20.9 C
ಬೆಂಗಳೂರು
September 21, 2026
kranthikidi.com
ತಾಜಾಸುದ್ದಿರಾಜ್ಯ

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ; NIA ಮೋಸ್ಟ್ ವಾಂಟೆಡ್‌ ಆರೋಪಿ ಅರೆಸ್ಟ್‌..!

ಮಂಗಳೂರು : ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ, ಎನ್‌ಐಎ ಮೋಸ್ಟ್ ವಾಂಟೆಡ್‌ ಆರೋಪಿ ಉಮ್ಮರ್ ಫಾರೂಕ್ ಎಂ.ಆರ್.ನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಕೇರಳದ ಕೊಚ್ಚಿಯಲ್ಲಿ ಬಂಧಿಸಿದೆ. ಈ ಮೂಲಕ ಪ್ರಕರಣದಲ್ಲಿ ಎನ್‌ಐಎ ಬಂಧಿಸಿರುವ ಆರೋಪಿಗಳ ಸಂಖ್ಯೆ 25ಕ್ಕೆ ಏರಿಕೆಯಾಗಿದೆ. ಉಮ್ಮರ್ ಫಾರೂಕ್ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಹಾಗೂ ಜಾಮೀನು ರಹಿತ ಬಂಧನ ವಾರಂಟ್ ಜಾರಿಯಾಗಿತ್ತು. ಆತನ ಬಂಧನಕ್ಕೆ 4 ಲಕ್ಷ ರೂ. ಬಹುಮಾನವನ್ನೂ ಘೋಷಿಸಲಾಗಿತ್ತು.

ಎನ್‌ಐಎ ತನಿಖೆ ಪ್ರಕಾರ, ಉಮ್ಮರ್ ಫಾರೂಕ್ ಪಿಎಫ್‌ಐ ಕಚೇರಿಯಲ್ಲಿ ನಡೆದ ಸಂಚು ಸಭೆಯಲ್ಲಿ ಭಾಗಿಯಾಗಿದ್ದ ಆರೋಪ ಎದುರಿಸುತ್ತಿದ್ದ. ಪ್ರವೀಣ್ ನೆಟ್ಟಾರು ಹತ್ಯೆಗೂ ಮುನ್ನ ಆರೋಪಿಗೆ ಬೈಕ್ ನೀಡಿದ್ದ ಆರೋಪವೂ ಆತನ ಮೇಲಿತ್ತು. ಬಳಿಕ ಸಾಕ್ಷಿದಾರನ ಹತ್ಯೆಗೆ ಯತ್ನಿಸಿದ ಪ್ರಕರಣದಲ್ಲೂ ಭಾಗಿಯಾಗಿದ್ದ ಆರೋಪ ಇತ್ತು.

ಹತ್ಯೆಯ ಬಳಿಕ ಪ್ರಮುಖ ಆರೋಪಿಗಳಿಗೆ ತಪ್ಪಿಸಿಕೊಳ್ಳಲು ಉಮ್ಮರ್ ಫಾರೂಕ್ ಸಹಾಯ ಮಾಡಿದ್ದ ಎನ್ನಲಾಗಿದ್ದು, ನಂತರ ಕೇರಳದ ಕೊಚ್ಚಿಯಲ್ಲೇ ಅಡಗಿಕೊಂಡಿದ್ದ. ನಿಷೇಧಿತ ಪಿಎಫ್‌ಐ ಸಂಘಟನೆಯ ಪ್ರಮುಖರು ಆತನಿಗೆ ಕೊಚ್ಚಿಯಲ್ಲಿ ಆಶ್ರಯ ನೀಡಿದ್ದರು ಎನ್ನಲಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಹೊರಗಿನ ಪ್ರಪಂಚಕ್ಕೆ ಕಾಣಿಸಿಕೊಳ್ಳದಂತೆ ಆತನನ್ನು ಅಜ್ಞಾತ ಸ್ಥಳದಲ್ಲಿ ಇರಿಸಲಾಗಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ. ಪ್ರವೀಣ್ ನೆಟ್ಟಾರು ಹತ್ಯೆಯ ಬಳಿಕ ಉಮ್ಮರ್ ಕೊಚ್ಚಿಯಲ್ಲೇ ವಾಸ್ತವ್ಯ ಹೂಡಿದ್ದ ಎನ್ನಲಾಗಿದೆ.

