ಬೆಂಗಳೂರು : ಪ್ರತಿಯೊಬ್ಬ ವ್ಯಕ್ತಿಗೂ ಹೊಸ ಆಲೋಚನೆಗಳಿರುತ್ತವೆ. ಹೊಸ ಆಲೋಚನೆ, ಭರವಸೆ, ನಂಬಿಕೆ ಮೂಲಕ ಜನರ ವಿಶ್ವಾಸ ಗಳಿಸುವುದು ನಮ್ಮ ಕರ್ತವ್ಯ. ನಮ್ಮ ಶಾಸಕರು, ವಿರೋಧ ಪಕ್ಷದ ಶಾಸಕರು, ನಾಯಕರು, ನಮ್ಮ ಸಚಿವ ಸಂಪುಟದ ಎಲ್ಲರನ್ನು ವಿಶ್ವಾಸಕ್ಕೆ ಪಡೆದು ರಾಜ್ಯದ ಜನರ ಅಭಿವೃದ್ಧಿಗೆ ಟೀಮ್ ಕರ್ನಾಟಕವಾಗಿ ಕೆಲಸ ಮಾಡಬೇಕು ಎಂದು ಸಿಎಂ ಡಿಕೆ ಶಿವಕುಮಾರ್ ಅವರು ಕರೆ ನೀಡಿದರು.
ವಿಧಾನಸಭೆಯಲ್ಲಿ ಸಚಿವ ಸಂಪುಟ ಸಹೋದ್ಯೋಗಿಗಳನ್ನು ಸದನಕ್ಕೆ ಪರಿಚಯಿಸಿ ಶಿವಕುಮಾರ್ ಅವರು ಶುಕ್ರವಾರ ಮಾತನಾಡಿದರು. ಜೂನ್ 3ರಂದು ನಮ್ಮ ಪಕ್ಷದ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಕೆ ಸಿ ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೆವಾಲ ಅವರು ಚರ್ಚೆ ಮಾಡಿ 139 ಶಾಸಕರ ಬೆಂಬಲದೊಂದಿಗೆ ನನ್ಮನ್ನು ಈ ಸ್ಥಾನದಲ್ಲಿ ಕೂರಿಸಿದ್ದಾರೆ. ಈ ಹಿಂದೆ ಅನೇಕ ನಾಯಕರು ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದು, ಕಳೆದ 3 ವರ್ಷಗಳಿಂದ ಸಿದ್ದರಾಮಯ್ಯ ಅವರು ಸಿಎಂ ಆಗಿ ನಾನು ಡಿಸಿಎಂ ಆಗಿ ಕೆಲಸ ಮಾಡಿದ್ದೆವು. ಇದು ಅದರ ಮುಂದುವರಿದ ಸರ್ಕಾರ ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಯಲ್ಲಿ ಜನರು ವಿವಿಧ ರೀತಿಯಲ್ಲಿ ಏನೇ ತೀರ್ಮಾನ ಮಾಡಿದ್ದರೂ ನಾವು ಒಪ್ಪಬೇಕು. ಆದರೆ ಈಗ ನನಗೆ ಸಿಕ್ಕಿರುವ ಅವಕಾಶದಲ್ಲಿ 224 ಶಾಸಕರೂ ನನ್ನ ದೃಷ್ಟಿಯಲ್ಲಿ ಒಂದೇ. ನಾನು ಈ ಸ್ಥಾನದಲ್ಲಿ ಕೂತು ಎಲ್ಲರನ್ನು ಒಟ್ಟಿಗೆ ಕರೆದೊಯ್ಯಬೇಕು ಎಂಬುದು ನನ್ನ ಆಸೆ ಎಂದು ಹೇಳಿದರು.
