ಬೆಂಗಳೂರು/ಮೈಸೂರು : ಈ ವರ್ಷದ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಸಿದ್ಧತೆಗಳು ಅಧಿಕೃತವಾಗಿ ಚಾಲನೆ ಪಡೆದುಕೊಂಡ ಬೆನ್ನಲ್ಲೇ, ಈ ಬಾರಿ ದಸರಾದಲ್ಲಿ ಕರಾವಳಿಯ ಜಾನಪದ ಕ್ರೀಡೆ ಕಂಬಳವನ್ನು ಆಯೋಜಿಸುವ ಕುರಿತು ಪರ-ವಿರೋಧದ ಚರ್ಚೆಗಳು ತೀವ್ರಗೊಂಡಿವೆ. ಒಂದು ಕಡೆ ಕಂಬಳ ಆಯೋಜನೆಗೆ ಶಾಸಕ ಅಶೋಕ್ ರೈ ನೇತೃತ್ವದಲ್ಲಿ ಸಿದ್ಧತೆಗಳು ನಡೆಯುತ್ತಿದ್ದರೆ, ಮತ್ತೊಂದೆಡೆ ಮೈಸೂರು ರಾಜಮನೆತನದ ಸಂಸದ ಯದುವೀರ್ ಒಡೆಯರ್ ಹಾಗೂ ಮಾಜಿ ಸಂಸದ ಪ್ರತಾಪ್ ಸಿಂಹ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಹೆಮ್ಮೆಯಾದ ಮೈಸೂರು ದಸರಾವನ್ನು ಈ ಬಾರಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲು ಸರ್ಕಾರ ಸಿದ್ಧತೆ ನಡೆಸಿದ್ದು ಶುಕ್ರವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಸಭೆ ನಡೆಯಿತು. ಆಗಸ್ಟ್ 26ರಂದು ಗಜಪಯಣ ಆರಂಭವಾಗಲಿದ್ದು ಅಕ್ಟೋಬರ್ 11ರಂದು ಚಾಮುಂಡಿ ಬೆಟ್ಟದಲ್ಲಿ ದಸರಾ ಮಹೋತ್ಸವಕ್ಕೆ ಅಧಿಕೃತ ಚಾಲನೆ ಸಿಗಲಿದೆ. ಟೂರ್ನಿಯ ಉದ್ಘಾಟಕರನ್ನು ನಿರ್ಣಯಿಸುವ ಅಧಿಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಹಿಸಲಾಗಿದೆ. ಅಕ್ಟೋಬರ್ 21ರ ವಿಜಯದಶಮಿಯಂದು ಮಧ್ಯಾಹ್ನ 4:10ಕ್ಕೆ ಮೀನಾ ಲಗ್ನದಲ್ಲಿ ಜಂಬೂ ಸವಾರಿ ಜರುಗಲಿದೆ.

ಈ ಸಭೆಯಲ್ಲಿ ಕಂಬಳದ ಬಗ್ಗೆಯೂ ಮಾತುಕತೆ ನಡೆಯಿತು. ಸಭೆಯಲ್ಲಿ ಯಾವುದೇ ತೀರ್ಮಾನ ತೆಗೆದುಕೊಳ್ಳದ ಶಿವಕುಮಾರ್ ಮುಂದಿನ ಸಭೆಯಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳೋಣ ಎಂದು ಹೇಳಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಯಶಸ್ವಿಯಾಗಿ ಕಂಬಳ ಆಯೋಜಿಸಿದ್ದ ಪುತ್ತೂರು ಶಾಸಕ ಅಶೋಕ್ ರೈ ಈ ಬಾರಿ ದಸರಾದಲ್ಲಿ ಕಂಬಳದ ಸೌಂದರ್ಯವನ್ನು ಜಗತ್ತಿಗೆ ಪರಿಚಯಿಸಲು ಮುಂದಾಗಿದ್ದಾರೆ.
