ಬೆಂಗಳೂರು : ರಾಜ್ಯದಲ್ಲಿರುವ 5927 ಗ್ರಾಮಪಂಚಾಯತಿ ವ್ಯಾಪ್ತಿಯ ಎಲ್ಲ ಹಳ್ಳಿಗಳನ್ನೂ ಆದರ್ಶ ಗ್ರಾಮಗಳನ್ನಾಗಿ ಪರಿವರ್ತಿಸಿ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಪಂಚಾಯ್ತಿ ಸಿಬ್ಬಂದಿಗೆ ಕರೆ ನೀಡಿದ್ದಾರೆ. ಬೆಂಗಳೂರಿನ ಗ್ರಾಮೀಣಾಭಿವೃದ್ಧಿ ಇಲಾಖೆ ಆಯುಕ್ತಾಲಯದಲ್ಲಿಂದು ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಪಂಚಾಯತಿ ಕಾರ್ಯದರ್ಶಿ ಮತ್ತು ಲೆಕ್ಕ ಸಹಾಯಕರ ಪಾದರ್ಶಕ ವರ್ಗಾವಣೆ ಪ್ರಕ್ರಿಯೆ ಕೌನ್ಸೆಲಿಂಗ್ ಗೆ ಚಾಲನೆ ನೀಡಿ ಅವರು ಮಾತನಾಡಿದರು.
ಭಾರತ ಹಳ್ಳಿಗಳ ದೇಶ. ಹಳ್ಳಿಗಳು ಭಾರತದ ಜೀವನಾಡಿ. ಆದರೆ ಇಂದು ಗ್ರಾಮೀಣ ಯುವಕರು ನಗರಗಳಿಗೆ ಹೋಗಿ ನೆಲೆಸುತ್ತಿದ್ದು, ಹಳ್ಳಿಗಳು ವೃದ್ಧಾಶ್ರಮಗಳಾಗಿ ಪರಿವರ್ತನೆ ಆಗುತ್ತಿವೆ. ತಮ್ಮ ಗ್ರಾಮದಲ್ಲೇ ಯುವಜನರಿಗೆ ಉದ್ಯೋಗ ಮತ್ತು ಮೂಲಭೂತ ಸೌಕರ್ಯ ಕಲ್ಪಿಸಿದರೆ, ಗ್ರಾಮಾಭಿವೃದ್ದಿಯೂ ಆಗುತ್ತದೆ. ವಲಸೆಯೂ ನಿಲ್ಲುತ್ತದೆ ಎಂದರು. ವರ್ಗಾವಣೆಯಲ್ಲಿ ಪಾರದರ್ಶಕತೆ ತರಲು ಕೌನ್ಸೆಲಿಂಗ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಪಿಡಿಓ, ಕಾರ್ಯದರ್ಶಿ ಮತ್ತು ಲೆಕ್ಕ ಸಹಾಯಕರು ಪ್ರಾಮಾಣಿಕತೆ, ನಿಷ್ಠೆ, ದಕ್ಷತೆ ಮತ್ತು ಬದ್ಧತೆಯಿಂದ ಸಂಘಟಿತರಾಗಿ ತಮ್ಮ ಜವಾಬ್ದಾರಿ ನಿರ್ವಹಿಸಿದರೆ ಪ್ರತಿ ಗ್ರಾಮವೂ ಅಭಿವೃದ್ಧಿಹೊಂದುತ್ತದೆ ಎಂದು ಈಶ್ವರ ಖಂಡ್ರೆ ಹೇಳಿದರು.
