August 1, 2026
kranthikidi.com
ತಾಜಾಸುದ್ದಿಸಿನಿಮಾ

ರಾಷ್ಟ್ರ ಪ್ರಶಸ್ತಿ ವಿಜೇತ ನಟ ಮಲಯಾಳಂ ಸಲೀಂ ಕುಮಾರ್ ಇನ್ನಿಲ್ಲ..!

ತಿರುವನಂತಪುರಂ : ಮಲಯಾಳಂ ಚಿತ್ರರಂಗದ ಖ್ಯಾತ ನಟ, ಹಾಸ್ಯ ಕಲಾವಿದ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ಸಲೀಂ ಕುಮಾರ್ ಅವರು ಶನಿವಾರ ರಾತ್ರಿ ನಿಧನರಾಗಿದ್ದಾರೆ. ಅವರಿಗೆ 56 ವರ್ಷ ವಯಸ್ಸಾಗಿತ್ತು. ಸಲೀಂ ಕುಮಾರ್ ಅವರು ಪತ್ನಿ ಸುನಿತಾ ಹಾಗೂ ಪುತ್ರರಾದ ಚಂದು ಮತ್ತು ಆರೋಮಲ್ ಅವರನ್ನು ಅಗಲಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಲಿವರ್ ಸಿರೋಸಿಸ್ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಸಲೀಂ ಕುಮಾರ್, ಕೊಚ್ಚಿಯ ಅಮೃತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇತ್ತೀಚೆಗೆ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿ ಹದಗೆಟ್ಟಿದ್ದರಿಂದ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನೆನ್ನೆ (ಶನಿವಾರ) ರಾತ್ರಿ ಹೃದಯಾಘಾತದಿಂದ ಕೊನೆಯುಸಿರೆಳೆದರು.

1969ರ ಅಕ್ಟೋಬರ್ 10ರಂದು ಕೇರಳದ ನಾರ್ತ್ ಪರವೂರ್‌ನಲ್ಲಿ ಜನಿಸಿದ ಸಲೀಂ ಕುಮಾರ್, ಎರ್ನಾಕುಲಂನ ಮಹಾರಾಜಾಸ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಪೂರ್ಣಗೊಳಿಸಿದ್ದರು. ಮಿಮಿಕ್ರಿ ಕಲಾವಿದರಾಗಿ ತಮ್ಮ ವೃತ್ತಿಜೀವನ ಆರಂಭಿಸಿದ ಅವರು, ನಂತರ ಮಲಯಾಳಂ ಚಿತ್ರರಂಗದಲ್ಲಿ ಹಾಸ್ಯ ನಟನಾಗಿ ಅಪಾರ ಜನಪ್ರಿಯತೆ ಗಳಿಸಿದರು.

ಹಾಸ್ಯ ಪಾತ್ರಗಳ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದ ಅವರು, ಗಂಭೀರ ಪಾತ್ರಗಳಲ್ಲಿಯೂ ಅದ್ಭುತ ಅಭಿನಯ ನೀಡಿ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ್ದರು. 2010ರಲ್ಲಿ ಬಿಡುಗಡೆಯಾದ ‘ಅದಾಮಿಂಟೆ ಮಕನ್ ಅಬು’ ಚಿತ್ರದ ಅಭಿನಯಕ್ಕಾಗಿ ಅವರಿಗೆ ಅತ್ಯುತ್ತಮ ನಟ ವಿಭಾಗದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಲಭಿಸಿತ್ತು. ಇದರ ಜೊತೆಗೆ ‘ಅಚಾನುರಂಗತಾ ವೀಡು’ ಚಿತ್ರದ ಅಭಿನಯಕ್ಕಾಗಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನೂ ಪಡೆದಿದ್ದರು. 2017ರಲ್ಲಿ ಅವರು ನಿರ್ದೇಶಿಸಿದ ‘ಕರುತ ಜೂಥನ್’ ಚಿತ್ರಕ್ಕೆ ಅತ್ಯುತ್ತಮ ಕಥೆ ವಿಭಾಗದ ರಾಜ್ಯ ಪ್ರಶಸ್ತಿ ದೊರೆತಿತ್ತು. ಇದನ್ನೂ ಓದಿ : ಕೆಆರ್‌ಎಸ್‌ನಲ್ಲಿ ನೀರಿನ ಕೊರತೆಯಿಲ್ಲ, ಆತಂಕ ಬೇಡ – ಶಾಸಕ ರಮೇಶ್ ಬಂಡಿಸಿದ್ದೇಗೌಡ

ಸಲೀಂ ಕುಮಾರ್ ಅವರ ಹೆಸರಿನ ಹಿಂದೆಯೂ ಒಂದು ವಿಶೇಷ ಕಥೆಯಿದೆ. ಅವರ ತಂದೆ ಗಂಗಾಧರನ್ ಅವರು ಯಾವುದೇ ಧರ್ಮವನ್ನು ಅನುಸರಿಸದ ನಾಸ್ತಿಕರಾಗಿದ್ದರು. ಎಲ್ಲಾ ಧರ್ಮಗಳಿಗೂ ಸಮಾನ ಗೌರವ ನೀಡುವ ಉದ್ದೇಶದಿಂದ ಹಿಂದೂ ಮತ್ತು ಮುಸ್ಲಿಂ ಸಂಸ್ಕೃತಿಗಳ ಸಮ್ಮಿಶ್ರಣವಾಗಿ ‘ಸಲೀಂ ಕುಮಾರ್’ ಎಂದು ಹೆಸರಿಟ್ಟಿದ್ದರು.

ತಮ್ಮ ವಿಶಿಷ್ಟ ಹಾಸ್ಯ ಶೈಲಿ, ಸಹಜ ಅಭಿನಯ ಮತ್ತು ಭಾವನಾತ್ಮಕ ಪಾತ್ರಗಳ ಮೂಲಕ ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ಅಚ್ಚಳಿಯದ ಗುರುತು ಮೂಡಿಸಿದ್ದ ಸಲೀಂ ಕುಮಾರ್ ಅವರ ನಿಧನವು ಭಾರತೀಯ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ.

Related posts

ಆರ್‌ಎಸ್‌ಎಸ್‌ ವಿರುದ್ಧ ಬಿ.ಕೆ ಹರಿಪ್ರಸಾದ್ ಕಿಡಿ; ನಾವು ಯಾವತ್ತು ಒಪ್ಪಿಕೊಳ್ಳುವುದಿಲ್ಲ..!

Kalpana Editor

ಸಮಾವೇಶದಿಂದ ನೀಟ್‌ ಪರೀಕ್ಷೆಯ ವಿದ್ಯಾರ್ಥಿಗಳಿಗೆ ತೊಂದರೆ; ಬಿಜೆಪಿ ವಿರುದ್ಧ ಬಿಕೆಹೆಚ್‌ ವಾಗ್ದಾಳಿ..!

Kalpana Editor

NCERT ಹೊಸ ಪಠ್ಯದಲ್ಲಿ ಮೊದಲ ಬಾರಿಗೆ SIR ಸೇರ್ಪಡೆ..!

Kalpana Editor