ಬೆಂಗಳೂರು : ವಿಧಾನಸಭೆಯ ಕಲಾಪದಲ್ಲಿಂದು ಹನೂರು ಎನ್‌ಕೌಂಟರ್ ಪ್ರಕರಣ ಭಾರೀ ಚರ್ಚೆಗೆ ಕಾರಣವಾಯಿತು. ಪ್ರಕರಣದಲ್ಲಿ ಮೂವರು ಬೇಟೆಗಾರರ ಎನ್‌ಕೌಂಟರ್ ಹಿನ್ನೆಲೆಯಲ್ಲಿ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ವಿಪಕ್ಷ ನಾಯಕ ಆರ್. ಅಶೋಕ್ ಆಗ್ರಹಿಸಿದರು.
ಕಲಾಪ ಆರಂಭವಾದ ತಕ್ಷಣವೇ ವಿಷಯ ಪ್ರಸ್ತಾಪಿಸಿದ ಆರ್. ಅಶೋಕ್, ʻಮೂವರು ಸತ್ತಿದ್ದಾರೆ, ಸರ್ಕಾರ ಸ್ಪಷ್ಟನೆ ಕೊಡಬೇಕುʼ ಎಂದು ಒತ್ತಾಯಿಸಿದರು. ತಮಿಳುನಾಡು ಮುಖ್ಯಮಂತ್ರಿ ಕೂಡ ಘಟನೆ ಕುರಿತು ಮಾತನಾಡಿದ್ದಾರೆ. ರಾಜ್ಯದಲ್ಲಿ ತಮಿಳಿಗರಿಗೆ ರಕ್ಷಣೆ ಇಲ್ಲ ಎಂದು ಆರೋಪ ಮಾಡಿದ್ದಾರೆ. ಈ ಬಗ್ಗೆ ಸರ್ಕಾರ ಗಂಭೀರವಾಗಿ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.
ವಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ ಪರಮೇಶ್ವರ್, ಮೊದಲು ಪ್ರಶ್ನೋತ್ತರ ಕಲಾಪಕ್ಕೆ ಅವಕಾಶ ನೀಡಬೇಕು. ಬಳಿಕ ಪ್ರಕರಣದ ಕುರಿತು ಚರ್ಚೆಗೆ ನಿಲುವಳಿ ಸೂಚನೆ ನೀಡುವಂತೆ ಸಲಹೆ ನೀಡಿದರು. ಈ ವೇಳೆ ಮಧ್ಯಪ್ರವೇಶಿಸಿದ ಬಿಜೆಪಿ ಶಾಸಕ ಸುನೀಲ್ ಕುಮಾರ್, ʻಸರ್ಕಾರ ಘಟನೆ ಬಗ್ಗೆ ಸ್ವಯಂಪ್ರೇರಿತ ಹೇಳಿಕೆ ನೀಡುತ್ತದೆ ಎಂದುಕೊಂಡಿದ್ದೆವು. ಸರ್ಕಾರ ಹೇಳಿಕೆ ನೀಡದ ಹಿನ್ನೆಲೆಯಲ್ಲಿ ನಾವೇ ವಿಷಯ ಪ್ರಸ್ತಾಪಿಸಿದ್ದೇವೆʼ ಎಂದು ಹೇಳಿದರು.
ಪರಮೇಶ್ವರ್ ಅವರ ಮಾತಿಗೆ ತಿರುಗೇಟು ನೀಡಿದ ಸುನೀಲ್ ಕುಮಾರ್, ʻಚರ್ಚೆಗೆ ನೋಟಿಸ್ ಕೊಡಿ ಅಂತಿದ್ದೀರಲ್ಲ, ಎನ್‌ಕೌಂಟರ್ ಮಾಡುವ ಮುನ್ನ ಸತ್ತವರಿಗೆ ನೋಟಿಸ್ ಕೊಟ್ಟಿದ್ದೀರಾ?ʼ ಎಂದು ಪ್ರಶ್ನಿಸಿದರು. ಇದರಿಂದ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ವಾಕ್ಸಮರ ನಡೆಯಿತು. ಸದನದಲ್ಲಿ ಕೆಲಕಾಲ ಗದ್ದಲದ ವಾತಾವರಣ ನಿರ್ಮಾಣವಾಯಿತು.