ಕಂಠಿ ಅವರ ಕಾಲದಿಂದ ಸಿದ್ದರಾಮಯ್ಯ ಅವರ ವರೆಗೆ ಅನೇಕ ರಾಜಕೀಯ ಮುತ್ಸದ್ಧಿಗಳು ಕಡಿದಾಳು ಮಂಜಪ್ಪ, ಕೆಂಗಲ್ ಹನುಮಂತಯ್ಯ, ದೇವರಾಜ ಅರಸು, ಗುಂಡೂರಾವ್, ನಿಜಲಿಂಗಪ್ಪ, ಬಿಡಿ ಜತ್ತಿ, ರಾಮಕೃಷ್ಣ ಹೆಗಡೆ, ವೀರೇಂದ್ರ ಪಾಟೀಲ್, ಬಂಗಾರಪ್ಪ, ವೀರಪ್ಪ ಮೋಯ್ಲಿ, ದೇವೇಗೌಡರು, ಎಸ್ ಎಂ ಕೃಷ್ಣ, ಧರಂ ಸಿಂಗ್, ಯಡಿಯೂರಪ್ಪ, ಬೊಮ್ಮಾಯಿ, ಸದಾನಂದ ಗೌಡರು, ಜಗದೀಶ್ ಶೆಟ್ಟರ್, ಸಿದ್ದರಾಮಯ್ಯ ಅವರ ಆಡಳಿತ ನೋಡಿದ್ದೇವೆ. ಎಲ್ಲರೂ ತಮ್ಮದೇ ಆದ ರೀತಿಯಲ್ಲಿ ನಾಡಿಗೆ ಕೊಡುಗೆ ನೀಡಿದ್ದಾರೆ. ನಾನು ಯಾರನ್ನು ಟೀಕೆ ಮಾಡುವುದಿಲ್ಲ ಎಂದು ಹೇಳಿದರು.
ಜೆಎಚ್ ಪಟೇಲರ ಹೃದಯ ಶ್ರೀಮಂತಿಕೆ ಬಹಳ ದೊಡ್ಡದು. ಬೇರೆಯವರ ಒತ್ತಡದಿಂದ ನನ್ನನ್ನು ಒಮ್ಮೆ ಬಂಧಿಸುವ ಸಂದರ್ಭ ಬಂದಾಗ, ನೀವು ಹೊರಗಡೆ ರಾಜಕೀಯ ಮಾಡಿಕೊಳ್ಳಿ, ನಿಮ್ಮ ರಾಜಕೀಯಕ್ಕೆ ಶಾಸಕನನ್ನು ಬಂಧಿಸುವುದಿಲ್ಲ ಎಂದು ಹೇಳಿದ್ದನ್ನು ಮುಖ್ಯಮಂತ್ರಿಗಳ ಸ್ಮರಿಸಿದರು.
ಸಿದ್ದರಾಮಯ್ಯ ಅವರು ಹಸಿವಿನಿಂದ ಜನ ಕಂಗಾಲಾಗಬಾರದು ಎಂದು ಕೊಟ್ಟ ಅನ್ನಭಾಗ್ಯ ಯೋಜನೆ ಇತಿಹಾಸ ಪುಟದಲ್ಲಿ ರಾರಾಜಿಸುತ್ತದೆ. ಅರಸು ಅವರು ಕೊಟ್ಟ ಯೋಜನೆ, ಕೃಷ್ಣ ಅವರ ಕಾಲದಲ್ಲಿ ಆದ ಐಟಿ ಬಿಟಿ ಕ್ರಾಂತಿ ಎಲ್ಲವೂ ಇತಿಹಾಸ ಪುಟ ಸೇರಿದೆ. ನೆಹರೂ ಅವರ ಕಾಲದಿಂದ ಇಲ್ಲಿಯವರೆಗೂ ಎಲ್ಲ ನಾಯಕರು ಪಕ್ಷಾತೀತವಾಗಿ ತಮ್ಮದೇ ಆದ ದಾರಿಯಲ್ಲಿ ದೇಶದ ಪ್ರಗತಿಗೆ ಕೆಲಸ ಮಾಡಿದ್ದಾರೆ.
