ಬೆಂಗಳೂರು : ಗುಟ್ಕಾ ನಿಷೇಧ ಆದೇಶವನ್ನು ರಾಜ್ಯ ಸರ್ಕಾರ ವಾಪಸ್ ಪಡೆಯುವ ಸಾಧ್ಯತೆಯಿದೆ. ಆಡಳಿತರೂಢ ಕಾಂಗ್ರೆಸ್ ಶಾಸಕರಿಂದಲೇ ಸರ್ಕಾರದ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತವಾದ ಬೆನ್ನಲ್ಲೇ ಗುಟ್ಕಾ ನಿಷೇಧ ಆದೇಶ ವಾಪಸ್ ಪಡೆಯಲು ಸರ್ಕಾರ ಮುಂದಾಗಿದೆ. ಅಡಿಕೆ ಬೆಳೆಗಾರರ ಹಿತದೃಷ್ಟಿಯಿಂದ ಸರ್ಕಾರದ ಆದೇಶ ಮರುಪರಿಶೀಲಿಸುವಂತೆ ಶಾಸಕರು ಒತ್ತಾಯಿಸಿದ್ದು, ಈ ಹಿನ್ನೆಲೆಯಲ್ಲಿ ಗುಟ್ಕಾ ನಿಷೇಧಕ್ಕೆ ಸಂಬಂಧಿಸಿದ ಆದೇಶ ಶೀಘ್ರದಲ್ಲೇ ವಾಪಸ್ ಪಡೆಯುವ ಸಾಧ್ಯತೆ ಇದೆ.
ಗುಟ್ಕಾ ನಿಷೇಧದಿಂದ ಅಡಿಕೆ ಬೆಳೆಗಾರರಿಗೆ ಭಾರೀ ಹೊಡೆತ ಬೀಳಲಿದೆ ಎಂದು ಹಲವು ಶಾಸಕರು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಮನವಿ ಮಾಡಿದ್ದಾರೆ. ಏಳೆಂಟು ಜಿಲ್ಲೆಗಳ ಅಡಿಕೆ ಬೆಳೆಗಾರರ ಮೇಲೆ ನಿಷೇಧದ ಆದೇಶ ಪರಿಣಾಮ ಬೀರಲಿದೆ. ಹೀಗಾಗಿ ಗುಟ್ಕಾ ನಿಷೇಧಕ್ಕೆ ಸಂಬಂಧಿಸಿದ ಆದೇಶವನ್ನ ಕೂಡಲೇ ಹಿಂಪಡೆಯುವಂತೆ ಶಾಸಕರು ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ. ಶಾಸಕರ ಮನವಿ ಪರಿಗಣಿಸಿರುವ ಸಿಎಂ ಡಿಕೆಶಿ, ಆದೇಶವನ್ನು ವಾಪಸ್ ಪಡೆಯುವಂತೆ ಆರೋಗ್ಯ ಇಲಾಖೆಗೆ ಸೂಚನೆ ನೀಡಿದ್ದಾರೆ.
ಈ ಸಂಬಂಧ ಶಾಸಕ ಶಿವಗಂಗ ಬಸವರಾಜ್ ಮಾತನಾಡಿ, ಗುಟ್ಕಾ ಬ್ಯಾನ್ ವಿಚಾರ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ನಿನ್ನೆ ಮುಖ್ಯಮಂತ್ರಿಗಳನ್ನ ಭೇಟಿ ಮಾಡಿ ಮನವಿ ಮಾಡಿದ್ದೆವು. ಆಹಾರ ಸುರಕ್ಷತಾ ಆಯುಕ್ತರ ಆದೇಶದಿಂದ ಈ ಗೊಂದಲ ಉಂಟಾಗಿದೆ. ಗುಟ್ಕಾ ನಿಷೇಧ ರಾಜ್ಯದಲ್ಲಿ ಹಲವು ವರ್ಷಗಳಿಂದಲೇ ಜಾರಿಯಲ್ಲಿದೆ. ಆದರೆ ಅಡಿಕೆಯೊಂದಿಗೆ ತಂಬಾಕು ಅಥವಾ ನಿಕೋಟಿನ್ ಸೇರಿಸಿ ಪ್ಯಾಕ್ ಮಾಡಿ ಮಾರಾಟ ಮಾಡಿದರೆ ಅದು ನಿಷೇಧಕ್ಕೆ ಒಳಪಡುತ್ತದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಅಡಿಕೆಯನ್ನು ಪ್ರತ್ಯೇಕವಾಗಿ ಪ್ಯಾಕ್ ಮಾಡಿ ಮಾರಾಟ ಮಾಡುವುದಕ್ಕೆ ನಿಷೇಧವಿಲ್ಲ ಎಂದು ಶಾಸಕ ಬಸವರಾಜ್ ಶಿವಗಂಗ ಸ್ಪಷ್ಟಪಡಿಸಿದ್ದಾರೆ. ಅಡಿಕೆ ದರದಲ್ಲೂ ಸ್ವಲ್ಪ ವ್ಯತ್ಯಾಸ ಕಂಡುಬಂದಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ : ಕೇಂದ್ರ ಆರೋಗ್ಯ ಸಚಿವ ಜೆ.ಪಿ ನಡ್ಡಾ ಆಸ್ಪತ್ರೆಗೆ ದಾಖಲು..!
