ಬೆಂಗಳೂರು : ಬೆಂಗಳೂರಿನ ಐತಿಹಾಸಿಕ ಲಾಲ್‌ಬಾಗ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿರುವ 220ನೇ ಫಲಪುಷ್ಪ ಪ್ರದರ್ಶನಕ್ಕೆ ಇಂದಿನಿಂದ (ಆಗಸ್ಟ್ 6) ಅಧಿಕೃತ ಚಾಲನೆ ಸಿಕ್ಕಿದೆ. ತೋಟಗಾರಿಕೆ ಇಲಾಖೆ ಆಯೋಜಿಸಿರುವ ಈ 12 ದಿನಗಳ ಹೂಗಳ ಹಬ್ಬವು ಆಗಸ್ಟ್ 17ರವರೆಗೆ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿರಲಿದೆ. ಈ ಬಾರಿಯ ಫಲಪುಷ್ಪ ಪ್ರದರ್ಶನವು ‘ಗಂಗರ ಸಾಮ್ರಾಜ್ಯದ 1,000 ವರ್ಷಗಳ ವೈಭವ’ ಎಂಬ ವಿಶೇಷ ವಸ್ತುವಿಷಯದ ಆಧಾರದ ಮೇಲೆ ಸಿದ್ಧಗೊಂಡಿದೆ.
ಲಾಲ್‌ಬಾಗ್‌ನ ಪ್ರಸಿದ್ಧ ಗ್ಲಾಸ್ ಹೌಸ್‌ನಲ್ಲಿ ಶ್ರವಣಬೆಳಗೊಳದ ಭಗವಾನ್ ಬಾಹುಬಲಿ ಸ್ವಾಮಿಯ ಬೃಹತ್ ವಿಗ್ರಹ ಹಾಗೂ ತಲಕಾಡಿನ ಐತಿಹಾಸಿಕ ದೇವಾಲಯಗಳ ಆಕರ್ಷಕ ಹೂವಿನ ಪ್ರತಿಕೃತಿಗಳನ್ನು ನಿರ್ಮಿಸಲಾಗಿದೆ. 2.75 ಕೋಟಿ ರೂ. ವೆಚ್ಚದಲ್ಲಿ ಸಿದ್ಧಗೊಂಡಿರುವ ಈ ಪ್ರದರ್ಶನದಲ್ಲಿ ದೇಶ-ವಿದೇಶಗಳ 130ಕ್ಕೂ ಹೆಚ್ಚು ಅಪರೂಪದ ಹೂವಿನ ತಳಿಗಳನ್ನು ಬಳಸಲಾಗಿದೆ. ಲಾಲ್‌ಬಾಗ್ ಕೆರೆಯ ಬಳಿ ನಯನಮನೋಹರ ಕೃತಕ ಜಲಪಾತ ಮತ್ತು ಪ್ರವಾಸಿಗರನ್ನು ಸೆಳೆಯಲು ಆಕರ್ಷಕ ಸೆಲ್ಫಿ ಪಾಯಿಂಟ್‌ಗಳನ್ನು ನಿರ್ಮಿಸಲಾಗಿದೆ. ಇಂದು ಮಧ್ಯಾಹ್ನ 12 ಗಂಟೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರದರ್ಶನಕ್ಕೆ ಅಧಿಕೃತ ಚಾಲನೆ ನೀಡಲಿದ್ದಾರೆ.
ಸಾರ್ವಜನಿಕರ ಅನುಕೂಲಕ್ಕಾಗಿ ಈ ಬಾರಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಲು ಆನ್‌ಲೈನ್ ಟಿಕೆಟ್‌ಗಳ ವ್ಯವಸ್ಥೆ ಮಾಡಲಾಗಿದೆ. ವಾಹನ ದಟ್ಟಣೆ ನಿಯಂತ್ರಿಸಲು ಹೆಚ್ಚುವರಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಲಕ್ಷಾಂತರ ಪ್ರವಾಸಿಗರು ಆಗಮಿಸುವ ನಿರೀಕ್ಷೆಯಿರುವುದರಿಂದ 136 ಸಿಸಿಟಿವಿ ಕ್ಯಾಮೆರಾಗಳು ಮತ್ತು ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ. ಮೊಬೈಲ್ ಕ್ಯಾಮೆರಾ: ಪ್ರವಾಸಿಗರು ಮೊಬೈಲ್ ಫೋನ್ ಮೂಲಕ ಉಚಿತವಾಗಿ ಫೋಟೋ ಹಾಗೂ ವೀಡಿಯೊ ಚಿತ್ರೀಕರಣ ಮಾಡಬಹುದು.
ಮಾಹಿತಿಯ ವಿವರಗಳು; ದಿನಾಂಕ – ಆಗಸ್ಟ್ 6 ರಿಂದ ಆಗಸ್ಟ್ 17, 2026 (12 ದಿನಗಳು) ವರೆಗೆ ಪ್ರದರ್ಶನ ಆರಂಭ, ಸಮಯ – ಪ್ರತಿದಿನ ಬೆಳಿಗ್ಗೆ 7:00 ರಿಂದ ಸಂಜೆ 7:00 ರವರೆಗೆ ಓಪನ್, ಸಾಮಾನ್ಯ ದಿನಗಳಲ್ಲಿ ಟಿಕೆಟ್ ಮುಖಬೆಲೆ : ₹80 (ಹಿರಿಯರು/ಸಾಮಾನ್ಯರಿಗೆ), ವಾರಾಂತ್ಯ ಮತ್ತು ರಜಾ ದಿನಗಳಲ್ಲಿ ಮುಖಬೆಲೆ : ₹100, ಮಕ್ಕಳ ಟಿಕೆಟ್ ದರ ₹30 (ಎಲ್ಲಾ ದಿನಗಳಲ್ಲಿ), ಉಚಿತ ಪ್ರವೇಶ – ಸಮವಸ್ತ್ರಧಾರಿ ಶಾಲಾ ಮಕ್ಕಳಿಗೆ ಉಚಿತ ಪ್ರವೇಶ ಇರುತ್ತದೆ.
ಕ್ಯಾಮೆರಾ/ಡಿಎಸ್‌ಎಲ್‌ಆರ್ ಬಳಕೆಗೆ; ವೃತ್ತಿಪರ ಕ್ಯಾಮೆರಾ ತರಲು ತೋಟಗಾರಿಕೆ ಇಲಾಖೆಯ ಭದ್ರತಾ ಸಿಬ್ಬಂದಿಯಿಂದ ಮುಂಚಿತವಾಗಿ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಸೌಲಭ್ಯಗಳು : ಜನಸಂದಣಿ ನಿಯಂತ್ರಿಸಲು ಆನ್‌ಲೈನ್ ಟಿಕೆಟ್ ಬುಕಿಂಗ್ ವ್ಯವಸ್ಥೆ, ಕೆರೆ ಬಳಿ ಕೃತಕ ಜಲಪಾತ, ಆಕರ್ಷಕ ಸೆಲ್ಫಿ ಪಾಯಿಂಟ್‌ಗಳು, ಸಿಸಿಟಿವಿ ಕಣ್ಗಾವಲು ಹಾಗೂ ಹೆಚ್ಚಿನ ವಾಹನ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇದನ್ನೂ ಓದಿ : ಉದ್ಯಮಿ ಆದಿಕೇಶವುಲು ಮೊಮ್ಮಗನ ದರ್ಪ; ಸೆಕ್ಯುರಿಟಿ ಗಾರ್ಡ್ ಮೇಲೆ ಹಲ್ಲೆಆರೋಪ..!