ಸಭಾಧ್ಯಕ್ಷರ ಪೀಠ ವೈಯಕ್ತಿಕ ಸ್ಥಾನವಲ್ಲ. ನಮ್ಮ ಪಕ್ಷದ ನಾಯಕರು ಈ ಸ್ಥಾನಕ್ಕೆ ಅಭ್ಯರ್ಥಿಗಳನ್ನು ಸೂಚಿಸಿದ್ದಾರೆ ಹೊರತು ಅವರನ್ನೇ ಸಭಾಧ್ಯಕ್ಷರನ್ನಾಗಿ ಘೋಷಣೆ ಮಾಡಿಲ್ಲ. ಇದಕ್ಕೆ ವಿರೋಧ ಪಕ್ಷದ ನಾಯಕರು ಪ್ರತಿಭಟನೆ ಮಾಡುತ್ತಿದ್ದಾರೆ. ಸ್ಪೀಕರ್ ಆದವರು ಪಕ್ಷಾತೀತತರು. ಎಲ್ಲರ ಮಾತಿಗೂ ಕಿವಿಗೊಡಬೇಕು. ಹೀಗಾಗಿ ವಿರೋಧ ಪಕ್ಷದವರು ವಿರೋಧ ಮಾಡುವುದನ್ನು ಬಿಟ್ಟು ಸಭಾಧ್ಯಕ್ಷರ ಆಯ್ಕೆಯಲ್ಲಿ ಭಾಗವಹಿಸಬೇಕಿತ್ತು. ವಿರೋಧ ಮಾಡುವುದು ಅವರ ಘನತೆಗೆ ತಕ್ಕದಲ್ಲ” ಎಂದು ಅಭಿಪ್ರಾಯಪಟ್ಟರು.
ಮುಂದಿನ 25 ವರ್ಷಗಳಲ್ಲಿ ರಾಜ್ಯವನ್ನು ಹಸಿರು ರಾಜ್ಯವನ್ನಾಗಿ ಮಾಡಿ, ನೀರಿನ ಪೋಲು ತಡೆಗಟ್ಟಿ ಕೃಷಿಗೆ ಬಳಸಬೇಕು. ಪ್ರತಿಯೊಬ್ಬ ರೈತರ ಬದುಕಿಗೆ ಆಸರೆಯಾಗಬೇಕು. ತೋಟಗಾರಿಕೆ, ಹೈನುಗಾರಿಕೆ ಪರ್ಯಾಯ ರೈತರ ಆರ್ಥಿಕತೆಯಾಗಿದೆ. ನಮ್ಮ ಸರ್ಕಾರ ಗ್ರಾಮೀಣ ಭಾಗದ ಜನರು, ಮಕ್ಕಳು ಶಿಕ್ಷಣಕ್ಕಾಗಿ ನಗರಕ್ಕೆ ವಲಸೆ ಬರುವುದನ್ನು ತಪ್ಪಿಸಲು ಸಿಎಸ್ಆರ್ ನಿಧಿಯನ್ನು ಗ್ರಾಮೀಣ ಭಾಗದ ಪ್ರಾಥಮಿಕ ಶಿಕ್ಷಣಕ್ಕೆ ಮೀಸಲಿಡಲು ತೀರ್ಮಾನಿಸಿದ್ದೇವೆ. ಬೆಂಗಳೂರಿನಲ್ಲಿ 10 ಲಕ್ಷಕ್ಕೆ ಒಬ್ಬ ಪೊಲೀಸ್ ಕಮಿಷನರ್ ಮಾಡಿದ್ದರು. ಆದರೆ ಇಂದು 1.50 ಕೋಟಿ ಜನರಾಗಿದ್ದಾರೆ.