ದಸರಾದಲ್ಲಿ ಕಂಬಳ ಆಯೋಜನೆಗೆ ಸಿದ್ಧತೆ ಮಾಡಿಕೊಳ್ಳಿ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಇದಕ್ಕಾಗಿ ಸುಮಾರು 5 ರಿಂದ 6 ಕೋಟಿ ರೂ. ಅನುದಾನದ ಅಗತ್ಯವಿದ್ದು, ಜುಲೈ 15ರಿಂದಲೇ ನಾವು ಸಿದ್ಧತೆ ಆರಂಭಿಸಲಿದ್ದೇವೆ ಎಂದು ಅಶೋಕ್ ರೈ ಹೇಳಿದ್ದಾರೆ. ರಾಜಮನೆತನಕ್ಕೂ ಹಾಗೂ ಕೋಣಗಳಿಗೂ ಐತಿಹಾಸಿಕ ಸಂಬಂಧವಿದೆ. ಮೈಸೂರಿನಲ್ಲಿ ಕೋಣಗಳನ್ನು ಬಿಟ್ಟು ಹೋಗುತ್ತಾರೆ, ದೊಡ್ಡ ಗುಂಡಿಗಳನ್ನು ತೋಡುತ್ತಾರೆ ಎಂಬಿತ್ಯಾದಿ ಅಪನಂಬಿಕೆಗಳಿದ್ದವು, ಅವುಗಳನ್ನೆಲ್ಲ ಸರಿಪಡಿಸುತ್ತೇವೆ. ಈಗಾಗಲೇ ಜಾಗ ವೀಕ್ಷಣೆ ಮಾಡಲಾಗಿದ್ದು, ಒಂದು ತಿಂಗಳು ಮುಂಚಿತವಾಗಿಯೇ ಕೋಣಗಳನ್ನು ತಂದು ಟ್ರಯಲ್ ರನ್ ಮಾಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ದಸರಾ ಉನ್ನತ ಮಟ್ಟದ ಸಭೆಯಲ್ಲಿ ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕಂಬಳ ಆಯೋಜನೆಗೆ ನೇರ ವಿರೋಧ ವ್ಯಕ್ತಪಡಿಸಿದ್ದಾರೆ. ದಸರಾದಲ್ಲಿ ಕಂಬಳ ಬೇಡ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲೂ ಕೇಳಿಬರುತ್ತಿದೆ. ಕಂಬಳವನ್ನು ಕರಾವಳಿ ಭಾಗವಾದ ಮಂಗಳೂರಿನಲ್ಲೇ ಅತ್ಯಂತ ಅದ್ಧೂರಿಯಾಗಿ ಆಚರಿಸೋಣ ಎಂದು ಅವರು ಸಲಹೆ ನೀಡಿದ್ದಾರೆ.
ನಮ್ಮ ದಸರಾ ಆಚರಣೆಯ ನಡುವೆ ಬೇರೆಯದನ್ನು ಯಾಕೆ ತರುತ್ತೀರಾ?. ರಾಜ್ಯದಲ್ಲಿ ಸವದತ್ತಿ ಎಲ್ಲಮ್ಮನ ಜಾತ್ರೆ, ಕರಾವಳಿಯ ಕಂಬಳ ಹಾಗೂ ಮೈಸೂರು ದಸರಾಗೆ ತನ್ನದೇ ಆದ ವಿಶಿಷ್ಟ ಪರಂಪರೆ ಮತ್ತು ಮಹತ್ವವಿದೆ. ನಮಗೆ ಕಂಬಳದ ಮೇಲೆ ಯಾವುದೇ ವಿರೋಧವಿಲ್ಲ. ಆದರೆ, ದಸರಾದ ಪರಂಪರೆಯೇ ಬೇರೆ. ಅದರ ಸಾಂಪ್ರದಾಯಿಕ ಚೌಕಟ್ಟಿನಲ್ಲೇ ದಸರಾ ನಡೆಯಬೇಕು. ದಸರಾ ಒಳಗೆ ಬೇರೆ ಬೇರೆ ಆಚರಣೆಗಳನ್ನು ಬಲವಂತವಾಗಿ ತುರುಕುವ ಅಗತ್ಯವಿಲ್ಲಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನೂಓದಿ : ಹೆಚ್‌ಡಿಕೆ ಜೊತೆಗೆ ಚರ್ಚೆ, ಉಪ ಚುನಾವಣೆ ಗೆಲುವಿಗೆ ಕಾರ್ಯತಂತ್ರ ಸರ್ಕಾರ ಕಿತ್ತೊಗೆಯಲು ಸಮನ್ವಯದಿಂದ ಕೆಲಸ – ಬಿ.ವೈ.ವಿಜಯೇಂದ್ರ
