27.7 C
ಬೆಂಗಳೂರು
October 9, 2026
kranthikidi.com
ತಾಜಾಸುದ್ದಿದೇಶ

ಆರ್ಥಿಕ ಸಂಕಷ್ಟದಲ್ಲಿ ಹಿಮಾಚಲ; ಇಂದಿನಿಂದ ಪೆಟ್ರೋಲ್‌, ಡೀಸೆಲ್‌ ದರ ಏರಿಕೆ..!

ಶಿಮ್ಲಾ : ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಹಿಮಾಚಲ ಪ್ರದೇಶದಲ್ಲಿ ಇಂದಿನಿಂದ ಜಾರಿಗೆ ಬರುವಂತೆ ಪ್ರತಿ ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ದರ 60 ಪೈಸೆ ಹೆಚ್ಚಳವಾಗಿದೆ. ಹಣದುಬ್ಬರ ಅಥವಾ ಕಚ್ಚಾ ತೈಲದ ಬೆಲೆ ಏರಿಕೆಯಿಂದ ಈ ದರ ಏರುತ್ತಿಲ್ಲ. ಬದಲಿಗೆ ವಿಧವಾ ಮತ್ತು ಅನಾಥ ಕಲ್ಯಾಣ ಸೆಸ್ ಹೆಸರಿನಲ್ಲಿ 60 ಪೈಸೆ ಕರ ಸಂಗ್ರಹಿಸಲು ಸುಖ್ವಿಂದರ್ ಸಿಂಗ್ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಈಗ ಮುಂದಾಗಿದೆ.

ರಾಜ್ಯ ಮೌಲ್ಯವರ್ಧಿತ ತೆರಿಗೆ ಕಾಯ್ದೆಯಡಿ ರಾಜ್ಯ ತೆರಿಗೆ ಮತ್ತು ಅಬಕಾರಿ ಇಲಾಖೆಯು ಈ ಕುರಿತು ಅಧಿಕೃತ ಅಧಿಸೂಚನೆ ಹೊರಡಿಸಿದೆ. ತೈಲ ಸಂಸ್ಥೆಗಳು ಡೀಲರ್‌ಗಳಿಗೆ ತೈಲ ಮಾರಾಟ ಮಾಡುವ ಆರಂಭಿಕ ಹಂತದಲ್ಲೇ ಈ ಸೆಸ್ ಅನ್ವಯವಾಗಲಿದೆ. ಸದ್ಯಕ್ಕೆ 60 ಪೈಸೆ ಹೆಚ್ಚಳ ಮಾಡಲಾಗಿದ್ದರೂ, ಶಾಸನಬದ್ಧವಾಗಿ ಲೀಟರ್‌ಗೆ ಗರಿಷ್ಠ 5 ರೂಪಾಯಿವರೆಗೆ ಸೆಸ್ ವಿಧಿಸಲು ಸರ್ಕಾರಕ್ಕೆ ಅವಕಾಶವಿದೆ.

ಮಾರ್ಚ್ 2026ರಲ್ಲಿ ಸುಖ್ವಿಂದರ್ ಸಿಂಗ್ ಸುಖು ಅವರು ವಿಧಾನಸಭೆಯಲ್ಲಿ ವಿಧವೆಯರು ಮತ್ತು ಅನಾಥ ಮಕ್ಕಳ ಕಲ್ಯಾಣಕ್ಕಾಗಿ ಈ ವಿಶೇಷ ಸೆಸ್ ವಿಧಿಸುವ ವಿಧೇಯಕವನ್ನು ಮಂಡಿಸಿದ್ದರು. ವಿರೋಧ ಪಕ್ಷಗಳ ಧರಣಿ ಮತ್ತು ಸಭಾತ್ಯಾಗದ ನಡುವೆ ಈ ಮಸೂದೆಯು ಧ್ವನಿಮತದ ಮೂಲಕ ಅಂಗೀಕಾರಗೊಂಡಿತ್ತು. ರಾಜ್ಯದಲ್ಲಿ ಕಲ್ಯಾಣ ಯೋಜನೆಗಳಿಗೆ ಅಗತ್ಯವಿರುವ ಆರ್ಥಿಕ ಸಂಪನ್ಮೂಲವನ್ನು ನಿರಂತರವಾಗಿ ಕಾಯ್ದುಕೊಳ್ಳಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ಸಮರ್ಥಿಸಿಕೊಂಡಿದೆ.