ಆತ್ಮವಿಶ್ವಾಸ ಮತ್ತು ಕಠಿಣ ಪರಿಶ್ರಮ ವೈಫಲ್ಯ ಎಂಬ ಕಾಯಿಲೆ ಗುಣಪಡಿಸುತ್ತದೆ ಎಂದು ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜಿ. ಅಬ್ದುಲ್ ಕಲಾಂ ಹೇಳುತ್ತಿದ್ದರು. ನೀವೆಲ್ಲರೂ ಕಷ್ಟಪಟ್ಟು ಕೆಲಸ ಮಾಡದೆ, ಇಷ್ಟಪಟ್ಟು ಕೆಲಸ ಮಾಡಿ. ಆಗ ಪರಿವರ್ತನೆಯನ್ನು ನೀವೇ ನೋಡುತ್ತೀರಿ ಎಂದರು. ಕೇಂದ್ರ ಪ್ರಾಯೋಜಿತ ಯೋಜನೆ ಇರಲಿ, ರಾಜ್ಯ ಸರ್ಕಾರ ಕೈಗೊಳ್ಳುವ ಯೋಜನೆಯೇ ಇರಲಿ ಎಲ್ಲ ಕಾಮಗಾರಿಗಳಲ್ಲಿ ಗುಣಮಟ್ಟ ಖಾತ್ರಿ ಪಡಿಸಿಕೊಳ್ಳಿ, ಗ್ರಾಮಗಳಲ್ಲಿ ನೀವು ಸೃಷ್ಟಿಸುವ ಆಸ್ತಿಗಳು ದೀರ್ಘಕಾಲ ಬಾಳಿಕೆ ಬರಬೇಕು. ಅದು ಶಾಶ್ವತವಾದ ದೇಶದ ಆಸ್ತಿಯಾಗಬೇಕು. ನಿಮ್ಮ ವ್ಯಾಪ್ತಿಯ ಗ್ರಾಮಗಳಲ್ಲಿ ನಡೆಯುವ ಕಾಮಗಾರಿ ಗ್ರಾಮೀಣರ ಬದುಕನ್ನು ಹಸನು ಮಾಡಬೇಕು, ಅವರ ಜೀವನಮಟ್ಟ ಸುಧಾರಿಸಬೇಕು. ಗ್ರಾಮ ಅಭಿವೃದ್ಧಿ ಆಗಬೇಕು. ಹೀಗಾಗಿ ಪ್ರತಿಯೊಂದು ಗ್ರಾಮೀಣ ಆಸ್ತಿಯನ್ನೂ ಜಿಯೋ ಟ್ಯಾಗ್ ಮಾಡಿ ಎಂದು ಸೂಚಿಸಿದರು.

1229 ಅಧಿಕಾರಿ, ಸಿಬ್ಬಂದಿಯ ವರ್ಗಾವಣೆ : ರಾಜ್ಯದ ಗ್ರಾಮೀಣ ಆಡಳಿತ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಇಲಾಖೆಯಲ್ಲಿ ಹಲವು ಆಡಳಿತಾತ್ಮಕ ಸುಧಾರಣಾ ಕ್ರಮಗಳನ್ನು ಕೈಗೊಳ್ಳುತ್ತಿದ್ದು, 2026-27ನೇ ಸಾಲಿನ ವರ್ಗಾವಣೆ ಪ್ರಕ್ರಿಯೆಯಲ್ಲಿ 31 ಜಿಲ್ಲೆಗಳಲ್ಲಿ ಗ್ರಾಮ ಪಂಚಾಯತಿ ಕಾರ್ಯದರ್ಶಿ ಗ್ರೇಡ್ – 1 ಮತ್ತು ಗ್ರೇಡ್ -2 ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರಿಂದ ಸ್ವೀಕೃತವಾಗಿದ್ದ 1,801 ವರ್ಗಾವಣೆ ಅರ್ಜಿಗಳನ್ನು ಪರಿಶೀಲಿಸಿ 1,229 ಅರ್ಹ ಸಿಬ್ಬಂದಿಗೆ ಆನ್ ಲೈನ್ ಮೂಲಕ ಕೌನ್ಸೆಲಿಂಗ್ ನಡೆಸಿ, ವರ್ಗಾವಣೆ ಆದೇಶಗಳನ್ನು ಸ್ಥಳದಲ್ಲೇ ನೀಡಲಾಗಿದೆ ಎಂದರು.
