kranthikidi.com
ತಾಜಾಸುದ್ದಿರಾಜಕೀಯರಾಜ್ಯ

ಬಿಡದಿ ರೈತರ ಹೋರಾಟ: ರೈತರ ಮೇಲಿನ ಎಫ್‌ಐಆರ್ ವಾಪಸ್ ಪಡೆಯಲಿ, ಯೋಜನೆ ಕೈಬಿಡಲಿ – ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ

ಬೆಂಗಳೂರು : ಬಿಡದಿ ಟೌನ್‌ಶಿಪ್ ಯೋಜನೆ ವಿರೋಧಿಸಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು, ರೈತರ ವಿರುದ್ಧ ದಾಖಲಿಸಿರುವ ಎಫ್‌ಐಆರ್‌ಗಳನ್ನು ತಕ್ಷಣವೇ ವಾಪಸ್ ಪಡೆಯಬೇಕು ಹಾಗೂ ಸರ್ಕಾರ ಯೋಜನೆಯನ್ನು ಸಂಪೂರ್ಣ ಕೈಬಿಡಬೇಕು ಎಂದು ಒತ್ತಾಯಿಸಿದರು.

ಜೆಪಿ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ರಾಜ್ಯಸಭಾ ಸದಸ್ಯ ಕುಪ್ಪೇಂದ್ರ ರೆಡ್ಡಿ, ವಿಧಾನಪರಿಷತ್ ಸದಸ್ಯರಾದ ಶರವಣ, ಜವರಾಯಗೌಡ, ಮಾಜಿ ಶಾಸಕ ಎ. ಮಂಜು ಹಾಗೂ ಮಾಜಿ ವಿಧಾನಪರಿಷತ್ ಸದಸ್ಯ ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.

ದೇವೇಗೌಡರು ಮಾತನಾಡಿ, ಬಿಡದಿ ಭಾಗದ ರೈತರ ಪ್ರತಿಭಟನೆಯಿಂದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ತೀವ್ರ ನೋವಾಗಿದೆ. ಅವರು ರೈತರಿಗೆ ಹೋರಾಟ ಮುಂದುವರಿಸುವಂತೆ ಹಾಗೂ ತಮ್ಮ ಸಂಪೂರ್ಣ ಬೆಂಬಲ ಇರುವುದಾಗಿ ತಿಳಿಸಿದ್ದಾರೆ. ರೈತರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳನ್ನು ವಾಪಸ್ ಪಡೆಯುವಂತೆ ಕುಮಾರಸ್ವಾಮಿ ಆಗ್ರಹಿಸಿದ್ದಾರೆ ಎಂದರು.

ಬಿಜೆಪಿ ನಾಯಕರು, ವಿಶೇಷವಾಗಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಕೂಡ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿರುವುದನ್ನು ದೇವೇಗೌಡರು ಸ್ವಾಗತಿಸಿದರು. ಸರ್ಕಾರ ಸುಮಾರು 500 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುತ್ತಿರುವುದಾಗಿ ಹೇಳುತ್ತಿದೆ. ಆದರೆ ವಿವಾದಿತ ಖಾಸಗಿ ಭೂಮಿ ಕೇವಲ 17 ಎಕರೆ ಮಾತ್ರವಾಗಿದ್ದು, ಉಳಿದ ಭೂಮಿ ಸರ್ಕಾರಿ ಗೋಮಾಳವಾಗಿದೆ ಎಂದು ಅವರು ಆರೋಪಿಸಿದರು.

ರೆವಿನ್ಯೂ ಇಲಾಖೆಯ ಅಧಿಕಾರಿಗಳ ದೂರಿನ ಆಧಾರದ ಮೇಲೆ ರೈತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದರು. ಈ ಘಟನೆಯಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್‌ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಯಾರಿಗೂ ಗಂಭೀರ ಗಾಯಗಳಾಗಿಲ್ಲ. ಹೈನುಗಾರಿಕೆ ಮತ್ತು ಕೃಷಿಯನ್ನೇ ನಂಬಿಕೊಂಡಿರುವ ರೈತರ ನೋವನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ಆ ಭಾಗದಲ್ಲಿ ಪ್ರತಿದಿನ ಸುಮಾರು 50 ಸಾವಿರ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ ಎಂದು ಅವರು ತಿಳಿಸಿದರು.

ತಾವು ಮುಖ್ಯಮಂತ್ರಿ ಆಗಿದ್ದಾಗ ಹಾಗೂ ಶಾಸಕರಾಗಿದ್ದಾಗ ಆ ಭಾಗದ ಅಭಿವೃದ್ಧಿಗೆ ಸಾಧ್ಯವಾದಷ್ಟು ಕೆಲಸ ಮಾಡಿದ್ದೇನೆ. ಜೂನ್ 25ರಂದು ಮುಖ್ಯಮಂತ್ರಿ ಅವರಿಗೆ 11 ಪುಟಗಳ ಪತ್ರ ಬರೆದು ಸಂಪೂರ್ಣ ಮಾಹಿತಿ ನೀಡಿದ್ದರೂ, ಇದುವರೆಗೆ ಕನಿಷ್ಠ ಸ್ವೀಕೃತಿ ಪತ್ರವನ್ನೂ ಕಳುಹಿಸಿಲ್ಲ ಎಂದು ದೇವೇಗೌಡರು ಅಸಮಾಧಾನ ವ್ಯಕ್ತಪಡಿಸಿದರು.

