ಬೆಂಗಳೂರು : ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರದ ಸಂಪುಟ ವಿಸ್ತರಣೆ ಬೆನ್ನಲ್ಲೇ ಶಾಸಕರ ವಲಯದಲ್ಲಿ ತೀವ್ರ ಅಸಮಾಧಾನ ಸ್ಫೋಟಗೊಂಡಿದೆ. ತಮಗೆ ಸಚಿವ ಸ್ಥಾನ ಸಿಗದಿದ್ದಕ್ಕೆ ತೀವ್ರ ಬೇಸರಗೊಂಡಿರುವ ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ರಾಜೀನಾಮೆ ಘೋಷಣೆ ಮಾಡಿದ್ದಾರೆ. ಇಂಡಿ ಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ್ ಕೂಡಾ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಇದರ ಜತೆಗೆ ಇನ್ನು ಹಲವು ಶಾಸಕರು ಅಸಮಾಧನ ಹೊರಹಾಕಿದ್ದಾರೆ.
ಇದೀಗ ಹಲವು ಕಡೆ ಶಾಸಕರಿಗೆ ಸಚಿವ ಸ್ಥಾನ ಸಿಗದಿದ್ದಕ್ಕೆ ಪ್ರತಿಭಟನೆ ಕೂಡ ಶುರುವಾಗಿದೆ. ಈ ಇಬ್ಬರೂ ಹಿರಿಯ ನಾಯಕರ ಬಂಡಾಯವು ಆಡಳಿತಾರೂಢ ಕಾಂಗ್ರೆಸ್ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ತಮಗೆ ಉದ್ದೇಶಪೂರ್ವಕವಾಗಿ ಸಚಿವ ಸ್ಥಾನ ತಪ್ಪಿಸಲಾಗಿದೆ ಎಂದು ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. “ನಾಳೆ (ಆಗಸ್ಟ್ 4) ಬೆಳಗ್ಗೆ 10 ಗಂಟೆಗೆ ಶಾಸಕ ಸ್ಥಾನ ಹಾಗೂ ನಿಗಮ ಮಂಡಳಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ನನಗೆ ಸಾಕಷ್ಟು ನೋವಾಗಿದೆ. ಮೂರು ವರ್ಷ ಮಂತ್ರಿಯಾದವರಿಗೇ ಮತ್ತೆ ಅವಕಾಶ ಕೊಟ್ಟಿದ್ದಾರೆ.
ಮಾಜಿ ಮುಖ್ಯಮಂತ್ರಿ ಮಕ್ಕಳು ಮತ್ತು ಮಂತ್ರಿಗಳ ಮಕ್ಕಳೇ ಸಚಿವರಾಗಬೇಕಾ? ಹೊಸಬರಿಗೆ ಅವಕಾಶ ನೀಡುತ್ತೇವೆ ಅನ್ನುತ್ತಾರೆ, ಇದೇನಾ ಅವರು ಕೊಟ್ಟಿರುವ ಅವಕಾಶ? ನಾಳೆ ನನ್ನ ಜೊತೆ ಹಲವು ಶಾಸಕರು ರಾಜೀನಾಮೆ ನೀಡಲಿದ್ದಾರೆ.” ಎಂದು ಹೇಳಿದ್ದಾರೆ. ಇಂಡಿ ಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ್ ಅವರು ತಮಗೆ ಸಚಿವ ಸ್ಥಾನ ಕೈತಪ್ಪಿದ ಕುರಿತು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. “ಇಂದಿನ ದಿನಗಳಲ್ಲಿ ನಿಷ್ಠಾವಂತರಿಗೆ ಮತ್ತು ಪ್ರಾಮಾಣಿಕರಿಗೆ ಬೆಲೆ ಇಲ್ಲದಂತಾಗಿದೆ.
ಈ ಬಾರಿ ಸಚಿವ ಸ್ಥಾನ ಸಿಗುವ ಪೂರ್ಣ ನಿರೀಕ್ಷೆ ಇತ್ತು ಹಾಗೂ ಪಕ್ಷದ ವರಿಷ್ಠರು ಕೂಡ ಭರವಸೆ ನೀಡಿದ್ದರು. ಆದರೆ ಕೊನೆ ಕ್ಷಣದಲ್ಲಿ ಕೈಬಿಟ್ಟು ಕೊಟ್ಟ ಮಾತನ್ನು ಉಳಿಸಿಕೊಳ್ಳಲಿಲ್ಲ. ಇದರಿಂದ ಮನಸ್ಸಿಗೆ ಭಾರಿ ಬೇಸರವಾಗಿದೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ” ಈಗಾಗಲೇ ಸ್ಪೀಕರ್ ರುದ್ರಪ್ಪ ಲಮಾಣಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ : ಬ್ರೇಕಪ್ ವದಂತಿಗೆ ಪ್ರತಿಕ್ರಿಯೆ ಕೊಟ್ಟ ನಟಿ ಅನುಪಮಾ ಪರಮೇಶ್ವರನ್
