kranthikidi.com
Uncategorized

“26 ದಿನ ಉಪವಾಸ ಮಾಡಿದ್ದಕ್ಕೆ ಚಾರಿತ್ರ್ಯ ಪ್ರಮಾಣಪತ್ರ ಬೇಕೇ?” — ಟೀಕಾಕಾರರಿಗೆ ಸೋನಂ ವಾಂಗ್ಚುಕ್ ತಿರುಗೇಟು!

ನವದೆಹಲಿ: 26 ದಿನಗಳ ಉಪವಾಸ ಸತ್ಯವೆಂದು ಸಾಬೀತುಪಡಿಸಲು ನನಗೆ ಚಾರಿತ್ರ್ಯ ಪ್ರಮಾಣಪತ್ರ ಬೇಕೇ? ಎಂದು ಹೋರಾಟಗಾರ ಸೋನಂ ವಾಂಗ್ಚುಕ್ ಅವರು ಶುಕ್ರವಾರ ಪ್ರಶ್ನೆ ಮಾಡಿದ್ದಾರೆ.

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ವಿರುದ್ಧ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿ ನಡೆಸಿದ್ದ ತಮ್ಮ 26 ದಿನಗಳ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದ ಬಳಿಕ ಸರ್ಕಾರದೊಂದಿಗೆ ರಹಸ್ಯ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಆರೋಪಗಳಿಗೆ ಸೋನಂ ವಾಂಗ್ಚುಕ್ ಅವರು ತಿರುಗೇಟು ನೀಡಿದ್ದಾರೆ.

ಈ ಕುರಿತು ಎಕ್ಸ್ (X) ನಲ್ಲಿ ಹಂಚಿಕೊಂಡಿರುವ ವಿಡಿಯೊ ಸಂದೇಶದಲ್ಲಿ, ಸರ್ಕಾರದೊಂದಿಗೆ ಯಾವುದೇ ರೀತಿಯ ಒಪ್ಪಂದ ಮಾಡಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ, ತಮ್ಮ ಪ್ರತಿಭಟನೆಯ ಪ್ರಾಮಾಣಿಕತೆಯನ್ನು ತಾವು ಸಾಬೀತುಪಡಿಸಬೇಕಾದ ಪರಿಸ್ಥಿತಿ ಏಕೆ ಬರಬೇಕು ಎಂದು ಪ್ರಶ್ನಿಸಿದ್ದಾರೆ.

26 ದಿನಗಳ ಉಪವಾಸದ ಬಳಿಕವೂ ನನ್ನ ಪ್ರಾಮಾಣಿಕತೆಯನ್ನು ನಾನು ಸಾಬೀತುಪಡಿಸಬೇಕೇ?” ಎಂದು ಬರೆದು, ಹೆಚ್ಚಿನ ವಿವರಗಳಿಗಾಗಿ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿರುವ 22 ನಿಮಿಷಗಳ ಸಂಪೂರ್ಣ ವಿಡಿಯೊವನ್ನು ವೀಕ್ಷಿಸುವಂತೆ ಮನವಿ ಮಾಡಿದ್ದಾರೆ.

ಇದೇ ವೇಳೆ ಉಪವಾಸವನ್ನು ಅಂತ್ಯಗೊಳಿಸಿದ ತಕ್ಷಣ ರಾಜಕೀಯ ಒತ್ತಡ ಅಥವಾ ಸರ್ಕಾರದೊಂದಿಗೆ ರಹಸ್ಯ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಊಹಾಪೋಹಗಳು ಏಕೆ ಹುಟ್ಟಿತು ಎಂದು ಪ್ರಶ್ನಿಸಿದ್ದಾರೆ.

ಇಂದು ಬೆಳಗ್ಗೆಯಿಂದ ಅನೇಕರು ಕರೆ ಮಾಡಿ, ನಿಮ್ಮ ವಿರುದ್ಧ ಹಲವು ಪ್ರಶ್ನೆಗಳು ಕೇಳಲಾಗುತ್ತಿದೆ ಎಂದು ಹೇಳುತ್ತಿದ್ದಾರೆ. ನೀವು ಯಾಕೆ ಕೇಂದ್ರ ಸಚಿವರ ಮೂಲಕವೇ ಉಪವಾಸ ಅಂತ್ಯಗೊಳಿಸಿದಿರಿ? ಬೇರೆ ಯಾರ ಮೂಲಕ ಮಾಡಬಹುದಿತ್ತಲ್ಲ? ಯಾವ ಒಪ್ಪಂದ ನಡೆದಿದೆ? ಯಾವ ರೀತಿಯ ವ್ಯವಹಾರ ನಡೆದಿದೆ ಎಂದು ಕೇಳುತ್ತಿದ್ದಾರೆ.