ನಮ್ಮ ಪೊಲೀಸ್ ಇಲಾಖೆ ದಕ್ಷತೆಯಿಂದ ಕೆಲಸ ಮಾಡುತ್ತಿದೆ. ರಾತ್ರಿ 2 ಗಂಟೆಯಲ್ಲಿ ಹೆಣ್ಣುಮಕ್ಕಳು ನಿರ್ಭೀತವಾಗಿ ಹೊರಗೆ ಓಡಾಡಿದರೂ ರಕ್ಷಣೆ ನೀಡುತ್ತಿದೆ. ರಾಜ್ಯವನ್ನು ಡ್ರಗ್ಸ್ ಮುಕ್ತಗೊಳಿಸಲು ಕ್ರಮ ವಹಿಸಿದ್ದೇವೆ. ಕೃಷ್ಣ ಬೈರೇಗೌಡರು ಕಂದಾಯ ಇಲಾಖೆಯಲ್ಲಿ ಕೈಗೊಂಡ ಕ್ರಾಂತಿಕಾರಿ ತೀರ್ಮಾನ ದೇಶಕ್ಕೆ ಮಾದರಿಯಾಗಿದೆ. ಇ ಖಾತೆ, ಬಿ ಟು ಎ ಖಾತಾ ಎಲ್ಲವನ್ನು ನೀಡುತ್ತಿದ್ದೇವೆ. ಗ್ಯಾರಂಟಿ ನೀಡಿದ್ದೇವೆ. ನಮ್ಮ ಸರ್ಕಾರ ಇರುವುದೇ ಜನರಿಗಾಗಿ. ಸರ್ಕಾರಿ ನೌಕರರು ಗ್ಯಾರಂಟಿ ಯೋಜನೆ ತ್ಯಜಿಸಲು ಮುಂದಾಗಿದ್ದು, ಅವರಿಗೆ ಸರ್ಕಾರದ ಪರವಾಗಿ ಅಭಿನಂದನೆ ಸಲ್ಲಿಸುತ್ತೇವೆ” ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವು ವಿರೋಧ ಪಕ್ಷದ ನಾಯಕರನ್ನು ಬಿಟ್ಟು ಕೆಲಸ ಮಾಡಲು ಆಗುವುದಿಲ್ಲ. ನಮಗೆ ಯಾರ ಬಗ್ಗೆಯೂ ಹೊಟ್ಟೆಉರಿ ಇಲ್ಲ. ಯಾರ ವಿರುದ್ಧವೂ ಈ ಅಧಿಕಾರ ದುರುಪಯೋಗ ಮಾಡಿ ತೊಂದರೆ ನೀಡಲು ನಾನು ಬಯಸುವುದಿಲ್ಲ. ಅಧಿಕಾರದ ವಿಚಾರವಾಗಿ ಅಶೋಕ್ ಅವರು ಇದೇ ಸದನದಲ್ಲಿ ಮಾತನಾಡಿದಾಗ, ನಾನು ಒಂದು ಮಾತು ಹೇಳಿದ್ದೆ. ಧೈರ್ಯಶಾಲಿ ಒಬ್ಬ ವ್ಯಕ್ತಿಯಿಂದ ಬಹುಮತ ಸಾಧ್ಯವಾಗುತ್ತದೆ. ಸಿದ್ದರಾಮಯ್ಯ ಅವರು ಸೇರಿದಂತೆ ನಾವು 136 ಜನ ಒಂದೇ ಎಂದು ಅಂತ ಹೇಳಿದ್ದೆ. ನಾನು ಅದನ್ನು ಸಾಬೀತುಪಡಿಸಿದ್ದೇನೆ. ನಾವು ಒಟ್ಟಾಗಿ ಹೋರಾಟ ಮಾಡುತ್ತೇವೆ. ಅಂತಿಮ ಫಲಿತಾಂಶವನ್ನು ಜನ ತೀರ್ಮಾನಿಸುತ್ತಾರೆ ಎಂದು ತಿಳಿಸಿದರು.
