August 25, 2026
kranthikidi.com
ತಾಜಾಸುದ್ದಿದೇಶ

ಸ್ವಾತಂತ್ರ್ಯೋತ್ಸವಕ್ಕೂ ಮುನ್ನಾ ದಿನವೇ ದೆಹಲಿ ಹೈಕೋರ್ಟ್‌, ಏರ್‌ಪೋರ್ಟ್‌ ಸ್ಥಳಗಳಿಗೆ ಬಾಂಬ್ ಬೆದರಿಕೆ..!

ನವದೆಹಲಿ : ಸ್ವಾತಂತ್ರ್ಯ ದಿನಾಚರಣೆಗೆ ಒಂದು ದಿನ ಬಾಕಿಯಿರುವಾಗಲೇ (ಶುಕ್ರವಾರ) ದೆಹಲಿಯಲ್ಲಿ 5 ಪ್ರಮುಖ ಸ್ಥಳಗಳಿಗೆ ಬಾಂಬ್‌ ಬೆದರಿಕೆ ಬಂದಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಜಾಮಾ ನಗರ್ ಹೌಸ್, ಝಂಡೆವಾಲನ್ ಕಟ್ಟಡ, ಎಂಬಿ ಸಾಕೇತ್ ಕಚೇರಿ, ಡಿಎಂ ಕಚೇರಿ, ಐಜಿಐ ವಿಮಾನ ನಿಲ್ದಾಣದ ಟರ್ಮಿನಲ್ 3 ಮತ್ತು ದೆಹಲಿ ಕಂಟೋನ್ಮೆಂಟ್‌ನ ಎಸ್‌ಡಿಎಂ ಕಚೇರಿ ಸೇರಿದಂತೆ 5 ಸ್ಥಳಗಳಿಗೆ ಬಾಂಬ್ ಬೆದರಿಕೆ ಕರೆಗಳು ಬಂದಿವೆ.

‘30 MB Blast at the Delhi High Court’ ಎಂಬ ಸಂದೇಶದೊಂದಿಗೆ ಬಂದ ಇ-ಮೇಲ್‌ನಲ್ಲಿ (E-Mail) ಮಧ್ಯಾಹ್ನ 2.11ಕ್ಕೆ ಸ್ಫೋಟ ಸಂಭವಿಸಲಿದೆ ಎಂದು ಉಲ್ಲೇಖಿಸಲಾಗಿತ್ತು. ಬೆದರಿಕೆ ಹಿನ್ನೆಲೆಯಲ್ಲಿ ಭದ್ರತಾ ಸಿಬ್ಬಂದಿ ತಕ್ಷಣ ಎಚ್ಚೆತ್ತುಕೊಂಡಿದ್ದಾರೆ. ಎಲ್ಲಾ ಸ್ಥಳಗಳಿಗೆ ಬಾಂಬ್‌ ನಿಷ್ಕ್ರಿಯ ದಳ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಯನ್ನ ಕಳುಹಿಸಿ ತೀವ್ರ ತಪಾಸಣೆ ನಡೆಸಲಾಗಿದೆ. ಆದ್ರೆ ಇಲ್ಲಿಯವರೆಗೆ ಯಾವುದೇ ಅನುಮಾನಾಸ್ಪದ ವಸ್ತುಗಳು ಕಂಡುಬಂದಿಲ್ಲ ಎಂದು ದೆಹಲಿ ಅಗ್ನಿಶಾಮಕ ಸಿಬ್ಬಂದಿ ತಿಳಿಸಿದ್ದಾರೆ.

ದೆಹಲಿ ಹೈಕೋರ್ಟ್ ಬಾರ್ ಅಸೋಸಿಯೇಷನ್‌ನ ಜಂಟಿ ಕಾರ್ಯದರ್ಶಿ ಕುನಾಲ್ ಮಲ್ಹೋತ್ರಾ ಅವರು ಬೆದರಿಕೆ ನಕಲಿಯಾಗಿರುವ ಸಾಧ್ಯತೆ ಇದೆ. ಆದಾಗ್ಯೂ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಅಗತ್ಯ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಪೊಲೀಸರು ಹಾಗೂ ಭದ್ರತಾ ತಂಡಗಳು ಹೈಕೋರ್ಟ್ ಆವರಣದಲ್ಲಿ ಪರಿಶೀಲನೆ ನಡೆಸಿವೆ ಎಂದು ಅವರು ಹೇಳಿದ್ದಾರೆ.