ಪಿಡಿಓ ವರ್ಗಾವಣೆಗೆ 811 ಅರ್ಜಿ ಸ್ವೀಕಾರ : ಪಿಡಿಓಗಳ ಆನ್‌ಲೈನ್ ವರ್ಗಾವಣೆಗೆ ವಿಶೇಷ ಪ್ರಕರಣಗಳ ಅಡಿಯಲ್ಲಿ 213, ಕಡ್ಡಾಯ ವರ್ಗಾವಣೆಯಡಿ 238 ಹಾಗೂ ಸಾಮಾನ್ಯ ಕೋರಿಕೆ ವರ್ಗಾವಣೆಯಡಿ 388 ಸೇರಿ ಒಟ್ಟು 839 ಅರ್ಜಿಗಳನ್ನು ಸ್ವೀಕರಿಸಿದ್ದು, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳನ್ನು ಕೌನ್ಸಿಲಿಂಗ್‌ಗೆ ಪರಿಗಣಿಸಲಾಗಿದೆ ಎಂದರು. ಕೆಲವು ತಾಲೂಕಿನಲ್ಲಿ ಹೆಚ್ಚು ಸಿಬ್ಬಂದಿ, ಮತ್ತೆ ಕೆಲವು ತಾಲೂಕಿನಲ್ಲಿ ಸಿಬ್ಬಂದಿ ಕೊರತೆ ಆಗದಂತೆ ಈಬಾರಿ ಕ್ರಮವಹಿಸಲಾಗಿದೆ ಎಂದು ತಿಳಿಸಿದರು.
ಪ್ರಸ್ತುತ ಖಾಲಿ ಹುದ್ದೆಗಳ, ಕೌನ್ಸಿಲಿಂಗ್ ಗೆ ಆಯ್ಕೆಯಾದರ ಆದ್ಯತಾ ಪಟ್ಟಿ, ಕಡ್ಡಾಯ ವರ್ಗಾವಣೆಗಳ ರಾಜ್ಯವಾರು ಅಂತಿಮ ಪಟ್ಟಿ ಹಾಗೂ ವರ್ಗಾವಣೆಯಿಂದ ವಿನಾಯತಿಗಾಗಿ ಕೋರಿಕೆ ಸಲ್ಲಿಸಿದವರ ಪಟ್ಟಿಯನ್ನು ವರ್ಗಾವಣೆ ಕೌನ್ಸಿಲಿಂಗ್ ವೆಬ್‌ಸೈಟ್ ನಲ್ಲಿ ಪ್ರಕಟಿಸಲಾಗಿದ್ದು, ಪಾರದರ್ಶಕತೆ ಕಾಪಾಡಲಾಗಿದೆ ಎಂದರು. ಕೌನ್ಸಿಲಿಂಗ್ ಮೂಲಕ ನಡೆಯುತ್ತಿರುವ ಪಿಡಿಓಗಳ ವರ್ಗಾವಣೆಯಲ್ಲಿ ವಿಶೇಷ ಪ್ರಕರಣಗಳ – ವಿಶೇಷಚೇತನರು, ಗಂಭೀರ ಅನಾರೋಗ್ಯ ಹಾಗೂ ಪತಿ-ಪತ್ನಿ ಪ್ರಕರಣಗಳು- ಕೌನ್ಸಿಲಿಂಗ್ ಪ್ರಕ್ರಿಯೆಗೆ ಇಂದು ಚಾಲನೆ ನೀಡಿದ್ದು, ನಾಳೆ ಕಡ್ಡಾಯ ಮತ್ತು ಸಾಮಾನ್ಯ ಕೋರಿಕೆ ವರ್ಗಾವಣೆ ಕೌನ್ಸೆಲಿಂಗ್ ನಡೆಯಲಿದೆ. 16 ರಂದು ಸಾಮಾನ್ಯ ಕೋರಿಕೆ ವರ್ಗಾವಣೆ ಕೌನ್ಸೆಲಿಂಗ್ ನಡೆಸಿ ವರ್ಗಾವಣೆ ಆದೇಶ ನೀಡಲಾಗುವುದು ಎಂದು ವಿವರ ನೀಡಿದರು. ಈ ಸಂದರ್ಭದಲ್ಲಿ ಇಲಾಖೆಯ ಕಾರ್ಯದರ್ಶಿ ಡಿ.ರಂದೀಪ್, ಆಯುಕ್ತರಾದ ಡಾ.ಅರುಂಧತಿ ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು. ಇದನ್ನೂ ಓದಿ : ಭೀಮನ ಮೇಲೆ ಕಲ್ಲು ತೂರಾಟ; ಕಾರ್ಮಿಕನೊಬ್ಬ ವಿರುದ್ಧ ಸ್ಥಳೀಯರು ಗರಂ