ಕಲ್ಯಾಣ ನಿಧಿಯ ಹೆಸರಿನಲ್ಲಿ ಸಾಮಾನ್ಯ ಸಾರ್ವಜನಿಕರು, ಟ್ಯಾಕ್ಸಿ ಚಾಲಕರು, ರೈತರು ಸೇರಿದಂತೆ ಪ್ರತಿಯೊಬ್ಬ ವಾಹನ ಸವಾರರ ಮೇಲೆಯೂ ಈ ತೆರಿಗೆಯ ಹೊರೆ ಬಿದ್ದಿದೆ. ಪೆಟ್ರೋಲಿಯಂ ಡೀಲರ್‌ಗಳ ಸಂಘವು ಸರ್ಕಾರದ ಈ ಕ್ರಮವನ್ನು ಖಂಡಿಸಿದ್ದು, ನೆರೆ ರಾಜ್ಯಗಳಲ್ಲಿ ಇಂಧನ ಬೆಲೆ ಕಡಿಮೆಯಿರುವುದರಿಂದ ಗಡಿಭಾಗದ ಗ್ರಾಹಕರು ನೆರೆ ರಾಜ್ಯಗಳತ್ತ ಮುಖ ಮಾಡಲಿದ್ದಾರೆ. ಇದರಿಂದ ರಾಜ್ಯ ಸರ್ಕಾರಕ್ಕೆ ಬರುವ ಆದಾಯಕ್ಕೂ ಕಡಿತ ಉಂಟಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದೆ. ರಾಜ್ಯದಲ್ಲಿ ಎಷ್ಟು ಜನ ವಿಧವೆಯರು ಹಾಗೂ ಅನಾಥರಿದ್ದಾರೆ ಮತ್ತು ಈ ಹಣದ ವಿನಿಯೋಗದ ಯೋಜನೆ ಏನು ಎಂಬ ಸ್ಪಷ್ಟ ಚಿತ್ರಣವನ್ನು ಸರ್ಕಾರ ನೀಡಿಲ್ಲ ಎಂದು ಆರೋಪಿಸಿದೆ.

ಬಿಜೆಪಿ ಸಂಸದ ಅನುರಾಗ್ ಠಾಕೂರ್ ಸರ್ಕಾರದ ಕ್ರಮವನ್ನು ತೀವ್ರವಾಗಿ ಟೀಕಿಸಿದ್ದು, ಹಿಮಾಚಲ ಪ್ರದೇಶದಲ್ಲಿ ಈಗಾಗಲೇ ಡೀಸೆಲ್ ಮೇಲಿನ ವ್ಯಾಟ್ ಅನ್ನು ಎರಡು ಬಾರಿ (ತಲಾ 3 ರೂ.) ಹೆಚ್ಚಿಸಲಾಗಿದೆ. ಪ್ರಸ್ತುತ ಜಾರಿಯಾದ ಸೆಸ್ ಸೇರಿ ಒಟ್ಟಾರೆಯಾಗಿ ಡೀಸೆಲ್ ದರ 15.40 ರೂ. ರಷ್ಟು ಏರಿಕೆಯಾದಂತಾಗಿದೆ. ಈ ಮೂಲಕ ಸರ್ಕಾರ ವರ್ಷಕ್ಕೆ 1,000 ಕೋಟಿ ರೂ.ಗೂ ಅಧಿಕ ಹೆಚ್ಚುವರಿ ಆದಾಯ ಸಂಗ್ರಹಿಸಲು ಹೊರಟಿದ್ದು, ಇದು ಸಾಮಾನ್ಯ ಜನರ ಜೇಬಿಗೆ ನೇರ ಹೊಡೆತ ನೀಡಿದೆ ಎಂದು ಹೇಳಿದ್ದಾರೆ.

