25.3 C
ಬೆಂಗಳೂರು
September 20, 2026
kranthikidi.com
ತಾಜಾಸುದ್ದಿರಾಜ್ಯ

ಭೂ ಪರಿಹಾರ ನೀಡದ್ದಕ್ಕೆ, ಆಕ್ರೋಶ; ಬಿಟಿಡಿಎ ಸಿಬ್ಬಂದಿಗೆ ಚಪ್ಪಲಿಯಿಂದ ಹೊಡೆದ ರೈತ..!

ಬಾಗಲಕೋಟೆ : ಮುಳುಗಡೆ ಭೂಮಿಗೆ ಕಳೆದ ನಾಲ್ಕು ವರ್ಷಗಳಿಂದ ಸೂಕ್ತ ಪರಿಹಾರ ಸಿಗದೆ ಬೇಸತ್ತ ರೈತರೊಬ್ಬರು ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ಕಚೇರಿಯಲ್ಲೇ ನೌಕರನೊಬ್ಬನಿಗೆ ಚಪ್ಪಲಿಯಿಂದ ಹೊಡೆದು ಹಲ್ಲೆ ನಡೆಸಿರುವ ಘಟನೆ ನವನಗರದಲ್ಲಿ ನಡೆದಿದೆ. ಸಫಾಯಿ ಕರ್ಮಚಾರಿಗಳಿಗೆ ಪ್ಲಾಟ್ ಹಂಚಿಕೆ ಮಾಡದ ಹಿನ್ನೆಲೆಯಲ್ಲಿ ಡಿಎಸ್ಎಸ್ (ದಲಿತ ಸಂಘರ್ಷ ಸಮಿತಿ) ಮುಖಂಡರು ಬಿಟಿಡಿಎ ಕಚೇರಿಗೆ ಮುತ್ತಿಗೆ ಹಾಕಿದ್ದ ಸಂದರ್ಭದಲ್ಲೇ ಈ ಹೈಡ್ರಾಮಾ ನಡೆದಿದೆ.

ಕಳೆದ ಒಂದು ವರ್ಷದಿಂದ 15 ಜನ ಸಫಾಯಿ ಕರ್ಮಚಾರಿಗಳಿಗೆ ಸೈಟ್ ಮಂಜೂರು ಮಾಡಿಲ್ಲ ಎಂದು ಆಗ್ರಹಿಸಿ ಡಿಎಸ್‌ಎಸ್‌ ಹೋರಾಟಗಾರರು ಬಿಟಿಡಿಎ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುತ್ತಿದ್ದರು. ಈ ಮುತ್ತಿಗೆಯ ವೇಳೆ ಕಚೇರಿಗೆ ಆಗಮಿಸಿದ ರೈತ ಬಸಪ್ಪ ದೊಡಮನಿ ಎಂಬುವವರು ಡಿಎಸ್‌ಎಸ್‌ ಮುಖಂಡರ ಎದುರೇ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ನನ್ನ ಭೂಮಿ ಮುಳುಗಡೆಯಾಗಿ ನಾಲ್ಕು ವರ್ಷಗಳೇ ಕಳೆದರೂ ಬಿಟಿಡಿಎ ಅಧಿಕಾರಿಗಳು ಇನ್ನುವರೆಗೆ ನನಗೆ ಭೂ ಪರಿಹಾರ ನೀಡಿಲ್ಲ. ಪರಿಹಾರಕ್ಕಾಗಿ ಕಚೇರಿಗೆ ಅಲೆದು ಅಲೆದು ಸುಸ್ತಾಗಿದೆ ಎಂದು ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈತ ಬಸಪ್ಪ ದೊಡಮನಿ ಆಕ್ರೋಶ ಹೊರಹಾಕುತ್ತಿದ್ದಂತೆ, ಅಲ್ಲಿಯೇ ಇದ್ದ ಬಿಟಿಡಿಎ ಹಿರಿಯ ಸಹಾಯಕ ಹಾಗೂ ಟೈಪಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿರುವ ನೀಲಕಂಠ ಅಂಕದ್ ಮತ್ತು ರೈತನ ಮಧ್ಯೆ ತೀವ್ರ ವಾಗ್ವಾದ ಏರ್ಪಟ್ಟಿದೆ.

ಮಾತು ಬೆಳೆಯುತ್ತಿದ್ದಂತೆ ತೀವ್ರ ಕೋಪಗೊಂಡ ರೈತ ಬಸಪ್ಪ, ತಕ್ಷಣವೇ ತಮ್ಮ ಕಾಲಲ್ಲಿದ್ದ ಚಪ್ಪಲಿಯನ್ನು ತೆಗೆದುಕೊಂಡು ಟೈಪಿಸ್ಟ್ ನೀಲಕಂಠ ಅವರಿಗೆ ಎಲ್ಲರ ಎದುರೇ ಹೊಡೆದು ಆಕ್ರೋಶ ತೀರಿಸಿಕೊಂಡಿದ್ದಾರೆ. ಸಾರ್ವಜನಿಕ ಕಚೇರಿಯಲ್ಲೇ ಸರ್ಕಾರಿ ನೌಕರನ ಮೇಲೆ ರೈತ ಚಪ್ಪಲಿಯಿಂದ ಹೊಡೆದ ಬೆನ್ನಲ್ಲೇ ಬಿಟಿಡಿಎ ಕಚೇರಿಯಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಪ್ರಸ್ತುತ ಈ ಘಟನೆಗೆ ಸಂಬಂಧಿಸಿದಂತೆ ನವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ : ಪ್ರವಾಸಿಗರಿಗೆ ಎಚ್ಚರಿಕೆ; ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಹುಲಿ ಓಡಾಟ..!

Related posts

ಧಾರವಾಡದ ಖಾಸಗಿ ಶಾಲೆಯ ಮಕ್ಕಳಿಗೆ ವಿಚಿತ್ರ ಜ್ವರ…!

Kalpana Editor

ಕರ್ನಾಟಕ-ತಮಿಳುನಾಡು ಭಾರತ-ಪಾಕಿಸ್ತಾನವಲ್ಲ – ಮಾಣಿಕಂ ಟ್ಯಾಗೋರ್

Kalpana Editor

ಭಾರತದ ಮಾವಿನ ಹಣ್ಣುಗಳಿಗೆ ಜಪಾನ್ ಸರ್ಕಾರ ತಾತ್ಕಾಲಿಕ ಬ್ರೇಕ್..!

Kalpana Editor