ಕೆಂಪೇಗೌಡ ಲೇಔಟ್, ಶಿವರಾಮ ಕಾರಂತ ಲೇಔಟ್ ಸೇರಿದಂತೆ ಹೊಸ ಬಡಾವಣೆಗಳಲ್ಲಿ 40 ಸಾವಿರಕ್ಕೂ ಹೆಚ್ಚು ನಿವೇಶನಗಳು ಖಾಲಿ ಇರುವಾಗ, ಬಿಡದಿ ಟೌನ್‌ಶಿಪ್ ಯೋಜನೆ ಏಕೆ ಎಂಬ ಪ್ರಶ್ನೆಯನ್ನು ಅವರು ಎತ್ತಿದರು. ಕೆಲವರು ಪರಿಹಾರ ಪಡೆದು ಭೂಮಿ ನೀಡಲು ಸಮ್ಮತಿಸಿದ್ದರೂ, ಹೆಚ್ಚಿನ ರೈತರು ಕೃಷಿ ಮತ್ತು ಹೈನುಗಾರಿಕೆಯನ್ನೇ ಜೀವನೋಪಾಯವಾಗಿಸಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ವಿವಾದವಿದ್ದರೂ ಸರ್ವೆ ನಡೆಸಿರುವುದು ಪ್ರಚೋದನೆಗೆ ಕಾರಣವಾಗಿದೆ ಎಂದು ಅವರು ಆರೋಪಿಸಿದರು.

ಸರ್ಕಾರ ತಕ್ಷಣ ಯೋಜನೆಯನ್ನು ಕೈಬಿಡಬೇಕು. ಸದ್ಯಕ್ಕೆ ಸರ್ವೆ ಸ್ಥಗಿತಗೊಳಿಸಿರುವ ನಿರ್ಧಾರವನ್ನು ಸ್ವಾಗತಿಸುತ್ತೇನೆ. ಆದರೆ ಯೋಜನೆಯನ್ನೇ ರದ್ದುಗೊಳಿಸಬೇಕು. ಸರ್ಕಾರಕ್ಕೆ ಈ ಕುರಿತು ನಾಲ್ಕೈದು ದಿನಗಳ ಗಡುವು ನೀಡುತ್ತಿದ್ದೇನೆ. ಆ ಬಳಿಕ ಮುಂದಿನ ಹೋರಾಟದ ರೂಪುರೇಷೆಯನ್ನು ನಿರ್ಧರಿಸುತ್ತೇನೆ ಎಂದು ದೇವೇಗೌಡರು ಎಚ್ಚರಿಕೆ ನೀಡಿದರು. ಸರ್ಕಾರ ಯೋಜನೆಯನ್ನು ಮುಂದುವರಿಸಿದರೆ ಬೆಂಗಳೂರಿನ ಗಾಂಧಿ ಪ್ರತಿಮೆ ಎದುರು ಸತ್ಯಾಗ್ರಹ ನಡೆಸಬೇಕಾದ ಪರಿಸ್ಥಿತಿ ಎದುರಾಗಬಹುದು.

ಆ ಸನ್ನಿವೇಶಕ್ಕೆ ನನ್ನನ್ನು ದೂಡಬೇಡಿ ಎಂದು ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದರು. ರೈತರ ಮೇಲಿನ ಎಫ್‌ಐಆರ್‌ಗಳನ್ನು ವಾಪಸ್ ಪಡೆಯಬೇಕು. ಸರ್ಕಾರ ರೈತರ ನೋವನ್ನು ಅರ್ಥ ಮಾಡಿಕೊಂಡು ಯೋಜನೆಯನ್ನು ಕೈಬಿಡಬೇಕು. ಸರ್ಕಾರದ ಅಂತಿಮ ನಿರ್ಧಾರವನ್ನು ಕಾದು ನೋಡುತ್ತೇನೆ. ಅದರ ಆಧಾರದ ಮೇಲೆ ಮುಂದಿನ ಹೋರಾಟವನ್ನು ರೂಪಿಸುತ್ತೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದರು. ಇದನ್ನೂ ಓದಿ : 15 ನಿಮಿಷದಲ್ಲಿ ಮಾಡಿ ಕ್ರಿಸ್ಪಿ ಪೊಟ್ಯಾಟೋ ಲಾಲಿಪಾಪ್

Related posts

ಡೈರೆಕ್ಟರ್‌ ಬರ್ತ್‌ಡೇ ದಿನವೇ ‘ಟಾಕ್ಸಿಕ್ ಮೇಕಿಂಗ್’ ವಿಡಿಯೋ ರಿಲೀಸ್..!

Kalpana Editor

‘ಅಪ್ಪ-ಮಗನ ನಂಬಿ ಕೆಟ್ಟೆ’ 29 ಕೋಟಿ ನಷ್ಟ ಎಂದ ನಿರ್ಮಾಪಕ

Kalpana Editor

ಒಂದು ವಾಹನಕ್ಕೆ 200 ಲೀಟರ್‌ ದಿನಕ್ಕೆ ಮಾತ್ರ – ಡೀಸೆಲ್‌ ಮಾರಾಟ ಮಿತಿಗೊಳಿಸಿದ ಕೇಂದ್ರ ಸರ್ಕಾರ..!

Kalpana Editor