ಇತ್ತೀಚಿನ ವರದಿಗಳ ಪ್ರಕಾರ, ಹಿಮಾಚಲ ಪ್ರದೇಶವು ತೀವ್ರ ಆರ್ಥಿಕ ಸಂಕಷ್ಟದಲ್ಲಿದೆ. ರಾಜ್ಯದ ಒಟ್ಟು ಸಾಲ 1,04,000 ಕೋಟಿ ರೂ. ದಾಟಿದ್ದು, 2026-27ನೇ ಸಾಲಿನಲ್ಲಿ 13,000 ಕೋಟಿ ರೂ. ಸಾಲ ಮರುಪಾವತಿಸಬೇಕಿದೆ. ಆದರೆ ಸರ್ಕಾರ ಕೇವಲ 10,000 ಕೋಟಿ ಸಾಲ ಪಡೆಯಲು ಮಾತ್ರ ಯೋಜಿಸಿದ್ದು, 3,000 ಕೋಟಿ ರೂ. ಕೊರತೆ ಎದುರಾಗಿದೆ.

ಇದರ ಜೊತೆಗೆ, 16ನೇ ಹಣಕಾಸು ಆಯೋಗವು ಆದಾಯ ಕೊರತೆ ಅನುದಾನವನ್ನು ಸ್ಥಗಿತಗೊಳಿಸಲು ಶಿಫಾರಸು ಮಾಡಿರುವುದರಿಂದ ಮುಂದಿನ 5 ವರ್ಷಗಳಲ್ಲಿ ರಾಜ್ಯಕ್ಕೆ 35,000 ಕೋಟಿ ರೂ.ಗೂ ಅಧಿಕ ನಷ್ಟವಾಗುವ ಭೀತಿಯಿದೆ. ಸರ್ಕಾರಿ ನೌಕರರ ವೇತನ ವಿಳಂಬ ಹಾಗೂ ತೀವ್ರ ಆರ್ಥಿಕ ಮುಗ್ಗಟ್ಟಿನ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತನ್ನದೇ ಆದ ಹೊಸ ಸೆಸ್ ಮೂಲಕ ಆದಾಯ ಕ್ರೋಢೀಕರಿಸಲು ಈಗ ಮುಂದಾಗಿದೆ.

ವಿಧಾನಸಭಾ ಚುನಾವಣೆ ಗೆಲ್ಲಲು ಕಾಂಗ್ರೆಸ್‌ ಭರಪೂರ ಉಚಿತ ಕೊಡುಗೆಗಳನ್ನು ಪ್ರಕಟಿಸಿತ್ತು. ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ತೀವ್ರ ಆರ್ಥಿಕ ಮುಗ್ಗಟ್ಟು ಮತ್ತು ಸಾಲದ ಹೊರೆಯನ್ನು ನಿರ್ವಹಿಸಲು ತನ್ನ ಜನಪ್ರಿಯ ಸಬ್ಸಿಡಿ ಹಾಗೂ ಉಚಿತ ಕೊಡುಗೆ ಯೋಜನೆಗಳನ್ನು ಗಣನೀಯವಾಗಿ ಕಡಿತಗೊಳಿಸಿದೆ. ಚುನಾವಣಾ ಭರವಸೆಗಳಾಗಿ ಹಲವು ಪ್ರಮುಖ ಕಲ್ಯಾಣ ಯೋಜನೆಗಳನ್ನು ಘೋಷಿಸಲಾಗಿದ್ದರೂ, ರಾಜ್ಯದ ಹಣಕಾಸಿನ ಕೊರತೆಯನ್ನು ನೀಗಿಸಲು ಸರ್ಕಾರವು ಈಗ ಇವುಗಳಿಗೆ ಕಟ್ಟುನಿಟ್ಟಾದ ನಿಯಮಗಳನ್ನು ಜಾರಿಗೆ ತಂದಿದೆ.