“1989ರಿಂದ 8 ಬಾರಿ ನೀವು ಸ್ಪರ್ಧೆ ಮಾಡಿದ್ದೀರಿ. ಉಗ್ರಾಣ ನಿಗಮದ ಅಧ್ಯಕ್ಷರಾಗಿ, ಇಂಧನ ಅಭಿವೃದ್ಧಿ, ಖನಿಜ ನಿಗಮದಲ್ಲಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದೀರಿ. ನಿಮ್ಮ ಹಾಗೂ ಹೆಚ್ ಕೆ ಪಾಟೀಲ್ ಅವರ ಕ್ಷೇತ್ರದ ಭೇಟಿಯ ಸಂದರ್ಭದಲ್ಲಿ, ಅಲ್ಲಿದ್ದ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಗಮನಿಸಿದೆ. ನಿಜಕ್ಕೂ ಮಾದರಿಯಾಗಿದೆ. ನಾನು ನಮ್ಮ ಕಾರ್ಯಕರ್ತರನ್ನು ಕಳುಹಿಸಿ ವೀಕ್ಷಣೆ ಮಾಡಿಸಿ, ನಮ್ಮ ಕ್ಷೇತ್ರಗಳಲ್ಲೂ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಯಿತು. ಪಾಟೀಲ್ ಅವರು ರಾಜೀವ್ ಗಾಂಧಿ ಅವರ ಹೆಸರಿನಲ್ಲಿ ಶಿಕ್ಷಣ ಸಂಸ್ಥೆ ಹೊಂದಿದ್ದಾರೆ. ವೀರಶೈವ ಸಮಾಜದ ವಿಚಾರದಲ್ಲಿ ನಮ್ಮಲ್ಲಿ ಕೆಲವು ಭಿನ್ನಾಭಿಪ್ರಾಯ ಬಂದಾಗ, ನಾನು ಅವರ ಕ್ಷೇತ್ರಕ್ಕೆ ಹೋಗಿ ರಂಭಾಪುರಿ ಶ್ರೀಗಳ ಬಳಿ ಕ್ಷಮೆ ಕೋರಿದ್ದೇನೆ.
ಈ ವಿಚಾರಕ್ಕೆ ಸಾಕಷ್ಟು ಟೀಕೆಗಳನ್ನು ಎದುರಿಸಿದೆ. ಪುಟ್ಟರಾಜ ಗವಾಯಿ ಅವರ ಅಂಧರ ಶಿಕ್ಷಣ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರ ಕುಟುಂಬ ಶಿಸ್ತಿನ ಬದುಕಿನ ಕುಟುಂಬ. ನಿಮಗೆ ಭಗವಂತ ಒಳ್ಳೆಯದು ಮಾಡಲಿ. ನೀವು ಆ ಸ್ಥಾನದಲ್ಲಿ ಕುಳಿತು ನ್ಯಾಯವನ್ನು ನೀಡಿ. ನೀವು ಕೇವಲ ನಮ್ಮನ್ನು ಮಾತ್ರವಲ್ಲ, ವಿರೋಧ ಪಕ್ಷದವರ ಧ್ವನಿ ಆಲಿಸಿ. ನೀವು ಎತ್ತರದ ಸ್ಥಾನದಲ್ಲಿದ್ದು ಇನ್ನಷ್ಟು ಎತ್ತರಕ್ಕೆ ಬೆಳೆಯಿರಿ ಎಂದು 224 ಶಾಸಕರ ಪರವಾಗಿ ಶುಭ ಹಾರೈಸುತ್ತೇನೆ” ಎಂದು ತಿಳಿಸಿದರು. ಇದನ್ನೂ ಓದಿ : ಶೀಘ್ರವೇ ರಾಜ್ಯದಲ್ಲಿ ಗುಟ್ಕಾ ನಿಷೇಧ ಆದೇಶ ವಾಪಸ್..?!
