ಮಂಡ್ಯ: “ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಿಎಂ ಆಗುವ ತಮ್ಮ ಆಸೆಯನ್ನೇನೋ ಪೂರೈಸಿಕೊಂಡಿದ್ದಾರೆ. ಆದರೆ, ಅವರ ಮುಂದಿನ ಹಾದಿ ಸುಲಭವಾಗಿಲ್ಲ. ಒಳಗೆ ಆಂತರಿಕ ಭಿನ್ನಮತ, ಹೊರಗೆ ಆಡಳಿತಾತ್ಮಕ ಬಿಕ್ಕಟ್ಟುಗಳಿವೆ. ಸಿಎಂ ಆದ ತಕ್ಷಣ ಆಡಳಿತವನ್ನು ಎಂಜಾಯ್ ಮಾಡಲು ಡಿ.ಕೆ. ಶಿವಕುಮಾರ್ ಅವರಿಗೆ ಯಾವುದೇ ಹನಿಮೂನ್ ಪಿರಿಯಡ್ ಸಿಗುತ್ತಿಲ್ಲ” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭವಿಷ್ಯ ನುಡಿದಿದ್ದಾರೆ.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡೆ ಹಾಗೂ ಕಾಂಗ್ರೆಸ್ ಸರ್ಕಾರದ ಆರ್ಥಿಕ ಪರಿಸ್ಥಿತಿಯ ಕುರಿತು ತೀವ್ರ ವಾಗ್ದಾಳಿ ನಡೆಸಿದರು.
‘ಇದು ಡಿಕೆಶಿ ಸರ್ಕಾರವಲ್ಲ, ಸಿದ್ದರಾಮಯ್ಯ ಕ್ಯಾಬಿನೆಟ್!’
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಜಯೇಂದ್ರ, “ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವುದು ಎಷ್ಟು ಸತ್ಯವೋ, ಅವರ ಮಂತ್ರಿ ಮಂಡಲವನ್ನು ನೋಡಿದಾಗ ಅದು ಈಗಲೂ ‘ಸಿದ್ದರಾಮಯ್ಯ ಕ್ಯಾಬಿನೆಟ್’ ಅನ್ನೋದು ಕೂಡ ಅಷ್ಟೇ ಸತ್ಯ. ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ತಾವು ಕುರ್ಚಿಯಿಂದ ಇಳಿಯುವ ಮುನ್ನವೇ ಡಿ.ಕೆ.ಶಿವಕುಮಾರ್ ಅವರತ್ತ ದೊಡ್ಡ ‘ಗೂಗ್ಲಿ’ ಎಸೆದು ಹೋಗಿದ್ದಾರೆ” ಎಂದು ಲೇವಡಿ ಮಾಡಿದರು.
ಜಾತಿಸೀಕ್ಷೆ ವರದಿ ಎಂಬ ದೊಡ್ಡ ಸವಾಲು!
“ಹಿಂದುಳಿದ ವರ್ಗಗಳ (ಜಾತಿ ಜನಗಣತಿ) ವರದಿಯನ್ನು ತರಾತುರಿಯಲ್ಲಿ ಸ್ವೀಕಾರ ಮಾಡಿರುವ ಸಿದ್ದರಾಮಯ್ಯ, ಮುಂದಿನ ಸಿಎಂ ಈ ವರದಿಯನ್ನು ಇಟ್ಟುಕೊಂಡು ಏನು ಮಾಡುತ್ತಾರೆ ಎನ್ನುವ ಅಸ್ತ್ರವನ್ನು ಡಿ.ಕೆ.ಶಿವಕುಮಾರ್ ಮುಂದೆ ಬಿಟ್ಟಿದ್ದಾರೆ. ಇದರ ಜೊತೆಗೆ ಮುಂದಿನ 2 ವರ್ಷಗಳ ಕಾಲ ಪಕ್ಷದ ಒಳಗಿನ ಭಿನ್ನಮತವನ್ನು ಸರಿದೂಗಿಸಿ, ಎಲ್ಲರನ್ನೂ ಸಂಭಾಳಿಸಿಕೊಂಡು ಹೋಗುವುದೇ ಹೊಸ ಸಿಎಂಗೆ ಇರುವ ಅತ್ಯಂತ ದೊಡ್ಡ ಸವಾಲಾಗಿದೆ” ಎಂದರು.
ರಾಜ್ಯದ ಅಭಿವೃದ್ಧಿ ಶೂನ್ಯ, ಗ್ಯಾರಂಟಿ ಆರ್ಥಿಕತೆಗೆ ಹೊರೆ!
ರಾಜ್ಯ ಸರ್ಕಾರದ ಆಡಳಿತ ವೈಖರಿಯನ್ನು ಟೀಕಿಸಿದ ಅವರು, “ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಯಾವುದೇ ಮಹತ್ವದ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಇಡೀ ಸರ್ಕಾರ ಕೇವಲ ಅಲ್ಪಸಂಖ್ಯಾತರ ತುಷ್ಟೀಕರಣದ ಮೇಲೆ ಕೇಂದ್ರೀಕರಿಸಿದೆ. ಮುಂದಿನ ಎರಡು ವರ್ಷಗಳಲ್ಲಿ ಗ್ಯಾರಂಟಿ ಯೋಜನೆಗಳನ್ನು ನಿಭಾಯಿಸುತ್ತಾ, ಹದಗೆಟ್ಟಿರುವ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಡಿಕೆಶಿ ಹೇಗೆ ನಿರ್ವಹಿಸುತ್ತಾರೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ನಾವು ಸಮರ್ಥ ವಿರೋಧ ಪಕ್ಷವಾಗಿ ಸರ್ಕಾರದ ವೈಫಲ್ಯಗಳನ್ನು ಜನರ ಮುಂದೆ ಬಿಚ್ಚಿಡುತ್ತೇವೆ” ಎಂದು ಎಚ್ಚರಿಸಿದರು.
ರಾಜ್ಯಸಭೆ ಟಿಕೆಟ್ ಹೈಕಮಾಂಡ್ ಹೆಗಲಿಗೆ!
ಇದೇ ವೇಳೆ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರಿಗೆ ಅಥವಾ ಸುಮಲತಾ ಅಂಬರೀಶ್ ಅವರಿಗೆ ರಾಜ್ಯಸಭೆ ಟಿಕೆಟ್ ನೀಡುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, “ಅಂತಹ ಯಾವುದೇ ಪ್ರಸ್ತಾಪ ಸದ್ಯ ನಮ್ಮ ಮುಂದೆ ಇಲ್ಲ. ಈ ಬಗ್ಗೆ ನಮ್ಮ ಪಕ್ಷದ ಹೈಕಮಾಂಡ್ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತದೆ. ಒಬ್ಬ ರಾಜ್ಯ ಅಧ್ಯಕ್ಷನಾಗಿ ನನ್ನ ಸಂಪೂರ್ಣ ಗಮನ ಈಗ ಸಂಘಟನೆಯನ್ನು ಬಲಪಡಿಸುವುದು ಮತ್ತು ಕರ್ನಾಟಕದಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವುದರ ಮೇಲಷ್ಟೇ ಇದೆ” ಎಂದು ಸ್ಪಷ್ಟಪಡಿಸಿದರು.
