಭಾಗ ಮೃತನ ಸಂಬಂಧಿಕರು ಹಾಗೂ ನೂರಾರು ಸಾರ್ವಜನಿಕರು ಜಮಾಯಿಸಿದ್ದು, ತಪ್ಪಿತಸ್ಥ ಪೊಲೀಸ್ ಸಿಬ್ಬಂದಿಯ ವಿರುದ್ಧ ತಕ್ಷಣವೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಪರಿಹಾರ ನೀಡಬೇಕೆಂದು ಆಗ್ರಹಿಸಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ಘಟನೆಯ ಗಂಭೀರತೆಯನ್ನು ಅರಿತು ಸ್ಥಳಕ್ಕೆ ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಶ್ರೀಮತಿ ಜಾಹ್ನವಿ ಹಾಗೂ ಹಗರಿಬೊಮ್ಮನಹಳ್ಳಿ ಶಾಸಕ ನೇಮಿರಾಜ್ ನಾಯ್ಕ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಪ್ರಕರಣದ ಬಗ್ಗೆ ಸಂಪೂರ್ಣ ತನಿಖೆ ನಡೆಸಿ, ಒಂದು ವೇಳೆ ಪೊಲೀಸ್ ಸಿಬ್ಬಂದಿ ತಪ್ಪಿತಸ್ಥರೆಂದು ಕಂಡುಬಂದರೆ ಅವರ ವಿರುದ್ಧ ದಾಕ್ಷಿಣ್ಯವಿಲ್ಲದೆ ಕ್ರಮ ಜರುಗಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಇದನ್ನೂ ಓದಿ : ತಿಮ್ಮಪ್ಪನಿಗೆ ಮುಡಿ ಕೊಟ್ಟ ಹಾರ್ದಿಕ್ ಪಾಂಡ್ಯ – ವಿಶೇಷ ಪೂಜೆ..!