ಆರಂಭದಲ್ಲಿ 14 ಲಕ್ಷಕ್ಕೂ ಹೆಚ್ಚು ಗ್ರಾಹಕರಿಗೆ ಶೂನ್ಯ ವಿದ್ಯುತ್ ಬಿಲ್ ನೀಡುವ ಉದ್ದೇಶದಿಂದ ಇದನ್ನು ಜಾರಿಗೊಳಿಸಲಾಗಿತ್ತು. ಆದರೆ ಈಗ ಎಲ್ಲಾ ಗೃಹ ಬಳಕೆದಾರರಿಗೆ ನೀಡಲಾಗುತ್ತಿದ್ದ 125 ಯೂನಿಟ್ ಉಚಿತ ವಿದ್ಯುತ್ ಸೌಲಭ್ಯವನ್ನು ಈಗ ಬದಲಾಯಿಸಲಾಗಿದೆ. ಆದರೆ ಈಗ ಆದಾಯ ತೆರಿಗೆ ಪಾವತಿಸುವ ಗ್ರಾಹಕರನ್ನು ಈ ಯೋಜನೆಯಿಂದ ಹೊರಗಿಡಲಾಗಿದೆ. ದುರುಪಯೋಗವನ್ನು ತಡೆಯಲು ‘ಒಂದು ಕುಟುಂಬಕ್ಕೆ ಒಂದೇ ಮೀಟರ್’ ನಿಯಮವನ್ನು ಕಡ್ಡಾಯಗೊಳಿಸಲಾಗಿದೆ.

ಎಲ್ಲರಿಗೂ ಉಚಿತ ವಿದ್ಯುತ್ ನೀಡುವ ಮೂಲ ಯೋಜನೆಯನ್ನು ಸರ್ಕಾರ ಬದಲಾಯಿಸಿದೆ. ಈಗ ಮುಖ್ಯಮಂತ್ರಿ ಅಪ್ನಾ ಸುಖಿ ಪರಿವಾರ್ ಯೋಜನೆ ಅಡಿಯಲ್ಲಿ ರಾಜ್ಯದ ಕೇವಲ ಒಂದು ಲಕ್ಷ ಅತ್ಯಂತ ಬಡ ಕುಟುಂಬಗಳನ್ನು ಮಾತ್ರ ಇದಕ್ಕೆ ಗುರಿಯಾಗಿಸಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಎಲ್ಲರಿಗೂ ನೀಡಲಾಗುತ್ತಿದ್ದ ಉಚಿತ ನೀರು ಸರಬರಾಜನ್ನು ಹಿಂಪಡೆಯಲಾಗಿದೆ. ವಾರ್ಷಿಕ ಆದಾಯ 50,000 ರೂ. ಕ್ಕಿಂತ ಹೆಚ್ಚು ಇರುವ ಗ್ರಾಮೀಣ ಕುಟುಂಬಗಳು ತಿಂಗಳಿಗೆ 100 ರೂ.ನಿಗದಿತ ಶುಲ್ಕ ಪಾವತಿಸಬೇಕಾಗುತ್ತದೆ. ಇದನ್ನೂ ಓದಿ : ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಿ; ಸಿಎಂ ಡಿಕೆಶಿ ಅವರಿಗೆ ಬಿಡದಿ ರೈತರ ಮನವಿ..!

Related posts

ಸಿದ್ದರಾಮಯ್ಯ ಪದತ್ಯಾಗದ ಬೆನ್ನಲ್ಲೇ, ಒಬಿಸಿಗೆ ಕಾಂಗ್ರೆಸ್​​ ಬಂಪರ್..!

Kalpana Editor

ಭೀಮಾತೀರದಲ್ಲಿ ಸಾಮೂಹಿಕ ಹತ್ಯೆ ಕೇಸ್‌ – 12 ಆರೋಪಿಗಳ ಅರೆಸ್ಟ್‌..!

Kalpana Editor

ಹಾಸನದಲ್ಲಿ ಮಳೆಯಬ್ಬರ – ಹೇಮಾವತಿ ಜಲಾಶಯದ ಒಳಹರಿವು ಹೆಚ್ಚಳ..!

Kalpana Editor