ಬೀದರ್ : ಮಳೆ ಬಂದ್ರೆ ಸಾಕು ನೂರಾರು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಬ್ರೀಮ್ಸ್‌ಗೆ ಬರಲು ರೋಗಿಗಳು ಭಯ ಬೀಳುತ್ತಿದ್ದಾರೆ. ಇಲ್ಲಿ ಚಿಕಿತ್ಸೆ ಪಡೆಯುವಾಗ ಯಾವ ಕ್ಷಣದಲ್ಲಿ ಏನಾಗಿ ಬಿಡುತ್ತೋ ಎಂದು ಪ್ರತಿಕ್ಷಣ ಭಯದಲ್ಲೇ ಚಿಕಿತ್ಸೆ ಪಡೆಯುವ ಕರ್ಮ ಇಲ್ಲಿನ ರೋಗಿಗಳದ್ದಾಗಿದೆ.
ಬೀದರ್ ಜಿಲ್ಲೆಯ ರೋಗಿಗಳು ಚಿಕಿತ್ಸೆ ಪಡೆಯಲು ದುಪ್ಪಟ್ಟು ಹಣ ಖರ್ಚು ಮಾಡಿ ದೂರದ ಹೈದರಾಬಾದ್, ಸೊಲ್ಲಾಪುರ, ಪುಣೆ ಹೋಗಬಾರದು ಅಂತ ನೂರಾರು ಕೋಟಿ ವೆಚ್ಚದಲ್ಲಿ ಬ್ರೀಮ್ಸ್ ನಿರ್ಮಾಣ ಮಾಡಲಾಗಿದೆ. ಆದರೆ ನೂತನ ಬ್ರೀಮ್ಸ್ ಆಸ್ಪತ್ರೆ ನಿರ್ಮಾಣ ಮಾಡಿದ್ರೂ ಇನ್ನೂ ಯಾವುದೇ ಪ್ರಯೋಜನಕ್ಕೆ ಬಾರದಂತಾಗಿದೆ. ಚಿಕಿತ್ಸೆಗಾಗಿ ಬ್ರೀಮ್ಸ್ಗೆ ಬರುವ ರೋಗಿಗಳು ಮಾತ್ರ ಪ್ರತಿಕ್ಷಣ ಕನಸಿನಲ್ಲೂ ಭಯ ಬೀಳುವಂತಾಗಿದೆ.
ನೂತನ ಬ್ರೀಮ್ಸ್ ಆಸ್ಪತ್ರೆ ಇದ್ರೂ ಹಳೆಯ ಬ್ರೀಮ್ಸ್ ಆಸ್ಪತ್ರೆಯಲ್ಲಿ ನೂರಾರು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ರೋಗಿಗಳು ಮತ್ತು ರೋಗಿಗಳ ಜೊತೆ ಬರುವ ಸಂಬಂಧಿಕರು ಮಾತ್ರ ಪ್ರತಿದಿನ ಯಾವ ಕ್ಷಣದಲ್ಲಿ ಏನಾಗುತ್ತೋ ಎಂಬ ಭಯದಲ್ಲೇ ದಿನ ಕಳೆಯಬೇಕು. ಯಾಕೆಂದ್ರೆ ರೋಗಿಗಳಿಗೆ ಚಿಕಿತ್ಸೆ ನೀಡುವ ಬ್ರೀಮ್ಸ್ ಹಳೆಯ ಕಟ್ಟಡದ ಮೇಲ್ಛಾವಣಿ ಮತ್ತು ಗೋಡೆಗಳಿಂದ ನೀರು ಸೊರಿಕೆಯಾಗುತ್ತಿದೆ. ಬೆಡ್ ಮೇಲೆಯೇ ತೊಟ್ಟಿಕ್ಕುತ್ತಿದೆ.