ವಿಪಕ್ಷಗಳ ನಿರಂತರ ಆಗ್ರಹದ ಹಿನ್ನೆಲೆಯಲ್ಲಿ ಸರ್ಕಾರ ಪ್ರಕರಣದ ಕುರಿತು ಸದನದಲ್ಲಿ ಸ್ಪಷ್ಟನೆ ನೀಡಿತು. ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರು ಹನೂರು ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ನಿಲುವನ್ನ ಸದನದಲ್ಲಿ ವಿವರಿಸಿದರು.
ಸಚಿವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅಶೋಕ್, ಸಚಿವರು ಉತ್ತರವನ್ನು ಓದಿ ಮುಗಿಸಿದ್ದಾರೆ ಎಂದು ಆಕ್ಷೇಪಿಸಿದರು. ಮೃತಪಟ್ಟವರ ಕುಟುಂಬಗಳಿಗೆ ಏನು ಪರಿಹಾರ ನೀಡಲಾಗಿದೆ? ಮೃತಪಟ್ಟವರ ವಿರುದ್ಧ ಯಾವುದೇ ಅರಣ್ಯ ಇಲಾಖೆ ಪ್ರಕರಣಗಳಿರಲಿಲ್ಲ ಎಂದು ಸಚಿವರು ಹೇಳಿದ್ದಾರೆ. ಹಾಗಿದ್ದರೆ ಘಟನೆ ಹೇಗೆ ನಡೆದಿದೆ? ಎಂಬುದರ ಬಗ್ಗೆ ಸರ್ಕಾರ ಸಮಗ್ರವಾಗಿ ಉತ್ತರಿಸಬೇಕು ಎಂದು ಒತ್ತಾಯಿಸಿದರು.
ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅಶೋಕ್, ʻಸರ್ಕಾರಕ್ಕೆ ಮಾನ-ಮರ್ಯಾದೆ ಇಲ್ಲ. ಇದು ಎನ್‌ಕೌಂಟರ್ ಅಲ್ಲ ಕೊಲೆʼ ಎಂದು ಆರೋಪಿಸಿದರು. ಎನ್‌ಕೌಂಟರ್ ಪ್ರಕರಣದ ಬಗ್ಗೆ ಸಂಪೂರ್ಣ ಚರ್ಚೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು. ತಮಿಳುನಾಡು ಮುಖ್ಯಮಂತ್ರಿ ಕೂಡ ಘಟನೆ ಖಂಡಿಸಿರುವುದನ್ನ ಉಲ್ಲೇಖಿಸಿದ ಅಶೋಕ್, ಪ್ರಕರಣದ ಸತ್ಯಾಸತ್ಯತೆ ಬಗ್ಗೆ ಸರ್ಕಾರ ಸ್ಪಷ್ಟ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.
ಈ ನಡುವೆ ಕಾಂಗ್ರೆಸ್ ಸದಸ್ಯರು ಪ್ರಶ್ನೋತ್ತರ ಕಲಾಪಕ್ಕೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು. ಇದರಿಂದ ಸದನದಲ್ಲಿ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ಮತ್ತೆ ಗದ್ದಲ ಹಾಗೂ ವಾಕ್ಸಮರ ಮುಂದುವರಿದ ಹಿನ್ನೆಲೆ ಮಧ್ಯಾಹ್ನ 2 ಗಂಟೆಗೆ ಸದನ ಮುಂದೂಡಲಾಯಿತು. ಇದನ್ನೂ ಓದಿ : ಕಾವೇರಿ ವಿಚಾರಣೆ 1 ವಾರಕ್ಕೆ ಮುಂದೂಡಿಕೆ; ಸುಪ್ರೀಂ ಕೋರ್ಟ್ ಆದೇಶ..!