ನನ್ನ ಉಪವಾಸ ನಿಜವಾಗಿಯೂ ಪ್ರಾಮಾಣಿಕವಾಗಿತ್ತು ಎಂದು ಸಾಬೀತುಪಡಿಸಲು ನನಗೆ ಚಾರಿತ್ರ್ಯ ಪ್ರಮಾಣಪತ್ರ ಬೇಕೇ? ಒಪ್ಪಂದವೇ ಮಾಡಬೇಕಿದ್ದರೆ, ಅದಕ್ಕಾಗಿ 26 ದಿನ ಉಪವಾಸ ಮಾಡುವ ಅಗತ್ಯವೇನಿತ್ತು? ಅನೇಕರು ಹೇಗೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬುದನ್ನು ನೀವು ನೋಡಿದ್ದೀರಿ. ಒಪ್ಪಂದ ಮಾಡಬೇಕಿದ್ದರೆ, ದೆಹಲಿಯ ಬಿಸಿಲಿನಲ್ಲಿ ರಸ್ತೆ ಬದಿಯಲ್ಲಿ ಕುಳಿತುಕೊಳ್ಳುವುದಕ್ಕಿಂತ, ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತುಕೊಂಡೇ ಮಾಡಬಹುದಿತ್ತಲ್ಲ?” ಎಂದು ಪ್ರಶ್ನಿಸಿದ್ದಾರೆ.

ಇದಕ್ಕೂ ಮುನ್ನ ಶುಕ್ರವಾರ ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್, ಸೋನಂ ವಾಂಗ್ಚುಕ್ ಉಪವಾಸ ಅಂತ್ಯಗೊಳಿಸಿದ ಕ್ರಮವನ್ನು ಟೀಕಿಸಿದ್ದರು.

ಅವರನ್ನು “ಅಣ್ಣಾ ಹಜಾರೆ ಭಾಗ–2” ಎಂದು ಕರೆದ ಮಸೂದ್, ಸರ್ಕಾರದೊಂದಿಗೆ ವೈಯಕ್ತಿಕ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದರು.

“ಇವರು ಅಣ್ಣಾ ಹಜಾರೆ ಭಾಗ–2. ಅಣ್ಣಾ ಕಳೆದ 12 ವರ್ಷಗಳಿಂದ ಮೌನವಾಗಿದ್ದಾರೆ. ಈಗ ಸೋನಂ ವಾಂಗ್ಚುಕ್ ಕೂಡ ಮೌನವಾಗಲಿದ್ದಾರೆ. ನೀವು ನಿನ್ನೆ ಸರ್ಕಾರದೊಂದಿಗೆ ಮಾತುಕತೆ ನಡೆಸಿದ್ದೀರಿ. ಆ ಸಭೆಯಲ್ಲಿ ವಿದ್ಯಾರ್ಥಿಗಳು ಇದ್ದರೇ? ವಿದ್ಯಾರ್ಥಿಗಳಿಲ್ಲದೆ ನಡೆದ ಆ ಮಾತುಕತೆ ವೈಯಕ್ತಿಕ ಒಪ್ಪಂದವಲ್ಲದೆ ಮತ್ತೇನು?” ಎಂದು ಪ್ರಶ್ನಿಸಿದ್ದಾರೆ.

ಇದೇ ವೇಳೆ, ಸರ್ಕಾರದೊಂದಿಗೆ ನಡೆದ ಸಭೆಯಲ್ಲಿ ವಿದ್ಯಾರ್ಥಿ ಪ್ರತಿನಿಧಿಗಳು ಭಾಗವಹಿಸದೇ, ಲಡಾಖ್‌ನ ಕೆಲ ಪ್ರತಿನಿಧಿಗಳು ಮಾತ್ರ ಇದ್ದರು ಎಂದು ಹೇಳಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Related posts

NEET ಹೋರಾಟ: CJP ಪ್ರತಿಭಟನೆಯ 2 ಬೇಡಿಕೆಗಳಿಗೆ ಸರ್ಕಾರ ಗ್ರೀನ್ ಸಿಗ್ನಲ್! ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಇಲ್ಲ?

Kalpana Editor