ಆಸ್ಪತ್ರೆಯ ಗೋಡೆಗಳು ಪಾಚಿ ಕಟ್ಟಿದ್ದು, ತೇವಗೊಂಡಿವೆ. ಮೇಲ್ಛಾವಣಿ ಶಿಥಿಲಗೊಂಡಿವೆ. ಯಾವಾಗ ಏನಾಗುತ್ತೆ ಅಂತ ಭಯದಲ್ಲೇ ಪ್ರತಿದಿನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಷ್ಟೊಂದು ದೊಡ್ಡಮಟ್ಟದಲ್ಲಿ ನೂರಾರು ಕೋಟಿ ವೆಚ್ಚದಲ್ಲಿ ನೂತನ ಬ್ರಿಮ್ಸ್ ನಿರ್ಮಾಣ ಮಾಡಿದ್ರೂ ರೋಗಿಗಳಿಗೆ ಸಂಕಷ್ಟ ಮಾತ್ರ ತಪ್ಪಿಲ್ಲ. ಈ ಪರಿಸ್ಥಿತಿಯಲ್ಲೇ ಚಿಕಿತ್ಸೆ ಪಡೆಯುತ್ತಿರುವ ಬಡಪಾಯಿ ರೋಗಿಗಳು ಬ್ರೀಮ್ಸ್ ವೈದ್ಯಾಧಿಕಾರಿಗಳು ವಿರುದ್ಧ ಹಿಡಿಶಾಪ ಹಾಕ್ತಿದ್ದಾರೆ.
ನೂತನ ಬ್ರೀಮ್ಸ್ ಏಳು ಅಂತಸ್ತಿನಲ್ಲಿ ನಿರ್ಮಾಣ ಮಾಡಲಾಗಿದ್ದು, 650 ಬೆಡ್‌ಗಳ ಆಸ್ಪತ್ರೆ ಇದಾಗಿದೆ. ಆದರೆ ಹಳೆಯ ಬ್ರೀಮ್ಸ್ ಕಟ್ಟಡದಲ್ಲೇ ಜನರಲ್ ವಾರ್ಡ್ ಮಾಡಿ, ಚಿಕಿತ್ಸೆ ನೀಡುತ್ತಿದ್ದಾರೆ. ಈ ಹಳೆಯ ಬ್ರೀಮ್ಸ್ ಕಟ್ಟಡ ಯಾವ ಕ್ಷಣದಲ್ಲಿ ಏನ್ ಬೇಕಾದ್ರೂ ಆಗಬಹುದು ಅನ್ನೋ ಆತಂಕ ಇಲ್ಲಿನ ರೋಗಿಗಳದ್ದು. ಇನ್ನು ಈ ಬಗ್ಗೆ ಬ್ರಿಮ್ಸ್ ಆಸ್ಪತ್ರೆಯ ಅಧೀಕ್ಷಕರನ್ನು ಕೇಳಿದ್ರೆ ಮೇಲ್ಚಾವಣಿಗೆ ವಾಟರ್ ಪ್ರೂಫ್ ಕಲರ್ ಹಾಕಿಸಿ ದುರಸ್ತಿ ಮಾಡಿಸಿದ್ದೇನೆ. ನೀರು ಸೋರಿಕೆ ತಡೆಗಟ್ಟಿ ದುರಸ್ತಿ ಮಾಡಿಸುತ್ತೇವೆ. ಇಲ್ಲಾಂದ್ರೆ ಬೇರೆಡೆ ಶಿಫ್ಟ್ ಮಾಡಿಸುತ್ತೇನೆ ಅಂತ ಕಲರ್ ಕಾಗೆ ಹಾರಿಸುತ್ತಾರೆ. ಇದನ್ನೂ ಓದಿ : ನವೆಂಬರ್ 6ಕ್ಕೆ ಬೆಳ್ಳಿತೆರೆ ಮೇಲೆ ʻರಾಮಾಯಣʼ ಸಿನಿಮಾ ದೈವಿಕ ಪರ್ವ ಶುರು..!