ಆಗಸ್ಟ್ 15ರ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ದೆಹಲಿ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಈಗಾಗಲೇ ಭದ್ರತೆ ಹೆಚ್ಚಿಸಲಾಗಿದೆ. ಪ್ರಮುಖ ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನ ನಿಯೋಜಿಸಲಾಗಿದ್ದು, ನಗರ ಪ್ರವೇಶ ಮತ್ತು ನಿರ್ಗಮನ ಮಾರ್ಗಗಳಲ್ಲಿ ವಾಹನ ತಪಾಸಣೆ ತೀವ್ರಗೊಳಿಸಲಾಗಿದೆ. ಜನಸಂದಣಿ ಹೆಚ್ಚಾಗುವ ಸಾಧ್ಯತೆ ಇರುವ ಸಾರ್ವಜನಿಕ ಸ್ಥಳಗಳ ಮೇಲೂ ಭದ್ರತಾ ಪಡೆಗಳು ನಿಗಾ ಇರಿಸಿವೆ.

ದೆಹಲಿಯ ಕೆಂಪುಕೋಟೆಯಲ್ಲಿ ಆಗಸ್ಟ್ 15ರಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನುದ್ದೇಶಿಸಿ ಭಾಷಣ ಮಾಡಲಿರುವ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿ ವಿಶೇಷ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಇದಕ್ಕೂ ಮುನ್ನ ಆಗಸ್ಟ್ 3ರಂದು ದೆಹಲಿ ಮೇಯರ್ ಕಚೇರಿಗೂ ಬಾಂಬ್ ಬೆದರಿಕೆ ಇ-ಮೇಲ್ ಬಂದಿತ್ತು. ಇದು ಮೇಯರ್ ಕಚೇರಿಗೆ ಬಂದ ಎಂಟನೇ ಬೆದರಿಕೆ ಎಂದು ದೆಹಲಿ ಮಹಾನಗರ ಪಾಲಿಕೆ ತಿಳಿಸಿತ್ತು.

ಅದೇ ದಿನ ದೆಹಲಿಯ ಹಲವು ಶಾಲೆಗಳಿಗೂ ಬಾಂಬ್ ಬೆದರಿಕೆಗಳು ಬಂದಿದ್ದವು. ಮಾಹಿತಿ ದೊರೆತ ಬಳಿಕ ದೆಹಲಿ ಪೊಲೀಸರು ಭದ್ರತಾ ತಪಾಸಣೆ ನಡೆಸಿದ್ದು, ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿರಲಿಲ್ಲ. ಅಧಿಕಾರಿಗಳ ಪ್ರಕಾರ, ಎಲ್ಲಾ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಇದನ್ನೂ ಓದಿ : 224 ಶಾಸಕರೂ ನನಗೆ ಒಂದೇ, ನನ್ನ ಅಧಿಕಾರವನ್ನು ಯಾರ ವಿರುದ್ಧವೂ ಬಳಸುವುದಿಲ್ಲ – ಸಿಎಂ ಡಿಕೆಶಿ

Related posts

ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಎಸ್‌ಆರ್ ಶ್ರೀನಿವಾಸ್ ಬೇಸರ – ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಘೋಷಣೆ..!

kknewskannada1987@gmail.com

ಓರ್ವ ನಟಿ ಬಿಟ್ಟು ಉಳಿದೆಲ್ಲರನ್ನ ಅನ್‌ಫಾಲೋ ಮಾಡಿದ ಕರಣ್ ಜೋಹರ್

Kalpana Editor

ಅದಾನಿ ಕಂಪನಿಗೆ ಗುಡ್‌ನ್ಯೂಸ್‌ – ಕ್ರಿಮಿನಲ್‌ ಆರೋಪ ಕೈಬಿಟ್ಟ ಅಮೆರಿಕ..!

kknewskannada1987@gmail.com