ಕಳೆದ ಜುಲೈ 11ರಂದು ನೌಷಾದ್ ಮತ್ತು ನಸೀರ್ ಎಂಬ ಆರೋಪಿಗಳನ್ನು ಎನ್‌ಐಎ ಬಂಧಿಸಿತ್ತು. ಈ ವೇಳೆ ಕೊಚ್ಚಿಯಲ್ಲಿರುವ ಅಜ್ಞಾತ ಸ್ಥಳದ ಕುರಿತು ಅವರು ಮಾಹಿತಿ ನೀಡಿದ್ದರು ಎನ್ನಲಾಗಿದ್ದು, ಅದರ ಆಧಾರದ ಮೇಲೆ ಎನ್‌ಐಎ ಕಾರ್ಯಾಚರಣೆ ನಡೆಸಿ ಉಮ್ಮರ್ ಫಾರೂಕ್‌ನನ್ನು ಬಂಧಿಸಿದೆ. ಈ ಪ್ರಕರಣದಲ್ಲಿ ಇನ್ನೂ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರನ್ನು ಪತ್ತೆಹಚ್ಚಲು ಎನ್‌ಐಎ ಶೋಧ ಕಾರ್ಯ ಮುಂದುವರಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರಾಗಿದ್ದ ಪ್ರವೀಣ್ ನೆಟ್ಟಾರು (32) ಅವರನ್ನು 2022ರ ಜುಲೈ 26ರಂದು ರಾತ್ರಿ ತಮ್ಮ ಅಂಗಡಿ ಮುಚ್ಚಿ ಮನೆಗೆ ತೆರಳುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಭೀಕರವಾಗಿ ಹತ್ಯೆ ಮಾಡಿದ್ದರು. ಘಟನೆಯ ಬಳಿಕ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ 2022ರ ಆಗಸ್ಟ್‌ನಲ್ಲಿ ಕೇಂದ್ರ ಗೃಹ ಸಚಿವಾಲಯವು ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ಹಸ್ತಾಂತರಿಸಿತ್ತು.

ಎನ್‌ಐಎ ಸಲ್ಲಿಸಿರುವ ದೋಷಾರೋಪಣಾ ಪಟ್ಟಿಯ ಪ್ರಕಾರ, ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ನಾಯಕರು ಹಾಗೂ ಅದರ ‘ಸರ್ವಿಸ್ ಟೀಮ್’ ಸದಸ್ಯರು ಸಮಾಜದಲ್ಲಿ ಭಯ ಹುಟ್ಟಿಸುವ ಉದ್ದೇಶದಿಂದ ಹತ್ಯೆಗೆ ಸಂಚು ರೂಪಿಸಿದ್ದರು ಎಂದು ಆರೋಪಿಸಲಾಗಿದೆ. ಪ್ರಕರಣದಲ್ಲಿ ಎನ್‌ಐಎ ಹಲವು ಹಂತಗಳಲ್ಲಿ ಚಾರ್ಜ್‌ಶೀಟ್ ಸಲ್ಲಿಸಿದ್ದು, ಹತ್ಯೆಯಲ್ಲಿ ನೇರವಾಗಿ ಶಾಮೀಲಾದವರು ಹಾಗೂ ಆರೋಪಿಗಳಿಗೆ ಆಶ್ರಯ ನೀಡಿದವರು ಸೇರಿದಂತೆ 20ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಗಳ ಪತ್ತೆ ಕಾರ್ಯವೂ ಮುಂದುವರಿದಿದೆ. ಇದನ್ನೂ ಓದಿ : ಪುತ್ತೂರು ಮಹಾಲಿಂಗೇಶ್ವರ ಸನ್ನಿಧಿಯಲ್ಲಿ ಮತ್ತೆ ತೀವ್ರ ವಿವಾದ..!

Related posts

ಭಕ್ತರಿಗೆ ಗುಡ್‌ನ್ಯೂಸ್ – 4,450 ರೂ.ಗೆ ವಿಶೇಷ ಪ್ರವಾಸ ಪ್ಯಾಕೇಜ್‌..!

Kalpana Editor

ಬೈಕ್ ಟ್ಯಾಕ್ಸಿ ವಿರುದ್ಧ RTO ಬಿಗ್ ಆಪರೇಷನ್ – ವಾಹನಗಳು ಸೀಜ್..!

kknewskannada1987@gmail.com

ಅವತ್ತು ಕಾರ್ ಕಾರ್.. ಇವತ್ತು ರನ್ ರನ್ : ಅಮೆರಿಕಾ ಅಮೆರಿಕಾ 2 ಸಾಂಗ್

kknewskannada1987@gmail.com